ಸಮುದ್ರ ತೀರದಲ್ಲಿ ಅಡ್ಡಾದಿಡ್ಡಿಯಾಗಿ ಬಿದ್ದಿರುವ ಟಾರ್‌ಬಾಲ್.  
ಜಿಲ್ಲೆ

ಕಡಲ ತೀರದಲ್ಲಿ ಅಪಾಯಕಾರಿ ಟಾರ್‌ಬಾಲ್

Avinash R

-ಶ್ರೀಪತಿ ಹೆಗಡೆ ಹಕ್ಲಾಡಿ ಕುಂದಾಪುರ

ಕೋಡಿ ಕಡಲ ತೀರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಾರ್‌ಬಾಲ್ ನಿಸರ್ಗ ಪ್ರಿಯರ ಲ್ಲಿ ಆತಂಕ ಉಂಟು ಮಾಡಿದೆ. ಕೋಡಿ ಕಡಲ ತಡಿ ಉದ್ದಾನುದಕ್ಕೂ ನೀರಿಗೆ ಜಿಡ್ಡಿನ ಗಡಸುತನ ಬಂದರೆ, ತೀರದಲ್ಲಿ ಕಾಣಿಸಿಕೊಳ್ಳುವ ಕಪ್ಪುಬಣ್ಣದ ಬಾಲ್ ಮಾಲಿನ್ಯದ ಪ್ರಮಾಣ ಹೆಚ್ಚುತ್ತಿರುವುದನ್ನು ಸೂಚಿಸುತ್ತಿದೆ.

ಕಡಲ ತೀರದಲ್ಲಿ ಕಾಲಿಗೆ ಅಂಟಿಕೊಳ್ಳುವ ಜಿಡ್ಡು ನೀರಿನ ಬಣ್ಣ ಬದಲಾಯಿಸಿದೆ. ಈ ನೀರಲ್ಲಿ ಮಿಂದರೆ ಮೈಯಲ್ಲಿ ನವೆಯೆದ್ದು, ಚರ್ಮದ ಮೇಲೆ ದದ್ದು ಉಂಟಾಗುತ್ತದೆ. ನೀರು ನೈಜತೆ ಕಳೆದುಕೊಂಡು ಗಡುಸಾಗಿ ಜಲಚರಗಳ ಉಸಿರಾಟಕ್ಕೆ ಅಡ್ಡಿ ಪಡಿಸಿ ಮಸಣಕ್ಕೆ ಸೇರಿಸುತ್ತಿದೆ. ಸಮುದ್ರ ಮಾಲೀನ್ಯ ಮೀನುಗಾರರ ಹಾಗೂ ಪರಿಸರಪ್ರೇಮಿಗಳ ಆತಂಕಕ್ಕೆ ಕಾರಣವಾಗುತ್ತಿದ್ದು, ಮುಂದೆ ಆಮೆ ಕೋಡಿ ಕಡಲ ತೀರಕ್ಕೆ ಬಂದು ನಿರ್ಭಯವಾಗಿ ಮೊಟ್ಟೆಯಿಟ್ಟು ಹೋಗುತ್ತದಾ ಎನ್ನುವ ಪ್ರಶ್ನೆ ಹುಟ್ಟುಹಾಕುತ್ತಿದೆ. ಕಡಲ ತೀರದ ಎಣ್ಣೆ ಮಿಶ್ರಣದ ಗಡಸು ನೀರು ಕಡಲಾಮೆ, ಮೀನು ಸಹಿತ ಇತರ ಜಲಚರ, ಸೂಕ್ಷ್ಮಜೀವಿಗಳನ್ನು ಆಪೋಶನ ತೆಗೆದುಕೊಂಡರೂ ಅಚ್ಚರಿಯಲ್ಲ.

ಕೋಡಿ ಕಡಲ ತಡಿಯಲ್ಲಿ ಕಾಣಿಸಿಕೊಳ್ಳುತ್ತಿರುವ ಟಾರ್‌ಬಾಲ್ ಉಂಡೆ.

ಏನಿದು ಟಾರ್‌ಬಾಲ್?

