ಜಿಲ್ಲೆ

ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಸಹಿತ ಮಳೆ ಆರ್ಭಟ

ಹರೀಶ್​​ ಕೆ.ಸಿ.

ಬೆಂಗಳೂರು:ರಾಜಧಾನಿಯಲ್ಲಿ ಸತತ 2 ದಿನವೂ ಗುಡುಗು ಮಿಂಚು ಸಹಿತ ಮಳೆ ಮುಂದುವರಿದ್ದು, ಶುಕ್ರವಾರ ರಾತ್ರಿ ಹಾಗೂ ಶನಿವಾರ ಸುರಿದ ವರ್ಷಧಾರೆಯಿಂದ ನಗರದ ವಿವಿಧ ಕಡೆಗಳಲ್ಲಿ ಅವಾಂತರ ಸೃಷ್ಟಿಯಾಯಿತು. ತಡರಾತ್ರಿವರೆಗೂ ಮಳೆ ಸುರಿಯುತ್ತಿತ್ತು.

ಸರ್ಜಾಪುರ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದ ಪರಿಣಾಮ ಸವಾರರು ಪರದಾಡಿದರು. ಪ್ರತಿ ಬಾರಿ ಮಳೆ ಬಂದಾಗ ಇದೇ ಸಮಸ್ಯೆ ಪುನರಾವರ್ತನೆಯಾಗುತ್ತಿದ್ದರೂ ಬಿಬಿಎಂಪಿ ತಲೆಕೆಡಿಸಿಕೊಳ್ಳುತ್ತಿಲ್ಲ ಎಂದು ಸ್ಥಳಿಯರು ಆಕ್ರೋಶ ವ್ಯಕ್ತಪಡಿಸಿದರು. ಜಯನಗರದಲ್ಲಿ ಮರ ಬಿದ್ದು ಎರಡು ಕಾರುಗಳು ಜಖಂಗೊಂಡಿದ್ದವು.ಅದೃಷ್ಟವಶಾತ್​ ಕಾರಿನಲ್ಲಿದ್ದವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೆಣ್ಣೂರು ಮುಖ್ಯರಸ್ತೆಯ ವಡ್ಡರಪಾಳ್ಯದಲ್ಲಿ ಭಾರಿ ಪ್ರಮಾಣದಲ್ಲಿ ನೀರು ನಿಂತಿತ್ತು. ಇದರಿಂದಾಗಿ ವಾಹನ ಚಲಾಯಿಸಲು ಸವಾರರು ಹೈರಣಾದರು.

ಸಿಲ್ಕ್​ ಬೋರ್ಡ್​ ಜಂಕ್ಷನ್​, ಓಕುಳಿಪುರ ಅಂಡರ್​ಪಾಸ್​, ಚಿಕ್ಕಪೇಟೆ ಮೆಟ್ರೋ ಸ್ಟೇಷನ್​ ಮುಂಭಾಗ ರಸ್ತೆಯು ನೀರಿನಲ್ಲಿ ಮುಳುಗಿತ್ತು. ಅಂದಾಜು 2 ಅಡಿಯಷ್ಟು ನೀರು ನಿಂತಿದ್ದ ಪರಿಣಾಮ ವಾಹನ ಸವಾರರು ಪರದಾಡಿದರು. ಕೆ.ಆರ್​.ಮಾರುಕಟ್ಟೆ, ಚಿಕ್ಕಪೇಟೆ, ಸುಲ್ತಾನ್​ಪೇಟೆ, ಬಳೇಪೇಟೆ, ಕಾಟನ್​ಪೇಟೆ, ವಿಜಯನಗರ, ಕಾಮಾಪಾಳ್ಯ, ಮೆಜೆಸ್ಟಿಕ್​, ಮೈಸೂರು ರಸ್ತೆ, ಬಸವನಗುಡಿ, ಜೆ.ಪಿ.ನಗರ, ಮಲ್ಲೇಶ್ವರ, ಜೆ.ಸಿ.ರಸ್ತೆ ರಸ್ತೆಗಳು ಸೇರಿ ನಗರದ ಪ್ರಮುಖ ರಸ್ತೆಗಳು ಸಂಪೂರ್ಣ ಜಲಾವೃತವಾಯಿತು.ವಿಶ್ವೇಶ್ವರಯ್ಯಪುರ, ವಿದ್ಯಾಪಿಠ, ಹಗದೂರು, ಯಲಹಂಕ, ಆರ್​.ಆರ್​. ನಗರ, ವಿ.ನಾಗೇನಹಳ್ಳಿ, ಪುಲಿಕೇಶಿನಗರ, ಅರೆಕೆರೆ, ಎಚ್​ಎಸ್​ಆರ್​ ಲೇಔಟ್​, ನಾಗಪುರ, ಕಾಟನ್​ಪೇಟೆ, ಚಾಮರಾಜಪೇಟೆ, ಬಿಟಿಎಂ ಲೇಔಟ್​, ಹೂಡಿ ಸೇರಿ ನಗರ ವಿವಿಧೆಡೆ ಧಾರಾಕಾರ ಮಳೆ ಸುರಿಯಿತು.

