ಪೆರ್ಲ-ಸ್ವರ್ಗ-ಸೂರಂಬೈಲ್ ರಸ್ತೆಯ ಗಾಳಿಗೋಪುರ ಪ್ರದೇಶದಲ್ಲಿ ಮರಗಳು ಅಪಾಯಕಾರಿ ಸ್ಥಿತಿಯಲ್ಲಿ ರಸ್ತೆಗೆ ಚಾಚಿನಿಂತಿದೆ. 
ಜಿಲ್ಲೆ

ಸ್ವರ್ಗ ರಸ್ತೆ ಸಂಚಾರ ನರಕ : ಮಾರ್ಗಬದಿಯ ಮರಗಳಿಂದ ವಾಹನ, ಪ್ರಯಾಣಿಕರಿಗೆ ಅಪಾಯ

ಸೌಮ್ಯ ಆರ್

ಪುರುಷೋತ್ತಮ ಪೆರ್ಲ ಕಾಸರಗೋಡು

ಲೋಕೋಪಯೋಗಿ ಇಲಾಖೆ ಅಧೀನದಲ್ಲಿರುವ ಪೆರ್ಲ-ಸೂರಂಬೈಲ್ ರಸ್ತೆ ಅಭಿವೃದ್ಧಿ ಮರೀಚಿಕೆಯಾಗಿದ್ದು, ಮಳೆಗಾಲದಲ್ಲಿ ಈ ಹಾದಿಯಲ್ಲಿನ ಪ್ರಯಾಣ ಅಪಾಯಕಾರಿ.

ಪೆರ್ಲದಿಂದ ಸ್ವರ್ಗ ಹಾದಿಯಾಗಿ ಸೂರಂಬೈಲ್‌ವರೆಗಿನ 5.8ಕಿ.ಮೀ ಉದ್ದದ ಈ ರಸ್ತೆ ಕರ್ನಾಟಕಕ್ಕೆ ಸಂಪರ್ಕ ಕಲ್ಪಿಸುವ ಪ್ರಮುಖ ಹಾದಿಯಾಗಿದ್ದು, ರಸ್ತೆ ಅಂಚಿಗೆ ಬೆಳೆದು ನಿಂತಿರುವ ಬೃಹತ್ ಮರಗಳು ಪ್ರಯಾಣಿಕರ ಪಾಲಿಗೆ ಅಪಾಯ ಆಹ್ವಾನಿಸುತ್ತಿದೆ. ಕನ್ನಟಿಕಾನ, ಸೈಪಂಗಲ್ಲು, ಗಾಳಿಗೋಪುರ ಮೊದಲಾದೆಡೆ ರಸ್ತೆಯ ಅಂಚಿಗಿರುವ ಮರಗಳು ವಾಹನಗಳಿಗೆ ಭಾರೀ ಅಪಾಯ ತಂದೊಡ್ಡುತ್ತಿದ್ದರೂ, ಇಲಾಖೆ ಅಧಿಕಾರಿಗಳು ಮಾತ್ರ ಇತ್ತ ಕಣ್ಣು ಹಾಯಿಸುತ್ತಿಲ್ಲ. ಅತ್ಯಂತ ಕಡಿದಾದ ಹಾಗೂ ಅಗಲಕಿರಿದಾದ ಈ ರಸ್ತೆಯಲ್ಲಿ ವಾಹನ ಸಂಚಾರ ಹಗ್ಗದ ಮೇಲಿನ ನಡಿಗೆಯಂತಾಗಿದೆ. ಇದರೊಂದಿಗೆ ರಸ್ತೆ ಅಂಚಿಗೆ ವಾಲಿ ನಿಂತಿರುವ ಮರಗಳು ಈ ಹಾದಿಯಾಗಿ ಸಂಚರಿಸುವ ವಾಹನಗಳ ಚಾಲಕರು ಹಾಗೂ ಪ್ರಯಾಣಿಕರನ್ನು ಉಸಿರು ಬಿಗಿ ಹಿಡಿಯುವಂತೆ ಮಾಡುತ್ತಿದೆ. ಹಲವಾರು ಅಪಘಾತಗಳಿಗೆ ಸಾಕ್ಷಿಯಾಗಿರುವ ಪ್ರಸಕ್ತ ರಸ್ತೆಯ ಅಭಿವೃದ್ಧಿಗಾಗಿ ನಾಗರಿಕರು ದೀರ್ಘ ಕಾಲದಿಂದ ಸರ್ಕಾರಕ್ಕೆ ಒತ್ತಡ ಹೇರುತ್ತಾ ಬಂದಿದ್ದಾರೆ.

