| ಮಲ್ಲು ಕಳಸಾಪುರ ಲಕ್ಷ್ಮೇಶ್ವರ
ಅಮ್ಮಾ.. ಅಮ್ಮಾ...ಎಲ್ಲಿದ್ದೀಯಮ್ಮ? ಯಾರಿಗೂ ಏನನ್ನೂ ಹೇಳದೆ-ಕೇಳದೆ ಎಲ್ಲಿಗೆ ಹೋದೆಯಮ್ಮ? ನಿನ್ನನ್ನು ಹುಡುಕದ ಜಾಗವಿಲ್ಲ, ನಿನಗಾಗಿ ಪೂಜಿಸದ ದೇವರಿಲ್ಲ. ನಮ್ಮಿಂದೇನಾದರೂ ತಪ್ಪಾಗಿದ್ದರೆ ಮನ್ನಿಸಿ ಬೇಗ ಬಾರಮ್ಮ. ಅತ್ತು ಅತ್ತು ಕಣ್ಣೀರು ಬತ್ತುತ್ತಿದೆ. ನಿನ್ನ ಕೈತುತ್ತು, ಪ್ರೀತಿ-ವಾತ್ಸಲ್ಯಕ್ಕಾಗಿ ಹಂಬಲಿಸುತ್ತಿದ್ದೇವೆ. ಎಲ್ಲಿದ್ದರೂ ಬೇಗ ಬಂದು ಬಿಡಮ್ಮ...
ಶಾಲೆಯಿಂದ ಮನೆಗೆ ಬಾರದೆ ಕಾಣೆಯಾದ ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆ ಶಿಕ್ಷಕಿ, ಲಕ್ಷ್ಮೇಶ್ವರ ನಿವಾಸಿ ರಮಿತಾ ಬಸವರಾಜ ಬಾಳೇಶ್ವರಮಠ (ರಮಿತಾ ಮೆಕ್ಸಿ ಫರ್ನಾಂಡಿಸ್) (50) ಅವರ ಮಕ್ಕಳ ಕಣ್ಣೀರ ಕತೆ ಇದು.
ಶಿಕ್ಷಕಿ ರಮಿತಾ ಅವರು ನ. 9ರಂದು ತಾಲೂಕಿನ ಯಲ್ಲಾಪುರ ಗ್ರಾಮದ ಸರ್ಕಾರಿ ಪ್ರಾಥಮಿಕ ಶಾಲೆಗೆ ಹೋಗಿದ್ದರು. ಅಂದು ಶಾಲೆಯಿಂದ ಬಸ್ನಲ್ಲಿ ಲಕ್ಷ್ಮೇಶ್ವರ ಬಸ್ ನಿಲ್ದಾಣಕ್ಕೆ ಬಂದಿಳಿಸಿದ್ದಾರೆಂದು ಹೇಳಲಾಗುತ್ತಿದ್ದರೂ ಮನೆಗೆ ಬಂದಿಲ್ಲ. ಆದರೆ, ಅಲ್ಲಿಂದ ಮುಂದೆ ಎಲ್ಲಿ ಹೋದರು? ಏನಾದರು? ಎಂಬ ಮಾಹಿತಿ ಇಲ್ಲ. ಅವರ ಕುಟುಂಬದವರು, ಸಂಬಂಧಿಕರು, ಸ್ನೇಹಿತರು, ಪೊಲೀಸರು ಹುಡುಕಾಟ ನಡೆಸಿದ್ದಾರೆ. 50 ದಿನಗಳಾದರೂ ಯಾವುದೇ ಸುಳಿವು ಸಿಕ್ಕಿಲ್ಲ.
ಪುತ್ರ ರಜತ (20) ಐಟಿಐ ತೇರ್ಗಡೆಯಾಗಿದ್ದು, ಪುತ್ರಿ ರೋಜಾ (18) ಬಿ.ಕಾಂ. ಮೊದಲ ವರ್ಷದಲ್ಲಿದ್ದಾಳೆ. ಪತಿ ಬಸವರಾಜ ಲಕ್ಷ್ಮೇಶ್ವರ ಜೆಎಂಎಫ್ಸಿ ನ್ಯಾಯಾಲಯದಲ್ಲಿ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ರಮಿತಾ ಹಾಗೂ ಬಸವರಾಜ ಅವರದ್ದು ಅಂತರ್ಜಾತಿಯ ವಿವಾಹ. ಪರಸ್ಪರರಲ್ಲಿ ಸಣ್ಣ ಬಿರುಕೂ ಉಂಟಾಗಿರಲಿಲ್ಲ. ಸ್ವರ್ಗದಂತಹ ಸಂಸಾರದ ಮೇಲೆ ಯಾರ ಕಣ್ಣು ಬಿತ್ತೋ... ಮನೆಯಲ್ಲೀಗ ನೀರವ ಮೌನ.
