ಸುಬ್ರಹ್ಮಣ್ಯ: ಮಹತೋಭಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನದ ಆಡಳಿತದ ಎಸ್‌ಎಸ್ ಪಿಯು ಕಾಲೇಜು ವಿದ್ಯಾರ್ಥಿನಿಯರಿಗೆ ಟೇಕ್ವಾಂಡೋ ತರಬೇತಿ ಕಾರ್ಯಾಗಾರ ನಡೆಯಿತು.
ರೇಬತ್ ಕಟುವಾಲ್ ಛೇತ್ರಿ ಅವರು ಟೇಕ್ವಾಂಡೋದ ಕೆಲವೊಂದು ಪಟ್ಟುಗಳ ಬಗ್ಗೆ ವಿದ್ಯಾರ್ಥಿನಿಯರಿಗೆ ಮಾಹಿತಿ ನೀಡಿದರು. ಪ್ರಾತ್ಯಕ್ಷಿಕೆ ಮೂಲಕ ಟೇಕ್ವಾಂಡೋ ಕಲೆಯನ್ನು ವಿದ್ಯಾರ್ಥಿನಿಯರಿಗೆ ಬೋಧಿಸಿದರು. ಅಚಾನಕ್ ಆಗಿ ಬರುವ ಕಠಿಣ ಪರಿಸ್ಥಿತಿಯನ್ನು ಈ ಕಲೆ ಅಭ್ಯಸಿಸುವ ಮೂಲಕ ತಡೆಯಬಹುದು. ಆತ್ಮ ರಕ್ಷಣೆ, ಸ್ವಯಂರಕ್ಷಣೆಗೆ ಈ ಕಲೆ ಕಲಿಯುವುದು ಉತ್ತಮ ಎಂದು ವಿದ್ಯಾರ್ಥಿಗಳಿಗೆ ತಿಳಿಸಿದರು.
ಕಾಲೇಜು ಪ್ರಾಚಾರ್ಯ ಸೋಮಶೇಖರ ನಾಯಕ್ ಅಧ್ಯಕ್ಷತೆ ವಹಿಸಿ ಕಾಲೇಜು ವಿದ್ಯಾರ್ಥಿನಿಯರಿಗೆ ಈ ಸಮರ ಕಲೆಯನ್ನು ಅಭ್ಯಸಿಸಲು ತರಬೇತಿ ಆಯೋಜಿಸಲಾಗುವುದು. ಈ ಮೂಲಕ ವಿದ್ಯಾರ್ಥಿನಿಯರು ಸ್ವಯಂರಕ್ಷಣೆಗೆ ಧೈರ್ಯದಿಂದ ತೊಡಗಿಸಿಕೊಳ್ಳಲು ಸ್ಫೂರ್ತಿ ನೀಡುತ್ತದೆ ಎಂದರು.
ರೇಬತ್ ಕಟುವಾಲ್ ಛೇತ್ರಿ ಅವರಿಗೆ ಅವರ ಪುತ್ರಿ ಕಾಲೇಜು ವಿದ್ಯಾರ್ಥಿನಿ, ರಾಜ್ಯಮಟ್ಟದ ಟೇಕ್ವಾಂಡೋ ಪ್ರತಿಭೆ ಚಾಣಸ್ಯ ಕಟುವಾಲ್ ಛೇತ್ರಿ ಸಹಕರಿಸಿದರು. ಚಾಣಸ್ಯ ಜಿಲ್ಲಾಮಟ್ಟದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನಿಯಾಗಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕಾಲೇಜಿನ ಆಯ್ಕೆ ಶ್ರೇಣಿ ಉಪನ್ಯಾಸಕಿ ರೇಖಾರಾಣಿ ಸೋಮಶೇಖರ್, ಹಿರಿಯ ಉಪನ್ಯಾಸಕಿ ಜಯಶ್ರೀ ವಿ.ದಂಬೆಕೋಡಿ, ಉಪನ್ಯಾಸಕಿಯರಾದ ಜ್ಯೋತಿ ಪಿ.ರೈ., ಸವಿತಾ ಕೈಲಾಸ್, ಭವ್ಯಶ್ರೀ ಹರೀಶ್ ಕುಲ್ಕುಂದ, ಸೌಮ್ಯಕೀರ್ತಿ, ಸುಧಾ, ಮಾನಸ, ಉಪನ್ಯಾಸಕ ರತ್ನಾಕರ ಸುಬ್ರಹ್ಮಣ್ಯ, ಮಹೇಶ್ ಕೆ.ಎಚ್. ಉಪಸ್ಥಿತರಿದ್ದರು. ಉಪನ್ಯಾಸಕಿ ಶ್ರುತಿ ನಿರೂಪಿಸಿದರು.