ಬೆಂಗಳೂರು: ಎಂತೆಂಥ ಕಿರಿಕ್ ಜನ ಇರ್ತಾರೆ ನೋಡಿ... ಆ ಏರಿಯಾ ಪೂರ್ತಿ ಆಕೆಯದ್ದೇ ದರ್ಬಾರ್! ಅಲ್ಲಿಗೆ ದ್ವಿಚಕ್ರ ವಾಹನ ಬಿಟ್ಟು ಬೇರೆ ಯಾವುದೇ ವಾಹನ ತರುವಂತಿಲ್ಲ, ಕಾರು ತಂದು ರಸ್ತೆಬದಿ ನಿಲ್ಲಿಸಿದ್ರೆ ಬೆಳಗ್ಗೆ ಆಗೋದ್ರೊಳಗೆ ಸಂಪೂರ್ಣ ಜಖಂ... ಆಕೆಯ ಪರ್ಮಿಷನ್ ಇಲ್ದೆ ಯಾರೂ ಏರಿಯಾಗೆ ಎಂಟ್ರಿ ಕೊಡುವ ಹಾಗಿಲ್ಲ. ಪ್ರಶ್ನೆ ಮಾಡಿದ್ರೆ ಗೂಂಡಾಗಳನ್ನ ಕರೆಸಿ ಗಲಾಟೆ ಮಾಡಿಸುತ್ತಾಳೆ, ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು ಮತ್ತು ರಾಡ್ಗಳನ್ನು ಬೀಸಿ ದಾಂಧಲೆ ನಡೆಸುತ್ತಾಳೆ...
ಇದು ಬೆಂಗಳೂರಿನ ಥಣಿಸಂದ್ರದ ಸಾರಾಯಿಪಾಳ್ಯದಲ್ಲಿ ಮೇರಿ ಗೀತಾಳ ದರ್ಬಾರ್.
ಮೇರಿ ಗೀತಾ, ಗೂಂಡಾಗಳನ್ನ ಕರೆಸಿ ಸ್ಥಳೀಯರಿಗೆ ತೊಂದರೆ ಕೊಡುತ್ತಿರುವ, ಅಕ್ಕಪಕ್ಕದ ಮನೆಗಳ ಮೇಲೆ ಕಲ್ಲು-ರಾಡ್ ಬೀಸಿರುವ, ಅವಾಚ್ಯ ಶಬ್ದಗಳಿಂದ ನಿಂದಿಸಿ ಬೆದರಿಕೆ ಹಾಕುತ್ತಿರುವ ದೃಶ್ಯ ಸಿಸಿ ಕ್ಯಾಮರಾ ಮತ್ತು ಸ್ಥಳೀಯರ ಮೊಬೈಲ್ನಲ್ಲಿ ಸೆರೆಯಾಗಿದೆ. ಈಕೆಯ ವರ್ತನೆಗೆ ಬೇಸತ್ತ ಏರಿಯಾ ನಿವಾಸಿ ರೇಖಾ ಎಂಬುವವರು ಹೆಣ್ಣೂರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ.