ಧಾರವಾಡ: ಹತ್ತು ತಿಂಗಳ ಮಗುವೊಂದು ಅನುಮಾನಾಸ್ಪದವಾಗಿ ಮೃತಪಟ್ಟಿದ್ದು, ತಾಯಿ-ತಂದೆಯಿಂದ ಪರಸ್ಪರ ಕೊಲೆ ಆರೋಪ ವ್ಯಕ್ತವಾಗಿದೆ. ಧಾರವಾಡ ತಾಲೂಕಿನ ಗೊಂಗಡಿಕೊಪ್ಪ ಗ್ರಾಮದಲ್ಲಿ ಈ ಘಟನೆ ಸಂಭವಿಸಿದ್ದು, ತನ್ವೀರ್ ಅಗಸಿಮನಿ ಎಂಬ ಹತ್ತು ತಿಂಗಳ ಮಗು ಸಾವಿಗೀಡಾಗಿದೆ.
ತಂದೆ ಮಹಮದ್ ಅಲಿ ಹಾಗೂ ತಾಯಿ ಸಮ್ರೀನ್ ಮಗುವಿನ ಸಾವಿನ ಕುರಿತಂತೆ ಪರಸ್ಪರ ಆರೋಪ ಹೊರಿಸುತ್ತಿದ್ದಾರೆ. ನಿನ್ನೆ ಏಕಾಏಕಿ ಅಸ್ವಸ್ಥಗೊಂಡಿದ್ದ ಮಗುವನ್ನು ಜಿಲ್ಲಾಸ್ಪತ್ರೆಗೆ ತರುವಷ್ಟರಲ್ಲಿ ಅದು ಮೃತಪಟ್ಟಿತ್ತು. ಮಗುವಿನ ಶವದಿಂದ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ವಿಷಪ್ರಾಶನ ಮಾಡಿಸಿರುವ ಶಂಕೆಯೂ ಮೂಡಿದೆ.
ಇದನ್ನೂ ಓದಿ: ಮನೆ ಬೀಗ-ಬಾಗಿಲು ಮುರಿಯದೆ, ಕನ್ನ ಹಾಕದೆ ಕಳವು ಮಾಡುತ್ತಿದ್ದ ಕಳ್ಳನ ಬಂಧನ; ಸಂಬಂಧಿಕರ ಮನೆಯನ್ನೂ ಬಿಡಲಿಲ್ಲ..
ತಂದೆ-ತಾಯಿಯ ಜಗಳದಿಂದಾಗಿ ಮಗುವಿನ ಶವ ಜಿಲ್ಲಾಸ್ಪತ್ರೆಯ ಶವಗಾರದಲ್ಲೇ ಉಳಿದಿದೆ. ಪ್ರಕರಣ ಧಾರವಾಡ ಗ್ರಾಮೀಣ ಪೊಲೀಸ್ ಠಾಣೆ ಮೆಟ್ಟಿಲನ್ನೇರಿದ್ದು, ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ತಂದೆ-ತಾಯಿ ಇಬ್ಬರನ್ನೂ ವಿಚಾರಣೆ ನಡೆಸುತ್ತಿರುವ ಪೊಲೀಸರು, ಮಗುವಿನ ಶವವನ್ನು ಮರಣೋತ್ತರ ಪರೀಕ್ಷೆಗೆ ಒಳಪಡಿಸಿ, ಎಫ್ಎಸ್ಎಲ್ಗೆ ಕಳಿಸಲು ನಿರ್ಧರಿಸಿದ್ದಾರೆ. ಅಲ್ಲಿಂದ ವರದಿ ಬಂದ ಬಳಿಕ ಮುಂದಿನ ಕ್ರಮಕೈಗೊಳ್ಳಲಿದ್ದಾರೆ.