ಜಿಲ್ಲೆ

ತನಿಷ್ಕ್​ ಜ್ಯುವೆಲರ್ಸ್​​ನಲ್ಲಿ ಸಿಬ್ಬಂದಿಯಿಂದಲೇ 1.37 ಕೋ.ರೂ. ಮೌಲ್ಯದ ಚಿನ್ನಾಭರಣ ಕಳ್ಳತನ!

vijayavani

ತುಮಕೂರು: ಉಂಡ ಮನೆಗೆ ದ್ರೋಹ ಬಗೆದ ಖದೀಮರಿಬ್ಬರು ಕೊನೆಗೂ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾರೆ! ನಗರದ ತನಿಷ್ಕ್​ ಜ್ಯುವೆಲರ್ಸ್​ ಸಿಬ್ಬಂದಿಯೇ 2.47 ಕೆಜಿ ಚಿನ್ನಾಭರಣ ದೋಚಿದ್ದ ಪ್ರಕರಣವನ್ನು ನಗರ ಠಾಣೆ ಪೊಲೀಸರು ಭೇದಿಸಿದ್ದಾರೆ. ಆಭರಣ ಮಳಿಗೆಯಲ್ಲಿ ಕೆಲಸಕ್ಕಿದ್ದ ವಿನೋಬಾ ನಗರದ ಮೊಹಮದ್ ಆದಿಲ್ (43), ಕೇರಳದ ರಿತೇಶ್ ಕುರುಪ್ (35) ಹಾಗೂ ಇವರ ಜತೆಗೆ ಹೆಬ್ಬೂರಿನ ರುಕ್ಸಾನ (28), ಗುಬ್ಬಿಯ ಮಹೇಶ (32), ಮಹೇಶ್ ಪತ್ನಿ ಮೀನಾಕ್ಷಿ (26) ಬಂಧಿತರು.

ನಗರದ ಬಾರ್‌ಲೈನ್ ರಸ್ತೆಯಲ್ಲಿನ ತನಿಷ್ಕಾ ಜ್ಯೂಯಲರ್ಸ್‌ನಲ್ಲಿ 2019ರ ಏಪ್ರಿಲ್ 22ರಿಂದ 2020 ಜೂನ್ 14ರ ನಡುವೆ ಕೆಲಸ ಮಾಡುತ್ತಿದ್ದ ಸಿಬ್ಬಂದಿ 1.37 ಕೋ.ರೂ. ಮೌಲ್ಯದ 2.47 ಕೆಜಿಯಷ್ಟು ಚಿನ್ನಾಭರಣ ಕಳ್ಳತನ ಮಾಡಿದ್ದಾರೆ ಎಂದು ಮಾಲೀಕ ಪ್ರಕಾಶ್‌ಕುಮಾರ್ ರಾಥೋಡ್ ತುಮಕೂರು ನಗರಠಾಣೆಯಲ್ಲಿ ಕಳೆದ ಜೂನ್ 18ರಂದು ದೂರು ದಾಖಲಿಸಿದ್ದರು. ಐದು ತಿಂಗಳ ಬಳಿಕ ಆರೋಪಿಗಳು ಪೊಲೀಸರ ಬಲೆಗೆ ಬಿದ್ದಿದ್ದಾರೆ. ನಗರ ಠಾಣೆ ಸಿಪಿಐ ಜಿ.ನವೀನ್ ನೇತೃತ್ವದಲ್ಲಿ ರಚಿಸಲಾಗಿದ್ದ ಅಪರಾಧ ಪತ್ತೆ ತಂಡ ಆರೋಪಿಗಳನ್ನು ವಶಕ್ಕೆ ಪಡೆದು ತೀವ್ರ ವಿಚಾರಣೆಗೊಳಪಡಿಸಿದಾಗ ಕಳ್ಳತನ ಮಾಡಿದ್ದನ್ನು ಬಾಯಿಬಿಟ್ಟಿದ್ದಾರೆ.

4,05,000 ರೂ. ನಗದು ಹಾಗೂ 1ಕೆಜಿ 854 ಗ್ರಾಂ ಚಿನ್ನಾಭರಣ ಆರೋಪಿಗಳಿಂದ ವಶಪಡಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಆರೋಪಿಗಳನ್ನು ಪತ್ತೆ ಮಾಡಿದ ತಂಡದಲ್ಲಿ ಪಿಎಸ್​ಐ ಬಿ.ಸಿ.ಮಂಜುನಾಥ್, ಗಂಗಮ್ಮ, ಎಎಸ್‌ಐ ರಮೇಶ್, ಸಿಬ್ಬಂದಿ ಮಂಜುನಾಥ , ಚಿ.ಸ.ಪ್ರಸನ್ನಕುಮಾರ್, ರಾಮಚಂದ್ರಯ್ಯ , ಸಿದ್ದೇಶ್ವರ ಜಿ. ಈರಣ್ಣ , ನಾಗರಾಜ , ಡಿ. ಜೈಪ್ರಕಾಶ್, ನವೀನ, ಅಶ್ವಿನಿ, ದಯಾಮಣಿ, ಕವಿತಾ ಇದ್ದರು.