ಮೂಡುಬಿದಿರೆ: ಯಕ್ಷಗಾನ ಕಲಾವಿದರು ಎಲ್ಲ ಪಾತ್ರಗಳನ್ನೂ ಭಕ್ತಿ, ಶ್ರದ್ಧೆ, ಜೀವಂತಿಕೆಯಿಂದ ಜನರೆದುರು ಪ್ರದರ್ಶನಗೊಳಿಸುತ್ತಾರೆ. ಯಕ್ಷಗಾನ ಶ್ರೇಷ್ಠ ಕಲೆ ಎಂದು ಮೂಡುಬಿದಿರೆ ಜೈನಮಠದ ಸ್ವಸ್ತಿಶ್ರೀ ಭಟ್ಟಾರಕ ಚಾರುಕೀರ್ತಿ ಪಂಡಿತಾಚಾರ್ಯವರ್ಯ ಸ್ವಾಮೀಜಿ ಹೇಳಿದರು.
ಜೈನ ಮಠದ ಭಟ್ಟಾರಕ ಭವನದಲ್ಲಿ ಶನಿವಾರ ಆಮ್ನಾಯ-ಯಕ್ಷ ಸಂಸ್ಕೃತಿ ಬಳಗ, ಗಾಳಿಮನೆಯ ದ್ವಿತೀಯ ವಾರ್ಷಿಕೋತ್ಸವ, ಪಾಕ್ಷಿಕ ಸರಣಿ ತಾಳಮದ್ದಳೆ ಕೂಟ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಕಲಾವಿದ ಉಜಿರೆ ಅಶೋಕ ಭಟ್ ಮಾತನಾಡಿ, ರಂಗಭೂಮಿ ತಾಳಮದ್ದಳೆ ಉತ್ತಮ ಚೌಕಟ್ಟಿನಲ್ಲಿ ಭಾವಪುಷ್ಟಿಯಿಂದ ಸದಭಿರುಚಿ ಮೂಡಿಸಬೇಕು. ಬಳಗವು ಕಠಿಣ ಹಾದಿಯಲ್ಲಿ ಸುಲಲಿತವಾಗಿ ನಡೆಯುವ ಪ್ರಯತ್ನದಲ್ಲಿ ಯಶಸ್ಸು ಕಾಣಲಿ ಎಂದರು.
ಉದ್ಯಮಿ ಶ್ರೀಪತಿ ಭಟ್ ಅಧ್ಯಕ್ಷತೆ ವಹಿಸಿದರು. ದಯಾನಂದ ಪೈ, ಡಾ.ಪ್ರಸನ್ನ ಕಾಕುಂಜೆ, ರಾಘವೇಂದ್ರ ಭಂಡಾರ್ಕರ್ ಶುಭ ಹಾರೈಸಿದರು. ಧರ್ಮಸ್ಥಳ ಬಿ.ಭುಜಬಲಿ, ಎಂ.ಬಾಹುಬಲಿ ಪ್ರಸಾದ್ ಉಪಸ್ಥಿತರಿದ್ದರು.
ಕಾರ್ಯಕ್ರಮದ ರೂವಾರಿ ಡಾ.ವಿನಾಯಕ ಭಟ್ಟ ಗಾಳಿಮನೆ ಸ್ವಾಗತಿಸಿದರು. ಶಿವಪ್ರಸಾದ್ ಭಟ್ ಕಾಂತಾವರ ಕಾರ್ಯಕ್ರಮ ನಿರೂಪಿಸಿದರು.