ಬದಿಯಡ್ಕ: ಆರಾಧನಾಲಯಗಳು ನಾಡಿನ ಶಕ್ತಿ ದ್ಯೋತಕಗಳಾಗಿವೆ. ದೇವಾಲಯಗಳ ಪುನರುಜ್ಜೀವನ ಜನಜೀವನವನ್ನು ಆಧ್ಯಾತ್ಮಿಕ, ಬೌದ್ಧಿಕ ನೆಲೆಗಟ್ಟಿನಲ್ಲಿ ಸದೃಢಗೊಳಿಸುವುದರೊಂದಿಗೆ ಶ್ರೇಯಸ್ಸನ್ನು ತರುತ್ತದೆ. ಜನರ ಶ್ರದ್ಧೆ, ಆಸಕ್ತಿಗಳಿಂದ ಜೀರ್ಣೋದ್ಧಾರ ಯಶಸ್ವಿಯಾಗುತ್ತದೆ ಎಂದು ಜಗದ್ಗುರು ಶಂಕರಾಚಾರ್ಯ ಶ್ರೀ ಎಡನೀರು ಮಠದ ಶ್ರೀ ಸಚ್ಚಿದಾನಂದ ಭಾರತೀ ಸ್ವಾಮೀಜಿ ಹೇಳಿದರು.
ಭಾನುವಾರ ಮಾನ್ಯ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಬ್ರಹ್ಮಕಲಶೋತ್ಸವ ಸಮಿತಿ ರಚನಾ ಸಭೆಯಲ್ಲಿ ಅವರು ಆಶೀರ್ವಚನ ನೀಡಿ ಮಾತನಾಡಿದರು.
2025ರ ಮಾರ್ಚ್1ರಿಂದ 9ರವರೆಗೆ ಕಾರ್ಮಾರು ಕ್ಷೇತ್ರ ಬ್ರಹ್ಮಕಲಶೋತ್ಸವ ನಡೆಯಲಿದೆ. ಅತಿಶೀಘ್ರದಲ್ಲಿ ದೇವಳದ ಬ್ರಹ್ಮಕಲಶೋತ್ಸವವನ್ನು ನಡೆಸಿ ದೇವರನ್ನು ಮೂಲಾಲಯದಲ್ಲಿ ಪ್ರತಿಷ್ಠಾಪಿಸಬೇಕೆಂಬ ಊರಿನ ಜನರ ಮನಸ್ಥಿತಿಯ ಫಲವಾಗಿ ಶ್ರೀಕ್ಷೇತ್ರವು ಸುಂದರವಾಗಿ ರೂಪುಗೊಳ್ಳುತ್ತಿದೆ ಎಂದರು. ಧಾರ್ಮಿಕ ಮುಂದಾಳು ಬಿ.ವಸಂತ ಪೈ ಬದಿಯಡ್ಕ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಮುಂಡಪ್ಪಳ್ಳ ಶ್ರೀ ರಾಜರಾಜೇಶ್ವರೀ ದೇವಸ್ಥಾನದ ಅಧ್ಯಕ್ಷ ಕೆ.ಕೆ.ಶೆಟ್ಟಿ ಉದ್ಘಾಟಿಸಿದರು. ಉದ್ಯಮಿ ಮಧುಸೂದನ ಆಯರ್ ಮಂಗಳೂರು, ಮಲಬಾರ್ ದೇವಸ್ವಮ್ ಬೋರ್ಡ್ ಎಸಿ ಮೆಂಬರ್ ಶಂಕರ ರೈ ಮಾಸ್ತರ್, ಮಲಬಾರ್ ದೇವಸ್ವಂ ಬೋರ್ಡ್, ಎ.ಸಿ.ಸದಸ್ಯ ಶಂಕರ ರೈ ಮಾಸ್ತರ್, ಡಾ.ನರೇಶ್ ರೈ ದೆಪ್ಪುಣಿಗುತ್ತು, ಬ್ರಹ್ಮಶ್ರೀ ರವೀಶ ತಂತ್ರಿ ಕುಂಟಾರು, ಬ್ರಹ್ಮಶ್ರೀ ದೇಲಂಪಾಡಿ ಗಣೇಶ ತಂತ್ರಿ, ಜಯದೇವ ಖಂಡಿಗೆ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ನರಸಿಂಹ ಭಟ್ ಕಾರ್ಮಾರು, ಶ್ರೀಕೃಷ್ಣ ಭಟ್ ಪುದುಕೋಳಿ, ಕೃಷ್ಣಮೂರ್ತಿ ಪುದುಕೋಳಿ ಉಪಸ್ಥಿತರಿದ್ದರು. ಮಹೇಶ್ ವಳಕ್ಕುಂಜ ಸ್ವಾಗತಿಸಿ, ವಿಜಯಕುಮಾರ್ ಮಾನ್ಯ ವಂದಿಸಿದರು.
ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷರಾಗಿ ಮಧುಸೂದನ ಆಯರ್ ಮಂಗಳೂರು, ಕಾರ್ಯದರ್ಶಿಯಾಗಿ ಮಹೇಶ್ ವಳಕ್ಕುಂಜ, ಉಪಸಮಿತಿಗಳನ್ನು ಹಾಗೂ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.