ತಾಯಿಗೆ ಗೊತ್ತಿಲ್ಲ ಮಗಳು ಕಾಣೆಯಾದ ವಿಷಯ: ಶಿಕ್ಷಕಿ ರಮಿತಾ ಶಿರಸಿ ಮೂಲದವರು. ಅನಾರೋಗ್ಯ ಪೀಡಿತ ಅವರ ತಾಯಿ ಅನಿತಾಗೆ ಮಗಳು ಕಾಣೆಯಾದ ವಿಷಯ ಗೊತ್ತಿಲ್ಲ. ಶೈಕ್ಷಣಿಕ ತರಬೇತಿಗೆ ಹೋಗಿದ್ದಾಳೆ ಎಂದು ಪತಿಯ ಕುಟುಂಬದವರು ಸುಳ್ಳು ಹೇಳಿದ್ದಾರೆ. ಈಗ ರಮಿತಾ ತಾಯಿಗೂ ಅನುಮಾನ ಕಾಡತೊಡಗಿದ್ದು, ಚಿಂತೆಗೀಡಾಗಿದ್ದಾರೆ.
ನಿತ್ಯ ಪ್ರಾರ್ಥನೆ: ಶಿಕ್ಷಕಿ ನಾಪತ್ತೆಯಾದ ವಿಷಯ ತಿಳಿದ ಗೋವಾದ ಚರ್ಚ್ ಫಾದರ್ ಒಬ್ಬರು ನಿತ್ಯ ಬೆಳಗ್ಗೆ 3ಕ್ಕೆ ಮೊಬೈಲ್ಫೋನ್ ಕರೆ ಮಾಡಿ ಕುಟುಂಬ ಸದಸ್ಯರನ್ನು ನಿದ್ರೆಯಿಂದ ಎಬ್ಬಿಸಿ ಅವರಿಂದ ಧ್ಯಾನ ಮಾಡಿಸುತ್ತಿದ್ದಾರೆ. 50 ದಿನಗಳಿಂದ ಮಂದಿರ, ಮಸೀದಿ, ಚರ್ಚ್ಗಳಿಗೆ ತೆರಳಿ ಪ್ರಾರ್ಥನೆ, ಕೈಮುಗಿಯದ ದೇವರೇ ಇಲ್ಲ. ಪೂಜೆ, ಉಪವಾಸ-ವ್ರತಾಚರಣೆ ಮಾಡಿದ್ದಾರೆ. ಸ್ವಾಮೀಜಿಗಳು, ಹೇಳಿಕೆ ಹೇಳುವವರನ್ನು ಭೇಟಿ ಮಾಡಿ ಕೇಳಲಾಗಿದೆ. ಎಲ್ಲರೂ, ‘ಅವರು ಆರೋಗ್ಯವಾಗಿದ್ದಾರೆ. ಮರಳಿ ಬರುತ್ತಾರೆ’ ಎಂದೇ ಹೇಳುತ್ತಿದ್ದಾರೆ. ಆದರೂ ರಮಿತಾ ಸುಳಿವಿಲ್ಲ.
ಶಿಕ್ಷಕಿ ರಮಿತಾ ಕಾಣೆಯಾದ ಕುರಿತು ಲಕ್ಷೆ್ಮೕಶ್ವರ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಗೃಹ ಮಂತ್ರಿ, ಶಿಕ್ಷಣ ಮಂತ್ರಿ, ಜಿಲ್ಲಾ ಉಸ್ತುವಾರಿ ಸಚಿವರಿಗೂ ಮಾಹಿತಿ ನೀಡಲಾಗಿದೆ. ಯಾರೊಬ್ಬರೂ ಪ್ರಯತ್ನಿಸುತ್ತಿಲ್ಲ. ಶಿಕ್ಷಕಿ ಪತ್ತೆಗಾಗಿ ವಿಶೇಷ ತಂಡ ರಚಿಸಬೇಕು. ಸರ್ಕಾರ ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ನೊಂದ ಕುಟುಂಬದ ಕಣ್ಣೀರು ಒರೆಸಬೇಕು.
| ಮಹೇಶ ಹೊಗೆಸೊಪ್ಪಿನ ಪುರಸಭೆ ಸದಸ್ಯ
ಎಲ್ಲ ಮೂಲಗಳಿಂದ ಶಿಕ್ಷಕಿ ಪತ್ತೆ ಕಾರ್ಯದಲ್ಲಿ ತಲ್ಲೀನರಾಗಿದ್ದೇವೆ. ರಾಜ್ಯದ ಎಲ್ಲ ಪೊಲೀಸ್ ಠಾಣೆಗಳಿಗೆ ಮಾಹಿತಿ ನೀಡಿದ್ದೇವೆ. ದಿನಪತ್ರಿಕೆ, ಪ್ರಚಾರ ಮೂಲಕ ಸಾರ್ವಜನಿಕರಿಗೆ ಮಾಹಿತಿ ನೀಡಲಾಗಿದೆ. ಗದಗ, ಹಾವೇರಿ, ಧಾರವಾಡ, ದಕ್ಷಿಣ ಕನ್ನಡ ಜಿಲ್ಲೆಗಳ ಎಲ್ಲ ಚರ್ಚ್ಗಳು, ಅನಾಥಾಶ್ರಮಗಳು, ಮಹಿಳಾ ಸಾಂತ್ವನ ಕೇಂದ್ರಗಳಲ್ಲಿ ಪರಿಶೀಲಿಸಲಾಗಿದೆ. ಅವರ ಎಲ್ಲ ಸಂಬಂಧಿಕರು, ಸ್ನೇಹಿತರಿಂದ ಮಾಹಿತಿ ಪಡೆಯಲಾಗುತ್ತಿದೆ.
| ವಿಕಾಸ್ ಲಮಾಣಿ ಸಿಪಿಐ ಶಿರಹಟ್ಟಿ ವೃತ್ತ