ಹೆಬ್ಬಾಳದ ಮೇಲ್ಸುತುವೆ, ಎಸ್ಟೀಂ ಮಾಲ್​ನಿಂದ ಮೇಖ್ರಿ ವೃತ್ತದ ಕಡೆಗೆ ಒಳಬರುವ ವಾಹನಗಳು ನಿಧಾನಗತಿಯಲ್ಲಿ ಸಾಗಿದವು. ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಸಾಗುವ ಹೆಬ್ಬಾಳ ಮೇಲ್ಸೇತುವೆಯಲ್ಲಿ ವಾಹನ ದಟ್ಟಣೆ ಇತ್ತು. ಹಲವು ಕಡೆಗಳಲ್ಲಿ ಸಿಗ್ನಲ್​ ಇಲ್ಲದ ಕಾರಣ ವಾಹನಗಳು ಏಕಾಏಕಿ ನುಗ್ಗಿದ್ದರಿಂದ ವಾಹನ ದಟ್ಟಾಣೆ ಉಂಟಾಯಿತು. ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲು ಟ್ರಾಫಿಕ್​ ಪೋಲಿಸರು ಪರದಾಡಿದರು. ಹಲವು ಪ್ರದೇಶಗಳಲ್ಲಿ ವಿದ್ಯುತ್​ ಪೂರೈಕೆ ಸ್ಥಗಿತ ಹಿನ್ನೆಲೆಯಲ್ಲಿ ಬೆಳಕಿಲ್ಲದೆ ನಿವಾಸಿಗಳಿಗೆ ತೊಂದರೆಯಾಯಿತು. ಕೆಲವೆಡೆ ಮಳೆಯ ನೀರು ರಭಸದಿಂದ ಹರಿದಿದ್ದರಿಂದ ವಾಹನಗಳು ಮುಳುಗಿದವು.

ಎಲ್ಲೆಲ್ಲಿ ಅನಾಹುತ?