ಬಿರುಸಿನ ಮಳೆಗೆ ರಸ್ತೆ ಅಂಚಿನ ಮರಗಳು ಮತ್ತಷ್ಟು ರಸ್ತೆಗೆ ವಾಲುತ್ತಿದ್ದು, ದ್ವಿಚಕ್ರ ಸಹಿತ ವಾಹನ ಚಾಲಕರು ಜೀವ ಕೈಯಲ್ಲಿ ಹಿಡಿದು ಸಾಗುವ ಪರಿಸ್ಥಿತಿಯಿದೆ. ಪ್ರತಿ ದಿನ ಹತ್ತಕ್ಕೂ ಹೆಚ್ಚು ಖಾಸಗಿ ಬಸ್‌ಗಳು ಪೆರ್ಲ-ಸ್ವರ್ಗ ಹಾದಿಯಾಗಿ ಪುತ್ತೂರಿಗೆ ಸಂಚಾರ ನಡೆಸುತ್ತಿವೆ. ಬೆಳಗ್ಗೆ ಮತ್ತು ಸಂಜೆ ವೇಳೆ ಶಾಲಾ ಕಾಲೇಜು ತೆರಳುವ ನೂರಾರು ವಿದ್ಯಾರ್ಥಿಗಳು ಈ ಬಸ್‌ಗಳಲ್ಲಿ ಪ್ರಯಾಣಿಸುತ್ತಿದ್ದಾರೆ. ಯಾವುದೇ ಸಂದರ್ಭ ಬುಡಸಹಿತ ಕುಸಿದು ಬೀಳುವ ಸ್ಥಿತಿಯಲ್ಲಿರುವ ಮರಗಳ ತೆರವಿಗೆ ಕ್ರಮ ಕೈಗೊಳ್ಳದ ಲೋಕೋಪಯೋಗಿ ಇಲಾಖೆ ಅಧಿಕಾರಿಗಳು ಇಲ್ಲಿ ಜನರ ಜೀವದೊಂದಿಗೆ ಚೆಲ್ಲಾಟವಾಡುತ್ತಿದ್ದಾರೆ. ಕೆಲವೆಡೆ ರಸ್ತೆ ಅಂಚಿನ ಗುಡ್ಡ ಕುಸಿತದ ಭೀತಿಯಲ್ಲಿದೆ. ಅಪಾಯ ಸಂಭವಿಸುವ ಮೊದಲು ಮರಗಳನ್ನು ತೆರವುಗೊಳಿಸುವಂತೆ ನಾಗರಿಕರು ಆಗ್ರಹಿಸಿದ್ದಾರೆ.

ವರ್ಕಾಡಿ ಪಂಚಾಯಿತಿಯ ನಂದರಪದವಿನಿಂದ ತಿರುವನಂತಪುರ ವರೆಗೆ ನಿರ್ಮಾಣಹಂತದಲ್ಲಿರುವ ಮಲೆನಾಡು ಹೆದ್ದಾರಿ ಇದೇ ಹಾದಿಯಾಗಿ ಸಂಚರಿಸಬೇಕಾಗಿದ್ದರೂ, ಇಲ್ಲಿನ ರಸ್ತೆಗೆ ಅಗತ್ಯವಿರುವ ಜಾಗ ಬಿಟ್ಟುಕೊಡುವ ವಿಚಾರದಲ್ಲಿ ಕೇರಳ ತೋಟಗಾರಿಕಾ ನಿಗಮ(ಪಿಸಿಕೆ)ನಿರ್ಲಕ್ಷ್ಯ ವಹಿಸಿರುವುದರಿಂದ ರಸ್ತೆ ಹಾದುಹೋಗುವ ಪಥವನ್ನೇ ಬದಲಾಯಿಸಿರುವ ಮಾಹಿತಿಯಿದೆ. ಪಿಸಿಕೆ ಜಾಗ ಬಿಟ್ಟುಕೊಡಲು ಹಿಂದೇಟುಹಾಕುತ್ತಿರುವುದರಿಂದ ಈ ಪ್ರದೇಶದಲ್ಲಿರುವ ನಿವಾಸಿಗಳೂ ರಸ್ತೆಗೆ ಜಾಗಬಿಟ್ಟುಕೊಡಲು ಮುಂದಾಗುತ್ತಿಲ್ಲ. ಇದರಿಂದಾಗಿ ಕಳೆದ ಮೂರು ದಶಕಗಳಿಂದ ಪೆರ್ಲ-ಸ್ವರ್ಗ ರಸ್ತೆ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಸರ್ಕಾರಕ್ಕೆ ಸಾಧ್ಯವಾಗಲೇ ಇಲ್ಲ. ಜಿಲ್ಲೆಯ ಬಹುತೇಕ ರಸ್ತೆಗಳು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದ್ದರೆ, ಪೆರ್ಲ-ಸ್ವರ್ಗ ರಸ್ತೆಯಲ್ಲಿ ಮಾತ್ರ ನರಕಯಾತನೆ ಕಡಿಮೆಯಾಗುತ್ತಿಲ್ಲ.

