ಅಂಗನವಾಡಿಗಳಿಗಿಲ್ಲ ಸ್ವಂತ ಸೂರು

FotoJet
Published on

1261 ಕೇಂದ್ರಗಳಿಗಿದೆ ಕಟ್ಟಡ, ಬಾಡಿಗೆ ಕೊಠಡಿಯಲ್ಲಿವೆ 367 ಕೇಂದ್ರ ಮೇಲ್ದರ್ಜೆಗೇರಿಸಲು ನಿರ್ಲಕ್ಷ್ಯ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಮೂಲಸೌಕರ್ಯ ಕೊರತೆ ನಡುವೆ ದುಬಾರಿ ಬಾಡಿಗೆ ತೆತ್ತು ಅಂಗನವಾಡಿ ಕೇಂದ್ರಗಳು ಕಾರ್ಯ ನಿರ್ವಹಿಸುತ್ತಿವೆ.

ಜಿಲ್ಲೆಯಲ್ಲಿರುವ 2014 ಅಂಗನವಾಡಿ ಕೇಂದ್ರಗಳ ಪೈಕಿ 1261 ಮಾತ್ರ ಸ್ವಂತ ಕಟ್ಟಡಗಳನ್ನು ಹೊಂದಿದ್ದು, 168 ಪಂಚಾಯಿತಿ ಕಟ್ಟಡಗಳಲ್ಲಿ, 263 ಶಾಲಾ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಉಳಿದಂತೆ ಬರೋಬ್ಬರಿ 367 ಕೇಂದ್ರಗಳು ಬಾಡಿಗೆ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿವೆ.

ವಿವಿಧ ಯೋಜನೆ ಅನುಷ್ಠಾನಗೊಳಿಸುತ್ತಿರುವ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರ ಮೂಲಕ ಮಹಿಳೆಯರು ಮತ್ತು ಮಕ್ಕಳಿಗೆ ಸವಲತ್ತು ಒದಗಿಸುತ್ತಿದೆ. ಬಾಣಂತಿಯರು ಮತ್ತು ಗರ್ಭಿಣಿಯರಿಗೆ ಪೌಷ್ಟಿಕ ಆಹಾರ ವಿತರಣೆ, ಕೇಂದ್ರಗಳಲ್ಲಿ ಕಲಿಕೆ ಜತೆಗೆ ಮಕ್ಕಳಿಗೆ ಮೊಟ್ಟೆ, ಪೌಷ್ಟಿಕ ಆಹಾರ ಪೂರೈಕೆ, ಲಸಿಕಾಕರಣ ಮತ್ತು ಆರೋಗ್ಯ ಸೇವೆಯ ಬಗ್ಗೆ ಜಾಗೃತಿ ಸೇರಿ ವಿವಿಧ ಚಟುವಟಿಕೆ ನಡೆಯುತ್ತಿದೆ. ಆದರೆ, ಕೇಂದ್ರಗಳನ್ನು ಮೇಲ್ದರ್ಜೆಗೇರಿಸಿ ಅಗತ್ಯ ಸೌಕರ್ಯ ಒದಗಿಸುವಲ್ಲಿ ಮಾತ್ರ ಹಿನ್ನಡೆ ಕಂಡುಬಂದಿದೆ.

84,318 ಲಾನುಭವಿಗಳು

ಜಿಲ್ಲೆಯಲ್ಲಿರುವ ಅಂಗನವಾಡಿ ಕೇಂದ್ರಗಳ ವ್ಯಾಪ್ತಿಯಲ್ಲಿ 84,318 ಲಾನುಭವಿಗಳನ್ನು ಗುರುತಿಸಲಾಗಿದೆ. ಇದರಲ್ಲಿ ಆರು ತಿಂಗಳಿಂದ 3 ವರ್ಷದವರೆಗಿನ 42537 ಮಕ್ಕಳು, ಹಾಗೆಯೇ 3 ವರ್ಷದಿಂದ 6 ವರ್ಷದವರೆಗಿನ 26,616 ಮಕ್ಕಳು, 15,165 ಗರ್ಭಿಣಿ ಮತ್ತು ಬಾಣಂತಿಯರು ಸೇರಿದ್ದಾರೆ.

