ಜಿಲ್ಲೆ

ಚಿಲ್ಲಾ ಸಾಧಕ ಲಯತಪಸ್ವಿ!; 40 ದಿನಗಳ ಕಾಲ ನಿರಂತರ ತಬಲಾ ಅಭ್ಯಾಸ ಮಾಡಿದ ಸಾಧಕ

ಸಾಧನೆಗೆ ನೂರಾರು ಹಾದಿ, ಆದರೆ ಸಾಧಿಸುವ ಛಲ ಮುಖ್ಯ. ಸಾಧಕರ ಕಥೆ ಕೇಳುವಾಗ ಅದರಲ್ಲೂ ಪ್ರಸಿದ್ಧ ಸಂಗೀತ ಸಾಧಕರ ಸಾಧನೆಯ ದಿನಗಳು ಇತರರಿಗೆ ಸ್ಫೂರ್ತಿದಾಯಕ. ಭಾರತರತ್ನ ಪಂಡಿತ್ ಭೀಮಸೇನ್ ಜೋಶಿ ಅವರ ಕುರಿತು ಹೇಳುವಾಗ ‘ಅವರು ಇಡೀ ದಿನ ನಿರಂತರವಾಗಿ ತಾಲೀಮ್ ಮಾಡುತ್ತಿದ್ದರಂತೆ- ಹಠಯೋಗದ ಥರ’ ಎಂಬೆಲ್ಲ ಮಾತುಗಳನ್ನು ಕೇಳಿದ್ದೆವು. ಅದರೊಂದಿಗೆ ‘ಈಗ ಅಂಥ ಸಾಧಕರಿಲ್ಲ ಬಿಡಿ’ ಎಂಬ ನಿರಾಸೆಯ ಮಾತುಗಳನ್ನೂ ಕೇಳುತ್ತಿರುತ್ತೇವೆ. ನಿರಾಶರಾಗಬೇಕಿಲ್ಲ ಈಗಲೂ ಇದ್ದಾರೆ, ಎಲ್ಲೋ ಅಲ್ಲ ನಮ್ಮ ಕರ್ನಾಟಕದಲ್ಲೇ ಇದ್ದಾರೆ. ಹೌದು, ಅಂಥದೊಂದು ಕಠಿಣ ‘ಚಿಲ್ಲಾ’ ಸಾಧನೆಯನ್ನು ಯುವ ಕಲಾವಿದರೊಬ್ಬರು ಮಾಡಿ ತೋರಿಸಿದ್ದಾರೆ!

ಹಿಂದುಸ್ತಾನಿ ಸಂಗೀತದಲ್ಲಿ ಅದರಲ್ಲೂ ತಬಲಾ ಕಲಿಕೆಯಲ್ಲಿ ‘ಚಿಲ್ಲಾ’ ಎಂಬ ಸಾಧನೆಯ ಹಾದಿಯೊಂದಿದೆ. ಅದು 40 ದಿನಗಳ ನಿರಂತರ ಸಂಗೀತಾಭ್ಯಾಸ. ಅಕ್ಷರಶಃ ಲಯ ತಪಸ್ಸು. ಆ ದಿನಗಳಲ್ಲಿ ಆ ಸಾಧಕ ಸಂಪೂರ್ಣವಾಗಿ ಹೊರಜಗತ್ತಿನ ಸಂಪರ್ಕ ಕಡಿದುಕೊಳ್ಳುತ್ತಾನೆ. ಮಿತ ಆಹಾರ ಸೇವಿಸುತ್ತಾನೆ. ಸ್ನೇಹಿತರು, ಮದುವೆ, ಮುಂಜಿ, ಗೃಹಪ್ರವೇಶ, ಹರಟೆ ಇತ್ಯಾದಿಗಳಿಂದ ದೂರವಿರುತ್ತಾನೆ. ಮೊಬೈಲ್ ಬಳಸುವುದಿಲ್ಲ, ಪತ್ನಿ, ಮಕ್ಕಳಿಂದಲೂ ದೂರ. ಎಲ್ಲೋ ದೂರದ ಏಕಾಂತದಲ್ಲಿ ಕುಳಿತು ರಿಯಾಜ್... ರಿಯಾಜ್... ರಿಯಾಜ್ ಅಷ್ಟೇ. ಪ್ರಸಿದ್ಧ ಸಂಗೀತಗಾರ ಅಬ್ದುಲ್ ಕರೀಂ ಖಾನ್ ಅವರು ಹೇಳಿದಂತೆ ಈ ‘ಚಿಲ್ಲಾ’ ಕಲಾವಿದನ ಅಂತರಂಗದಲ್ಲಿ ಜ್ವಾಲೆಯೊಂದನ್ನು ಸೃಷ್ಟಿಸುತ್ತದೆ. ನೀನು ಆ ಬೆಂಕಿಯಲ್ಲಿ ಅಡುಗೆ ಮಾಡಬೇಕು ಇಲ್ಲವೇ ಸುಟ್ಟು ಹೋಗಬೇಕು. ಅಡುಗೆ ಮಾಡಿದರೆ ನಿಮ್ಮನ್ನು ಪ್ರತಿಯೊಬ್ಬರೂ ಆಸ್ವಾದಿಸುತ್ತಾರೆ’. ಅಂದರೆ ಅದು ಅಂಥ ಕಠಿಣ ಸಾಧನೆ.

ಇಂಥದೊಂದು ಸಾಧನೆಯನ್ನು ನಾಡಿನ ಪ್ರಮುಖ ತಬಲಾ ಕಲಾವಿದರಲ್ಲೊಬ್ಬರಾದ ಕೇದಾರನಾಥ್ ಹವಾಲ್ದಾರ್ ಇದೀಗ ಯಶಸ್ವಿಯಾಗಿ ಪೂರೈಸಿದ್ದಾರೆ. ‘ಕೇದಾರನಾಥ್ ಅವರು ಆ ಸಾಧನೆಯಲ್ಲಿ ಎಷ್ಟು ತಲ್ಲೀನರಾಗಿದ್ದರೆಂದರೆ ಮನೆಯ ಬೇಸ್‌ಮೆಂಟ್‌ನಲ್ಲಿ ತಾಲೀಮು ಮಾಡುತ್ತಿರುವ ‘ಚಿಲ್ಲಾ’ ಸಮಯದಲ್ಲಿ ಅದೇ ಕಟ್ಟಡದ ಮೊದಲ ಮಹಡಿಯಲ್ಲಿದ್ದ ಪತ್ನಿಯನ್ನೂ ಭೇಟಿ ಮಾಡಲಿಲ್ಲ. ಕಳೆದ 2024ರ ಜುಲೈ 08 ರಿಂದ ಆಗಸ್ಟ್ 16ರವರೆಗೆ ಅವರು ತಬಲಾದ ನಾದದೊಂದಿಗೆ ಅದರ ಅಭ್ಯಾಸದಲ್ಲಿಯೇ ಕಳೆದರು. ಗುರು ಅಂತಾರಾಷ್ಟ್ರೀಯ ಖ್ಯಾತಿ ತಬಲಾ ವಾದಕ ಪಂಡಿತ್ ಸಮೀರ ಚಟರ್ಜಿ, ಗುರುಮಾ ಸಂಘಮಿತ್ರಜೀ ಮತ್ತು ಗುರುಬಾಯಿ ದಿವ್ಯಾರ್‌ಕೋ ಚಟರ್ಜಿ ಅವರ ಮಾರ್ಗದರ್ಶನ ಮತ್ತು ಆಶೀರ್ವಾದದಿಂದ ಕೇದಾರನಾಥ್ ಈ ಸಾಧನೆಯನ್ನು ಮಾಡಿದ್ದಾರೆ’ ಎಂದು ಅವರ ತಂದೆ ಪ್ರಸಿದ್ಧ ಸಂಗೀತಗಾರ ಪಂಡಿತ್ ನಾಗರಾಜ್ ಹವಾಲ್ದಾರ್ ಅವರು ತಿಳಿಸಿದರು.

