ಜಿಲ್ಲೆ

ತಂತ್ರಜ್ಞಾನ ಯುಗದಲ್ಲಿ ಹೆಚ್ಚು ಕ್ರಿಯಾಶೀಲರಾಗಿರಿ

ಎನ್.ವೆಂಕಟೇಶ್

ಮಕ್ಕಳಿಗೆ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ. ಶಿವಕುಮಾರ್ ಸಲಹೆ ಆತ್ಮಸ್ಥೈರ್ಯ ವಿದ್ದರೆ ಸಾಧನೆ ಸುಲಭ

ಗುಡಿಬಂಡೆ: ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಮಕ್ಕಳು ಕಠಿಣ ಪರಿಶ್ರಮದೊಂದಿಗೆ ಓದಿದಾಗ ಯಶಸ್ಸು ಗಳಿಸಲು ಸಾಧ್ಯವಿದೆ. ಬಾಲ್ಯದಿಂದಲೇ ಆತ್ಮಸ್ಥೈರ್ಯ ಬೆಳೆಸಿಕೊಂಡಾಗ ಸಾಧನೆ ಸುಲಭವಾಗಲಿದೆ ಎಂದು ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕ ಡಾ.ಶಿವಕುಮಾರ್ ಕಿವಿಮಾತು ಹೇಳಿದರು.

ತಾಲೂಕಿನ ಸೋಮೇನ ಹಳ್ಳಿ ಯಲ್ಲಿರುವ ಪಿಎಂಶ್ರೀ ಶಾಲೆಯ ವಿದ್ಯಾರ್ಥಿ ಗಳಿಗೆ ಸೋಮವಾರ ಹಮ್ಮಿ ಕೊಂಡಿದ್ದ ವಿಶೇಷ ಉಪನ್ಯಾಸ ಕಾರ್ಯ ಕ್ರಮದಲ್ಲಿ ಮಾತನಾಡಿ, ತಂತ್ರಜ್ಞಾನ ಯುಗದಲ್ಲಿ ಮಕ್ಕಳು ಹೆಚ್ಚು ಕ್ರಿಯಾಶೀಲರಾಗಿರಬೇಕು. ಅಂಗವೈಕಲ್ಯ ಮಕ್ಕಳೂ ದೊಡ್ಡಮಟ್ಟದ ಸಾಧನೆ ಮಾಡುತ್ತಾರೆ. ಅದಕ್ಕೆ ಅವರಲ್ಲಿರುವ ಆತ್ಮಸ್ಥೈರ್ಯ ಕಾರಣ ಎಂದರು. ಯಾವುದೇ ಕಾರಣಕ್ಕೂ ಮಕ್ಕಳು ಮೊಬೈಲ್, ಇಂಟರ್‌ನೆಟ್, ಟಿವಿಗಳ ದಾಸರಾಗಬಾರದು. ಶಿಕ್ಷಣಕ್ಕೆ ತಂತ್ರಜ್ಞಾನವೂ ಮುಖ್ಯವಾಗಿದ್ದು, ಮೊಬೈಲ್, ಇಂಟರ್‌ನೆಟ್ ಬಳಕೆ ಕೇವಲ ಕಲಿಕೆಗೆ ಬೇಕಾದ ಮಾಹಿತಿ ಪಡೆಯಲಷ್ಟೇ ಸೀಮಿತವಾಗಬೇಕು ಎಂದರು.

ಪಿಎಂಶ್ರೀ ಶಾಲೆ ಮುಖ್ಯಶಿಕ್ಷಕ ನಾಗಲಿಂಗಪ್ಪ ಮಾತನಾಡಿ, ಶಾಲೆಯಿಂದ ಮಕ್ಕಳಿಗೆ ಸಾಕಷ್ಟು ಸೌಲಭ್ಯಗಳು ಇದ್ದು, ಸದ್ಬಳಕೆ ಮಾಡಿಕೊಳ್ಳಬೇಕು. ರಾಷ್ಟ್ರಪ್ರಶಸ್ತಿ ಪಡೆದ ಶಿವಕುಮಾರ್ ಅವರು ಶಾಲೆಯ ಮಕ್ಕಳಿಗೆ ಪ್ರೋತ್ಸಾಹದಾಯಕ ಮಾತುಗಳನ್ನಾಡಿರುವುದು ಸಂತಸದ ವಿಚಾರ ಎಂದರು.

ಶಿಕ್ಷಕರಾದ ಶ್ರೀನಿವಾಸ್, ರಾಜಶೇಖರ್, ರಾಮಕೃಷ್ಣ, ಮನೋಹರ್ ಇದ್ದರು.