ಹುದ್ದೆಗಳ ಖಾಲಿ

ಅಂಗನವಾಡಿ ಕೇಂದ್ರಗಳಿಗೆ ಮಂಜೂರಾಗಿರುವ 3928 ಹುದ್ದೆಗಳ ಪೈಕಿ 3571 ಹುದ್ದೆಗಳು ಭರ್ತಿಯಾಗಿವೆ. 357 ಹುದ್ದೆಗಳು ಖಾಲಿ ಇವೆ. ಇವುಗಳ ಭರ್ತಿಗಾಗಿ ಈಗಾಗಲೇ ಪ್ರಕಟಣೆ ಹೊರಡಿಸಿದ್ದು ಜಿಲ್ಲಾಮಟ್ಟದ ಆಯ್ಕೆ ಸಮಿತಿ ನಿಯಮಾನುಸಾರ ದಾಖಲೆಗಳ ಪರಿಶೀಲನೆ ಮತ್ತು ನೇಮಕಾತಿಯ ಪ್ರಕ್ರಿಯೆ ಮುಗಿಸಲು ಜಿಲ್ಲಾಧಿಕಾರಿಗಳಿಗೆ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮನವಿ ಮಾಡಿದೆ.

ಸಮಸ್ಯೆ ಹಲವು

ಅಂಗನವಾಡಿ ಕೇಂದ್ರಗಳನ್ನು ಹಲವು ಸಮಸ್ಯೆಗಳು ಬಾಧಿಸುತ್ತಿವೆ. ಹಿಂದೆ ಮಾತೃವಂದನಾ ಯೋಜನೆಗೆ ಚಾಲನೆ ನೀಡಿದ ಸಂದರ್ಭದಲ್ಲಿ ಶಿಥಿಲಾವಸ್ಥೆ ಮತ್ತು ಕಿರಿದಾದ ಕಟ್ಟಡಗಳಲ್ಲಿನ ಪರಿಸ್ಥಿತಿಯು ಮುಜುಗರಕ್ಕೀಡು ಮಾಡಿ, ಲಾನುಭವಿಗಳು ಸವಲತ್ತುಗಳನ್ನು ಸದ್ವಿನಿಯೋಗಪಡಿಸಿಕೊಳ್ಳುವಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ಪೌಷ್ಟಿಕ ಆಹಾರ ಪದಾರ್ಥಗಳನ್ನು ಮನೆಗೆ ಕಳುಹಿಸುವ ಕೆಲಸ ಈಗಲೂ ನಿಂತಿಲ್ಲ. ಕೆಲವೆಡೆ ದಾಖಲೆಯ ಅಂಕಿ ಅಂಶಗಳಿಗೆ ಮಾತ್ರ ಲಾನುಭವಿಗಳ ಸಂಖ್ಯೆ ತೃಪ್ತಿದಾಯಕವಾಗಿವೆ. ಮಕ್ಕಳ ಹಾಜರಾತಿ ಪ್ರಮಾಣ ಕುಸಿಯುತ್ತಿದ್ದು ದುಬಾರಿ ಹಣ ಕೊಟ್ಟು ಖಾಸಗಿ ಶಿಕ್ಷಣ ಸಂಸ್ಥೆಗಳಿಗೆ ದಾಖಲಿಸುವ ಪ್ರಕ್ರಿಯೆ ಹಚ್ಚಾಗುತ್ತಿದೆ. ಮತ್ತೊಂದೆಡೆ ಒಂದು ಚಿಕ್ಕ ಕೊಠಡಿಯಲ್ಲಿ ಅಡುಗೆ ತಯಾರಿಕೆ ಪರಿಕರಗಳು, ಕಲಿಕೋಪಕರಣಗಳು, ಆಸನದ ವ್ಯವಸ್ಥೆ, ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಕರ್ತವ್ಯ ನಿರ್ವಹಿಸಲು ಪರದಾಟ ಸೇರಿ ಹಲವು ಸಮಸ್ಯೆಗಳು ಕಾಡುತ್ತಿವೆ.

