ವಿಜಯವಾಣಿ ಸುದ್ದಿಜಾಲ ಕಾರ್ಕಳ
ಕಾರ್ಕಳ- ಧರ್ಮಸ್ಥಳ ಹೆದ್ದಾರಿಯ ಹೊಸ್ಮಾರು ಪಾಜೆಗುಡ್ಡೆ ಎಂಬಲ್ಲಿ ಸೋಮವಾರ ಬೈಕ್ ಹಾಗೂ ಲಾರಿ ನಡುವೆ ಭೀಕರ ಅಪಘಾತ ನಡೆದಿದ್ದು, ಒಂದೇ ಕುಟುಂಬದ ನಾಲ್ವರು ಮೃತಪಟ್ಟಿದ್ದಾರೆ.
ವೇಣೂರಿನಿಂದ ನಲ್ಲೂರಿನಲ್ಲಿರುವ ಮನೆಗೆ ಪತಿ, ಪತ್ನಿ ಹಾಗೂ ಮಕ್ಕಳು ಬೈಕ್‌ನಲ್ಲಿ ಸಂಚರಿಸುತ್ತಿದ್ದ ಸಂದರ್ಭ ಕಾರ್ಕಳ ಕಡೆಯಿಂದ ಗುರುವಾಯನಕೆರೆಯತ್ತ ತೆರಳುತ್ತಿದ್ದ ಲಾರಿ ಡಿಕ್ಕಿ ಹೊಡೆದಿದ್ದು, ನಲ್ಲೂರು ಗ್ರಾಮದ ಸುರೇಶ್ ಆಚಾರ್ಯ(36), ಪುತ್ರಿಯರಾದ ಸುಮೀಕ್ಷಾ(7), ಸುಶ್ಮಿತಾ(5) ಸ್ಥಳದಲ್ಲೇ ಮೃತಪಟ್ಟಿದ್ದು, ಪುತ್ರ ಸುಶಾಂತ್(2) ಆಸ್ಪತ್ರೆಗೆ ಸಾಗಿಸುವಾಗ ದಾರಿಮಧ್ಯೆ ಮೃತಪಟ್ಟಿದ್ದಾನೆ. ಘಟನೆಯಲ್ಲಿ ಮೃತ ಸುರೇಶ್ ಆಚಾರ್ಯ ಪತ್ನಿ ಮೀನಾಕ್ಷಿ(32) ಗಂಭೀರ ಗಾಯಗೊಂಡಿದ್ದು, ಕಾರ್ಕಳ ಸರ್ಕಾರಿ ಆಸ್ಪತ್ರೆಗೆ ದಾಖಲಾಗಿದ್ದಾರೆ.
ವೇಣೂರು ಗ್ರಾಪಂ ವ್ಯಾಪ್ತಿಯ ಕರಿಮಣೇಲುವಿಲ್ಲಿ ಮಹಾಲಯ ಕಾರ್ಯಕ್ರಮ ಮುಗಿಸಿ ಐವರೂ ಒಂದೇ ಬೈಕ್‌ನಲ್ಲಿ ಕಾರ್ಕಳದ ನಲ್ಲೂರಿನಲ್ಲಿರುವ ತನ್ನ ಮನೆಗೆ ವಾಪಸಾಗುತ್ತಿದ್ದಾಗ ಅವಘಡ ನಡೆದಿದೆ. ಬೈಕ್ ಮುಂಭಾಗದಲ್ಲಿ ಮೂವರು ಮಕ್ಕಳು ಹಾಗೂ ಹಿಂಭಾಗದಲ್ಲಿ ಪತ್ನಿಯನ್ನು ಕುಳ್ಳಿರಿಸಿಕೊಂಡು ಬೈಕ್ ಚಲಾಯಿಸುತ್ತಿದ್ದ ಸಂದರ್ಭ ಎದುರಿದ್ದ ಕಾರನ್ನು ಓವರ್‌ಟೇಕ್ ಮಾಡುತ್ತಿದ್ದಾಗ ಮುಂಭಾಗದಿಂದ ಲಾರಿ ಬಂದಿದ್ದು, ಲಾರಿಗೆ ಡಿಕ್ಕಿಯಾಗುವುದನ್ನು ತಪ್ಪಿಸಲು ಯತ್ನಿಸಿದಾಗ ಬೈಕ್‌ನಲ್ಲಿದ್ದವರು ರಸ್ತೆಗೆ ಎಸೆಯಲ್ಪಟ್ಟಿದ್ದಾರೆ. ಲಾರಿ ಚಾಲಕ ಹೇಮಂತ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸುರೇಶ್ ಆಚಾರ್ಯ ನಲ್ಲೂರಿನ ನಿವಾಸಿಯಾಗಿದ್ದು, ಕಮ್ಮಾರಿಕೆ ವೃತ್ತಿ ಮಾಡುತ್ತಿದ್ದರು. ವೇಣೂರಿನ ಗಾಂಧಿನಗರ ನಿವಾಸಿ ಮೀನಾಕ್ಷಿ ಅವರನ್ನು ವಿವಾಹವಾಗಿ ವೇಣೂರಿನಲ್ಲೇ ವಾಸವಿದ್ದರು. ಪತ್ನಿ ಗೃಹಿಣಿಯಾಗಿದ್ದು, ಮಕ್ಕಳು ವೇಣೂರಿನಲ್ಲೇ ಶಾಲೆಗೆ ಹೋಗುತ್ತಿದ್ದಾರೆ. ಕುಟುಂಬ ಸಮೇತರಾಗಿ ನಲ್ಲೂರಿನ ಮನೆಗೆ ಬಂದು ಹೋಗುತ್ತಿದ್ದರು. ಸ್ಥಳಿಯರಾದ ಸುಮಿತ್ ನಲ್ಲೂರು ತನ್ನ ಯುವಕರ ತಂಡದೊಂದಿಗೆ ಖಾಸಗಿ ಅಂಬುಲೆನ್ಸ್‌ನೊಂದಿಗೆ ಸ್ಥಳಕ್ಕೆ ಧಾವಿಸಿ ಅಲ್ಲಿದ್ದವರ ಸಹಾಯದಿಂದ ಅಪಘಾತಗೊಂಡವರನ್ನು ಎತ್ತಿ ಅಂಬುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆತಂದರು. ಈ ಪೈಕಿ ಸುಮೀಕ್ಷಾಳನ್ನು ಕರೆತರುವ ವೇಳೆ ಆಕೆ ಉಸಿರಾಡುತ್ತಿದ್ದು, ನಗರದ ರೋಟರಿ ಕೆಎಂಸಿ ಖಾಸಗಿ ಆಸ್ಪತ್ರೆಗೆ ಕರೆತಂದ ವೇಳೆ ಅಲ್ಲಿನ ವೈದ್ಯರು ಮಗುವನ್ನು ಬದುಕಿಸುವ ಪ್ರಯತ್ನ ನಡೆಸಿದರೂ ಫಲಕಾರಿಯಾಗಲಿಲ್ಲ.
ಈಗಾಗಲೇ ಇಲ್ಲಿನ ಪಾಜೆಗುಡ್ಡೆ ರಸ್ತೆಯಲ್ಲಿ ಅನೇಕ ಅಪಘಾತಗಳು ನಡೆದು ಸಾವುನೋವು ಸಂಭವಿಸಿದೆ. ಪಾಜೆಗುಡ್ಡೆ ರಸ್ತೆ ಅಪಾಯಕಾರಿ ತಿರುವು ಹಾಗೂ ಇಳಿಜಾರು ಪ್ರದೇಶವಾಗಿದ್ದು, ಕಳೆದ ಐದು ವರ್ಷಗಳಲ್ಲಿ ಹದಿನೈದಕ್ಕೂ ಹೆಚ್ಚು ಅಪಘಾತಗಳು ಸಂಭವಿಸಿ ಹತ್ತಕ್ಕೂ ಹೆಚ್ಚಿನ ಪ್ರಾಣಹಾನಿಯಾಗಿದೆ. ಕಾರ್ಕಳ ಗ್ರಾಮಾಂತರ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪ್ರಕರಣ ದಾಖಲಿಸಿದ್ದಾರೆ.