ಸಮುದ್ರದಲ್ಲಿ ಕಾಣಿಸಿಕೊಳ್ಳುತ್ತಿರುವ ಟಾರ್‌ಬಾಲ್ ಕಡಲೋತ್ಪತ್ತಿಯಲ್ಲ. ಮೀನುಗಾರಿಕಾ ಬೋಟ್‌ಗಳು, ಹಡಗು, ಯಾತ್ರೀಕೃತ ದೋಣಿಗಳ ವೇಸ್ಟ್ ಆಯಿಲ್ ನೀರಿಗೆ ಬಿಡುವುದು, ಡೀಸೆಲ್ ಸೋರುವಿಕೆ, ಮಳೆಗಾಲದಲ್ಲಿ ಬೇರೆ ಬೇರೆ ಕಡೆಯಿಂದ ಕೊಚ್ಚಿ ಬರುವ ಆಯಿಲ್ ನೀರು ಕಡಲಲ್ಲಿ ಚೆಂಡಿನಾಕಾರದ ಉಂಡೆ ಸೃಷ್ಟಿಸುತ್ತದೆ. ಹೀಗೆ ಕಡಲ ತೀರಕ್ಕೆ ಬಂದು ಬೀಳುವ ಎಣ್ಣೆಜಿಡ್ಡು ಮಿಶ್ರಿತ ಉಂಡೆ ಟಾರ್‌ಬಾಲ್. ಸಮುದ್ರದ ಮೇಲ್ಮೈಯಲ್ಲಿ ಕಚ್ಚಾತೈಲ ತೇಲಿದಾಗ ಅದರ ಭೌತಿಕ ಗುಣಲಕ್ಷಣಗಳು ಬದಲಾಗಿ, ಗಾಳಿ ಮತ್ತು ಅಲೆಗೆ ಸಿಲುಕಿ ತೈಲ ಪಾಚಿಗಳ ಸಣ್ಣ ತುಂಡುಗಳಾಗಿ ರಬ್ಬರ್ ಬಾಲ್ ಆಕಾರದಲ್ಲಿ ರೂಪುಗೊಳ್ಳುವಂತೆ ಮಾಡುತ್ತದೆ. ಟಾರ್‌ಬಾಲ್ ಕಂಡುಬಂದ ಕಡಲ ತೀರದಲ್ಲಿ ನೀರಿನೊಟ್ಟಿಗೆ ಚೆಲ್ಲಾಟವಾಡಿದರೆ ಕಜ್ಜಿ ತುರಿಕೆ ನಿಶ್ಚಿತ. ಕಡಲ ಜಿಡ್ಡು ಮೈಗೆ ಅಂಟಿಕೊಂಡರೆ ಬೇಕಿಂಗ್ ಸೋಡಾ ಪೇಸ್ಟ್ ಮಿಶ್ರಣ ಮಾಡಿ ಹಚ್ಚಿ ಸೋಪ್ ಹಾಕಿ ತೊಳೆದು ನಿವಾರಿಸಿಕೊಳ್ಳಬೇಕು. ಮಾನವರಿಗೆ ಟಾರ್ ಅಂಟಿಕೊಂಡರೆ ಹೇಗೋ ಪರಿಹಾರದ ಮಾರ್ಗವಿದ್ದರೂ ಕಡಲ ತೀರಕ್ಕೆ ಬರುವ ಪ್ರಾಣಿಗಳಿಗೆ ಟಾರ್‌ಬಾಲ್ ಅಂಟಿಕೊಂಡರೆ ಜೀವನ ಪರ್ಯಂತ ಅದರ ಪರಿಣಾಮದಿಂದ ಹೊರಬರುವುದು ಕಷ್ಟ. ಟಾರ್‌ಬಾಲ್ ಪ್ರಾಣಿಗಳ ಮೈಗೆ ಅಂಟಿಕೊಂಡರೆ ಕೂದಲುದುರಿ, ಚರ್ಮಕೊಳೆತು ನರಳಿ ಸಾಯುತ್ತವೆ. ಟಾರ್‌ಬಾಲ್ ದುರ್ವಾಸನೆ ಬೀರುತ್ತದೆ.