ನಿರಂತರ ದೂರುಗಳು

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು, ಸ್ಥಳೀಯ ಜನಪ್ರತಿನಿಧಿಗಳು, ವಿವಿಧ ಇಲಾಖೆಯ ಅಧಿಕಾರಿಗಳು ಆಗಾಗ ಅಂಗನವಾಡಿ ಕೇಂದ್ರಗಳಿಗೆ ಭೇಟಿ ನೀಡಿದ ಸಂದರ್ಭದಲ್ಲಿ ನಾನಾ ದೂರುಗಳು ಕೇಳಿ ಬರುತ್ತಿವೆ. ಅಲ್ಲಿನ ಅವ್ಯವಸ್ಥೆ ಬಗ್ಗೆ ತಾಲೂಕು ಶಿಶು ಅಭಿವೃದ್ಧಿ ಯೋಜನಾಧಿಕಾರಿಗಳ ಮೂಲಕ ಜಿಲ್ಲಾಡಳಿತದ ಗಮನ ಸೆಳೆದು, ಪರಿಹಾರ ಕೆಲಸ ಕೈಗೊಳ್ಳುವುದು ಸಾಮಾನ್ಯವಾಗಿದೆ. ಇತ್ತೀಚೆಗೆ ಜಿಲ್ಲಾ ಕೇಂದ್ರದಲ್ಲಿನ ವಾಪಸಂದ್ರ ಅಂಗನವಾಡಿಯಲ್ಲಿ ಗಾಳಿ, ಬೆಳಕು ಇಲ್ಲದೆ ಉಸಿರುಗಟ್ಟುವ ವಾತಾವರಣ ಕಂಡು ನ್ಯಾಯಾಧೀಶರು ಅಸಮಾಧಾನ ವ್ಯಕ್ತಪಡಿಸಿದ್ದರು. ಇಂತಹ ಅವ್ಯವಸ್ಥೆಯ ಕೇಂದ್ರಗಳ ಪಟ್ಟಿ ತಯಾರಿಸಿ, ಸಂಬಂಧಪಟ್ಟ ಇಲಾಖೆಗೆ ಪತ್ರ ಬರೆದಿದ್ದರು. ಅಂಗನವಾಡಿ ಕೇಂದ್ರಗಳಿಗೆ ಸೂಕ್ತ ಜಾಗ ನಿಗದಿ, ಕಟ್ಟಡ ನಿರ್ಮಾಣ ಮತ್ತು ಮೂಲಸೌಕರ್ಯ ಒದಗಿಸುವುದರ ಬಗ್ಗೆ ಪ್ರಸ್ತಾವನೆ ಸಲ್ಲಿಸಲು ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಎನ್.ಮಂಜುಳಾ ಆದೇಶಿಸಿದ್ದು, ಹಂತ ಹಂತವಾಗಿ ಬಾಡಿಗೆ ಕಟ್ಟಡದಲ್ಲಿನ ಕೇಂದ್ರಗಳನ್ನು ಸರ್ಕಾರಿ ಕಟ್ಟಡಗಳಿಗೆ ಸ್ಥಳಾಂತರಿಸಲಾಗುತ್ತಿದೆ.

ಈಡೇರದ ಬೇಡಿಕೆ

ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ಜಿಲ್ಲಾಡಳಿತ ಭವನದ ಮುಂಭಾಗ ಧರಣಿ, ಬೆಂಗಳೂರು ಚಲೋ ಮತ್ತು ರ‌್ಯಾಲಿಯಂತಹ ಹೋರಾಟಗಳನ್ನು ಕೈಗೊಳ್ಳುತ್ತಿದ್ದು ಬೇಡಿಕೆಗಳು ಮಾತ್ರ ತ್ವರಿತವಾಗಿ ಈಡೇರುತ್ತಿಲ್ಲ ಎಂಬ ಅಸಮಾಧಾನದ ಮಾತುಗಳೂ ಕೇಳಿ ಬಂದಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net