ಹೇಗಿತ್ತು ಅವರ ದಿನಚರಿ?: ಪ್ರತಿನಿತ್ಯ 12 ತಾಸು ಅಭ್ಯಾಸ. ಮೊದಲ ಐದು ದಿನ ಆ ಅಭ್ಯಾಸದ ಕಷ್ಟ ಮತ್ತು ಸವಾಲನ್ನು ಅರ್ಥಮಾಡಿಕೊಂಡರು. ಅವರೊಂದಿಗೆ ಯಾವ ಸಹ ಕಲಾವಿದರೂ ಇರಲಿಲ್ಲ. ಆರನೇ ದಿನ ತಾನೆಲ್ಲೂ ಹೋಗಬಾರದೆಂದು ನಿರ್ಧರಿಸಿದರು. ನುಡಿಸುವಿಕೆಯ ಯೋಚನೆಗಳಿಗೆ ಮರು ವ್ಯಾಖ್ಯಾನ ನೀಡತೊಡಗಿದರು. ಗುರುಗಳಿಗೆ ಚೀಟಿ ಕಳುಹಿಸಿ ಬೇಸ್ಮೆಂಟ್​​​ಗೆ ತೆರಳಿದರು. ಅಂದಿನಿಂದ ಹಿಂತಿರುಗಿ ನೋಡಲಿಲ್ಲ. ಎರಡು ದಿನಕ್ಕೊಮ್ಮೆ ಗುರುಗಳು ಭೇಟಿ ನೀಡುತ್ತಿದ್ದರು. 25 ದಿನಗಳಾದ ನಂತರ 40 ದಿನಗಳಾಗುವವರೆಗೆ ಗುರುಗಳನ್ನೂ ಕೇದಾರ್ ನೋಡಲಿಲ್ಲ. ಅವರೀಗ ಹೊಸ ತಬಲಾ ಕಲಾವಿದರಾಗಿ ರೂಪುಗೊಂಡಿದ್ದಾರೆ. ಈಗಾಗಲೇ ದೇಶದ ವಿವಿಧ ಪ್ರತಿಷ್ಠಿತ ವೇದಿಕೆಗಳಲ್ಲಿ ಪ್ರಸಿದ್ಧ ಕಲಾವಿದರಿಗೆ ತಬಲಾ ಸಾಥ್ ನೀಡಿರುವ ಕೇದಾರನಾಥ್, ಆರಂಭದಲ್ಲಿ ಪಂಡಿತ್ ರಾಜಗೋಪಾಲ ಕಲ್ಲೂರಕರ್, ಪಂಡಿತ್ ಎಂ.ನಾಗೇಶ ಅವರಲ್ಲಿ ತಬಲಾ ವಾದನ ಕಲಿತರು. 2010ರಿಂದ ಅಮೆರಿಕಾಕ್ಕೆ ತೆರಳಿ ಪಂಡಿತ್ ಸಮೀರ್ ಚಟರ್ಜಿ ಅವರಲ್ಲಿ ಗುರುಕುಲ ಪದ್ಧತಿಯಲ್ಲಿ ಎರಡು ವರ್ಷ ತಬಲಾ ಅಭ್ಯಾಸ ಮಾಡಿದರು. ನಂತರ ಭಾರತಕ್ಕೆ ಹಿಂದಿರುಗಿದ ಅವರು ಈಗಲೂ ಚಟರ್ಜಿ ಅವರಲ್ಲಿ ಕಲಿಕೆ ಮುಂದುವರಿಸಿದ್ದಾರೆ. ಕೇದಾರನಾಥ್ ಹವಾಲ್ದಾರ್ ತಬಲಾ ಕಲಾವಿದ ಮಾತ್ರವಲ್ಲ, ಗಾಯಕ ಕೂಡ.

ಸೆ. 15ರಂದು ಕಾರ್ಯಕ್ರಮ: ಚಿಲ್ಲಾ ಸಾಧಕ ಪಂಡಿತ್ ಕೇದಾರನಾಥ್ ಹವಾಲ್ದಾರ್ ಅವರ ತಬಲಾ ಸೋಲೋ ಕಾರ್ಯಕ್ರಮ ಸೆ.15ರ ಸಂಜೆ 5 ಗಂಟೆಗೆ ಬೆಂಗಳೂರು ಗಿರಿನಗರದ ‘ಅಕ್ಷರಂ’ನಲ್ಲಿ ಆಯೋಜಿಸಲಾಗಿದೆ. ಲಯತಪಸ್ಸು ಹೆಸರಿನ ಈ ಕಾರ್ಯಕ್ರಮದಲ್ಲಿ ಚಿಲ್ಲಾ ಸಾಧನೆಯ ಅನುಭವಗಳನ್ನೂ ಕೇದಾರನಾಥ್ ಹವಾಲ್ದಾರ್ ಹಂಚಿಕೊಳ್ಳಲಿದ್ದಾರೆ. ಸಮೀರ ಚಟರ್ಜಿ, ರಾಜಗೋಪಾಲ ಕಲ್ಲೂರಕರ ಹಾಗೂ ಎಂ. ನಾಗೇಶ್ ಉಪಸ್ಥಿತರಿರುವರು.