ಜಿಲ್ಲೆ

ಹಾಡಹಗಲೇ ಶಿಕ್ಷಕಿಯ ಕತ್ತು ಕೊಯ್ದು ಕೊಲೆ!; 12 ವರ್ಷದ ಪುತ್ರಿ ತಬ್ಬಲಿ

Webdesk - Ravikanth

ಬೆಂಗಳೂರು: ಹಾಡಹಗಲೇ ಖಾಸಗಿ ಶಾಲಾ ಶಿಕ್ಷಕಿಯೊಬ್ಬರ ಕತ್ತು ಕೊಯ್ದು ದುಷ್ಕರ್ಮಿಯೊಬ್ಬ ಹತ್ಯೆ ಮಾಡಿದ್ದಾನೆ. ರಾಜಧಾನಿ ಬೆಂಗಳೂರಿನ ಅಶೋಕನಗರದ ನಂಜಪ್ಪ ಸರ್ಕಲ್ ನಿವಾಸಿ ಕೌಸರ್ ಮುಬೀನಾ (34) ಕೊಲೆಯಾದ ಶಿಕ್ಷಕಿ.

ಕೆಲವು ವರ್ಷಗಳ ಹಿಂದೆ ಪತಿಯಿಂದ ವಿಚ್ಛೇದನ ಪಡೆದಿದ್ದ ಕೌಸರ್, ತನ್ನ ಪುತ್ರಿಯ ಜೊತೆ ನಂಜಪ್ಪ ಸರ್ಕಲ್ ಸಮೀಪದ ಬಾಡಿಗೆ ಮನೆಯಲ್ಲಿ ನೆಲೆಸಿದ್ದರು. ಖಾಸಗಿ ಶಾಲೆಯಲ್ಲಿ 7ನೇ ತರಗತಿಯಲ್ಲಿ ಓದುತ್ತಿರುವ ಪುತ್ರಿ, ಸೋಮವಾರ ಎಂದಿನಂತೆ ಶಾಲೆಗೆ ಹೋಗಿದ್ದಳು. ಕೌಸರ್, ಸಹ ಆಗ ತಾನೇ ಶಾಲೆಯಿಂದ ಮನೆಗೆ ಬಂದಿದ್ದರು.

ಮಧ್ಯಾಹ್ನ 3.30ರ ವೇಳೆ ವ್ಯಕ್ತಿಯೊಬ್ಬ, ಕೌಸರ್ ಕುತ್ತಿಗೆಗೆ ಮೂರು ಬಾರಿ ಚಾಕುವಿನಿಂದ ಇರಿದು ಪರಾರಿ ಆಗಿದ್ದಾನೆ. ಅಕ್ಕಪಕ್ಕದ ಮನೆಯವರು ಗಮನಿಸಿ ತಕ್ಷಣ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ದೌಡಾಯಿಸಿದ ಪೊಲೀಸರು, ಶ್ವಾನದಳ ಮತ್ತು ಬೆರಳಚ್ಚು ತಜ್ಞರ ಸಹಾಯದಿಂದ ಪರಿಶೀಲನೆ ನಡೆಸಿ ಮಾಹಿತಿ ಕಲೆ ಹಾಕಿದ್ದಾರೆ.

ಮೇಲ್ನೋಟಕ್ಕೆ ಪರಿಚಿತ ವ್ಯಕ್ತಿಯಿಂದ ಕೃತ್ಯ ನಡೆದಿರುವುದು ದೃಢವಾಗಿದೆ. ಕೌಸರ್ ಮೈಮೇಲಿನ ಮತ್ತು ಮನೆಯಲ್ಲಿದ್ದ ಚಿನ್ನಾಭರಣ, ಬೆಲೆ ಬಾಳುವ ವಸ್ತುಗಳು ಯಾವುದೂ ಕಳವಾಗಿಲ್ಲ. ಪರಿಚಿತ ವ್ಯಕ್ತಿ, ವೈಯಕ್ತಿಕ ದ್ವೇಷಕ್ಕೆ ಕೊಲೆ ಮಾಡಿರುವ ಸಾಧ್ಯತೆಗಳಿವೆ. ಆರೋಪಿಯ ಸುಳಿವು ಲಭ್ಯವಾಗಿದ್ದು, ಶೀಘ್ರದಲ್ಲಿಯೇ ಬಂಧಿಸುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ. ಅಶೋಕನಗರ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಾಗಿದೆ.