ಮಂಜೇಶ್ವರ : ಯಕ್ಷಬಳಗ ಹೊಸಂಗಡಿ ಯಕ್ಷಗಾನ ಸಂಘಟನೆ 34ನೇ ವಷರ್ದ ಕರ್ಕಾಟಕ ಮಾಸ ತಾಳಮದ್ದಳೆ ಕೂಟ ಸಮಾರೋಪ ಸಮಾರಂಭ ಆ.18ರಂದು ಬೆಳಗ್ಗೆ 10ರಿಂದ ಮೂಡಂಬೈಲು ಅಪ್ಪತ್ತಿಮಾರ್ ಸುರೇಶ ಪದಕಣ್ಣಾಯರ ಮನೆ ನಾರಾಯಣೀಯಂನಲ್ಲಿ ಜರುಗಲಿದೆ.
ಕರ್ನಾಟಕ ಯಕ್ಷಗಾನ ಅಕಾಡೆಮಿ ಬೆಂಗಳೂರು ಸಂಸ್ಥೆ ಸಹಯೋಗದೊಂದಿಗೆ ಹಿರಿಯರ ನೆನಪು ಕಾರ್ಯಕ್ರಮ ಜರುಗಲಿದ್ದು, ಕೀರ್ತಿ ಶೇಷ ಮೀಯಪದವು ಕೃಷ್ಣ ರಾವ್ ಅವರ ಸ್ಮರಣೆ ನಡೆಯಲಿದೆ. ಯಕ್ಷಗಾನ ಕಲಾವಿದ ಹರೀಶ್ಚಂದ್ರ ನಾಯ್ಗ ಮಾಡೂರು ಅವರಿಗೆ ಯಕ್ಷಬಳಗ ವಾರ್ಷಿಕ ಗೌರವಾರ್ಪಣೆ ನಡೆಯಲಿದೆ. ಹಿರಿಯ ಅರ್ಥಧಾರಿ ಸಾಹಿತಿ ರಾಧಾಕೃಷ್ಣ ಕಲ್ಚಾರ್ ಅಧ್ಯಕ್ಷತೆ ವಹಿಸಲಿದ್ದು, ಯೋಗೀಶ ರಾವ್ ಚಿಗುರುಪಾದೆ ಹಿರಿಯರ ನೆನಪುಗೈಯಲಿದ್ದಾರೆ. ಕರ್ನಾಟಕ ಯಕ್ಷಗಾನ ಅಕಾಡೆಮಿ ಸದಸ್ಯ ಸಂಕಬೈಲು ಸತೀಶ ಅಡಪ ಪ್ರಾಸ್ತಾವಿಕ ಮಾತನಾಡುವರು. ಶಿವರಾಮ ಪದಕಣ್ಣಾಯ ಅಪ್ಪತ್ತಿಮಾರ್, ಬಾಲಕೃಷ್ಣ ಭಟ್ ದಡ್ಡಂಗಡಿ, ವಕೀಲ ವಿಠಲ ಭಟ್ ಮೊಗಸಾಲೆ, ನಾಗರಾಜ ಪದಕಣ್ಣಾಯ ಮೂಡಂಬೈಲು ಉಪಸ್ಥಿತರಿರುವರು.
ಯಕ್ಷಬಳಗ ಹೊಸಂಗಡಿ ತಂಡ ಹಾಗೂ ಅತಿಥಿ ಕಲಾವಿದರಿಂದ ಕರ್ಣಾರ್ಜುನ ಕಾಳಗ ತಾಳಮದ್ದಳೆ ಜರುಗಲಿದ್ದು, ಅತಿಥಿ ಕಲಾವಿದರಾಗಿ ರಾಧಾಕೃಷ್ಣ ಕಲ್ಚಾರ್ ಹಾಗೂ ಜಬ್ಬಾರ್ ಸಮೋ ಸಂಪಾಜೆ ಭಾಗವಹಿಸಲಿದ್ದಾರೆ ಎಂದು ಯಕ್ಷಬಳಗ ಸಂಚಾಲಕ ಸಂಕಬೈಲು ಸತೀಶ ಅಡಪ ತಿಳಿಸಿದ್ದಾರೆ.