ಬೋಟ್, ಹಡಗುಗಳ ವೇಸ್ಟ್ ಆಯಿಲ್ ಅನ್ನು ಬಂದರುಳಲ್ಲಿ ಹಣಕಟ್ಟಿ ಡಂಪ್ ಮಾಡುವ ವ್ಯವಸ್ಥೆಯಿದ್ದರೂ ಸಮುದ್ರ ಮಧ್ಯ ವೇಸ್ಟ್ ಆಯಿಲ್ ಬಿಡುತ್ತಿದ್ದಾರೆ. ಅಬ್ಬರ ಹೆಚ್ಚಾದಾಗಿ ಮಧ್ಯೆ ಡಂಪ್ ಮಾಡಿದ ಆಯಿಲ್ ತೀರಕ್ಕೆ ಬರುತ್ತದೆ. ಬಳಸಿದ ಪ್ಲಾಸ್ಟಿಕ್ ಸಮುದ್ರಕ್ಕೆ ಹಾಕುವುದರಿಂದ ಪ್ಲಾಸ್ಟಿಕ್ ಪುಡಿಯಾಗಿ ವೇಸ್ಟ್ ಆಯಿಲ್ ಜತೆ ಸೇರಿ ಕಡಲ ತೀರಕ್ಕೆ ಬರುತ್ತಿದೆ. ಮೀನು ಹಾಗೂ ಆಮೆಗಳು ಮಿಲನ ಕಾಲಘಟ್ಟದಲ್ಲಿ ಕಡಲ ತೀರಕ್ಕೆ ಬರುತ್ತಿದ್ದು, ಪ್ಲಾಸ್ಟಿಕ್ ಉಂಡೆಯನ್ನು ಆಹಾರ ಎಂದು ಭಾವಿಸಿ ಸೇವಿಸುವುದರಿಂದ ಮೀನು, ಆಮೆಗಳು ಸಾಯುತ್ತವೆ. ಮೈಕ್ರೊ ಪ್ಲಾಸ್ಟಿಕನ್ನು ಮೀನು ಸೇವಿಸುತ್ತಿದ್ದು, ಪ್ಲಾಸ್ಟಿಕ್ ತಿಂದ ಮೀನುಗಳನ್ನು ಮನುಷ್ಯರು ತಿನ್ನುವುದರಿಂದ ಮಾನವರಿಗೂ ಆರೋಗ್ಯದ ಸಮಸ್ಯೆ ಉಂಟಾಗುತ್ತದೆ. ಕಡಲ ತೀರದ ಟಾರ್‌ಬಾಲ್ ವಿಷಯ ಟ್ವಿಟರ್ ಮೂಲಕ ಪಿಎಂ ಗಮನಕ್ಕೆ ತಂದಿದ್ದೇವೆ.-ಭರತ್ ಬಂಗೇರ, ಕ್ಲೀನ್ ಕುಂದಾಪುರ ಪ್ರೊಜೆಕ್ಟ್ ಸದಸ್ಯ
ಸಮುದ್ರ ತೀರದ ನೀರು ಮುಟ್ಟಿದರೆ ಕೈ ತುರಿಕೆ, ಚರ್ಮ ಸಮಸ್ಯೆ ಬರುವ ಅಪಾಯವಿದೆ. ನಾಯಿಗಳ ಹೆಚ್ಚಿನ ಸಮಸ್ಯೆಗೆ ಒಳಗಾಗುತ್ತವೆ, ನೀರು ಸುಟ್ಟ ಎಣ್ಣೆ ವಾಸನೆ ಬರುತ್ತದೆ. ಸಮುದ್ರ ಮಾಲಿನ್ಯ ತಪ್ಪಿಸದ ಹೊರತು ನೀರು ಕಲುಷಿತ ಆಗುವುದನ್ನು ತಪ್ಪಿಸಲಾಗದು. ವೇಸ್ಟ್ ಆಯಿಲ್ ಸಮುದ್ರಕ್ಕೆ ಬಿಡುವ ಹಡಗು ಹಾಗೂ ಬೀಚ್‌ಗಳಲ್ಲಿ ಪ್ಲಾಸ್ಟಿಕ್ ವೇಸ್ಟ್ ಹಾಕುವವರ ವಿರುದ್ಧ ಕಠಣ ಕಾನೂನು ಕ್ರಮ ತೆಗೆದುಕೊಳ್ಳದಿದ್ದರೆ ಜಲಜರಕ್ಕಷ್ಟೇ ಅಲ್ಲ ಮನುಕುಲಕ್ಕೂ ಆಪಾಯ.-ದಿನೇಶ್ ಸಾರಂಗ, ಚೀಪ್ ಕ್ವಾರ್ಡಿನೇಟರ್, ಎಸ್‌ಎಫ್‌ಎಲ್ ಇಂಡಿಯಾ