* ಎಲೆಕ್ಟ್ರಾನಿಕ್​ ಸಿಟಿ ಸಂಪೂರ್ಣ ಜಲಾವೃತ

* ಅರ್ಧ ಕಿ.ಮೀ.ರಸ್ತೆವರೆಗೆ ತುಂಬಿದ ನೀರು

* ವೀರಸಂದ್ರ ಸಿಗ್ನಲ್​ ವೃತ್ತ ಮುಳುಗಡೆ

* ಹೊಸೂರು-ಬೆಂಗಳೂರು ಹೆದ್ದಾರಿಯಲ್ಲಿ ಮುಳುಗಿದ ಕಾರುಗಳು

* ಹತ್ತಾರು ಕೆಲ ಮನೆಗಳಿಗೆ ನುಗ್ಗಿದ ನೀರು

* ಹೊಳೆಯಂತಾದ ಬಹುತೇಕ ರಸ್ತೆಗಳು,ಅಂಡರ್​ಪಾಸ್​

4 ದಿನ ಗುಡುಗು ಸಹಿತ ಭಾರಿ ಮಳೆ

ನಗರದಲ್ಲಿ ಸುರಿಯುತ್ತಿರುವ ಮಳೆ ಮುಂದಿನ 4 ದಿನ ಇನ್ನಷ್ಟು ತೀವ್ರಗೊಳ್ಳಲಿದೆ ಎಂದು ಹವಾಮಾನ ಇಲಾಖೆ ಮೂನ್ಸೂಚನೆ ಕೊಟ್ಟಿದೆ. ಅ.6ರಿಂದ ಅ.9ರವರೆಗೆ ಭಾರಿ ಮಳೆ ಬೀಳುವ ಸಾಧ್ಯತೆ ಇರುವುದರಿಂದ ಯೆಲ್ಲೋ ಅರ್ಲಟ್​ ನೀಡಲಾಗಿದೆ. ಸಾಮಾನ್ಯ ಮೋಡ ಕವಿದ ವಾತಾವರಣ ಇರಲಿದ್ದು, ಗುಡುಗು, ಮಿಂಚು ಸಹಿತ ಒಮ್ಮೊಮ್ಮೆ ಭಾರಿ ಮಳೆ ಸಂಭವ ಇದೆ ಎಂದು ಇಲಾಖೆ ಮಾಹಿತಿ ನೀಡಿದೆ.

ಎಲ್ಲೆಲ್ಲಿ ಎಷ್ಟು ಮಳೆ?

ಪ್ರದೇಶ ಮಿಮೀಗಳಲ್ಲಿ

ಎಚ್​ಎಎಲ್​ ಏರ್​ಪೋರ್ಟ್​ 40

ಮಾರತ್ತಹಳ್ಳಿ 33

ಬೆಳಂದೂರು 24

ಹೊಯ್ಸಳನಗರ 15

ವಿಜ್ಞಾನನಗರ 12

ಪಾಲಿಕೆ ಕಂಟ್ರೋಲ್​ ರೂಂಗೆ ಮಳೆ ಸಂಬಂಧ ಸ್ವೀಕರವಾದ ದೂರುಗಳನ್ನು ತಕ್ಷಣ ಬಗೆಹರಿಸಲು ಅಧಿಕಾರಿಗಳಿಗೆ ಈಗಾಗಲೇ ಸೂಚಿಸಿದ್ದೇನೆ. ಒಣಗಿದ, ಬೀಳುವ ಹಂತದಲ್ಲಿರುವ ಮರಗಳನ್ನು ತೆರವು ಮಾಡಲಾಗುತ್ತಿದೆ. ಕೆಲವೆಡೆ 30&40 ಮಿಮೀ ಮಳೆಯಾದರೆ, ಇನ್ನೂ ಕೆಲವಡೆ ಸಾಧಾರಣವಾಗಿ ಬೀಳುತ್ತಿದೆ. ಒಟ್ಟಿನಲ್ಲಿ ಹಿಂಗಾರು ಮಳೆ ಎದುರಿಸಲು ನಾವೆಲ್ಲರೂ ಸಜ್ಜಾಗಿದ್ದೇವೆ.

| ತುಷಾರ್​ ಗಿರಿನಾಥ್​, ಬಿಬಿಎಂಪಿ ಮುಖ್ಯ ಆಯುಕ್ತ.

ದಕ್ಷಿಣ ಕರ್ನಾಟಕದಲ್ಲಿ ವಾರ್ಷಿಕ 1,019 ಮಿಮೀ ಮಳೆಯಾಗುತ್ತದೆ. ಜೂನ್​ನಿಂದ ಸೆಪ್ಟೆಂಬರ್​ವರೆಗಿನ ಮುಂಗಾರು ಅವಧಿಯಲ್ಲಿ 809 ಮಿಮೀ ಸುರಿದರೆ, ಹಿಂಗಾರಿನಲ್ಲಿ 210 ಮಿಮೀ ಬೀಳಲಿದೆ.ಬೆಂಗಳೂರಿನಲ್ಲಿ ಬೆಂಗಳೂರಿನಲ್ಲಿ ವಾರ್ಷಿಕ 977 ಮಿಮೀ ಮಳೆ ಸುರಿಯುತ್ತದೆ. ಅಕ್ಟೋಬರ್​ನಿಂದ ಡಿಸೆಂಬರ್​ ಅವಧಿವರೆಗೆ ಅಧಿಕ ಸೈಕ್ಲೋನ್​ ಸೃಷ್ಟಿಯಾಗುವ ಹಿನ್ನೆಲೆಯಲ್ಲಿ ಹೆಚ್ಚು ಮಳೆ ಬರುವ ನಿರೀಕ್ಷೆ ಇದೆ.

| ಸಿ.ಎಸ್​.ಪಾಟೀಲ್​. ಹವಾಮಾನ ಇಲಾಖೆ ನಿರ್ದೇಶಕ.