ಪೆರ್ಲ-ಸ್ವರ್ಗ-ವಾಣೀನಗರ ರಸ್ತೆಯನ್ನು ಅಭಿವೃದ್ಧಿಪಡಿಸುವಂತೆ ಎರಡುವರೆ ದಶಕಗಳಿಂದ ಬೇಡಿಕೆ ಇಡುತ್ತಾ ಬರಲಾಗಿದೆ. ರಸ್ತೆ ಅಗಲಗೊಳಿಸುವ ಯಾವುದೇ ಯೋಜನೆಗೂ ಮುಂದಾಗದ ಸರ್ಕಾರ, ಕನಿಷ್ಠ ಜನರ ಸುರಕ್ಷಿತ ಪ್ರಯಾಣಕ್ಕೆ ಸೌಕರ್ಯ ಒದಗಿಸಿ ಕೊಡುವುದು ಒಳಿತು. ರಸ್ತೆ ತೆರಿಗೆ ಹೆಸರಲ್ಲಿ ಕೋಟ್ಯಂತರ ರೂ. ಸಂಗ್ರಹಿಸುವ ಸರ್ಕಾರ ಮೂಲಸೌಕರ್ಯ ಒದಗಿಸಿಕೊಡಲು ಹಿಂದೇಟು ಹಾಕುತ್ತಿರುವುದು ಜನತೆಗೆ ಬಗೆಯುವ ದ್ರೋಹವಾಗಿದೆ. - ನಾರಾಯಣ ಭಟ್, ಕನ್ನಟಿಕಾನ ಕೃಷಿಕ, ಸ್ಥಳೀಯ ನಿವಾಸಿ ರಸ್ತೆ ಅಂಚಿಗೆ ಕಾಂಕ್ರೀಟ್ ಅಳವಡಿಸಿ ಅಗಲಗೊಳಿಸುವ ಕಾಮಗಾರಿ ಪ್ರಗತಿಯಲ್ಲಿದ್ದು, ಮಳೆಗಾಲದ ಹಿನ್ನೆಲೆಯಲ್ಲಿ ಕೆಲಸ ಸ್ಥಗಿತಗೊಳಿಸಲಾಗಿದೆ. ಭೂಕುಸಿತ ಹಾಗೂ ರಸ್ತೆ ಅಂಚಿಗಿರುವ ಅಪಾಯಕಾರಿ ಮರಗಳನ್ನು ತೆರವುಗೊಳಿಸುವ ಬಗ್ಗೆ ಸ್ಥಳಕ್ಕೆ ಭೇಟಿ ನೀಡಿಅಗತ್ಯ ಕ್ರಮ ಕೈಗೊಳ್ಳಲಾಗುವುದು. - ವಿಮಲಾ, ಸಹಾಯಕ ಅಭಿಯಂತರ, ಲೋಕೋಪಯೋಗಿ ರಸ್ತೆ ವಿಭಾಗ ರಸ್ತೆ ಅಂಚಿಗೆ ಮಣ್ಣುಕುಸಿತದಿಂದ ಮರಗಳು ಯಾವುದೇ ಸಂದರ್ಭ ಕುಸಿದು ಬೀಳುವ ಸ್ಥಿತಿಯಲ್ಲಿದೆ.
ರಸ್ತೆ ಅಂಚಿಗೆ ಮಣ್ಣುಕುಸಿತದಿಂದ ಮರಗಳು ಯಾವುದೇ ಸಂದರ್ಭ ಕುಸಿದು ಬೀಳುವ ಸ್ಥಿತಿಯಲ್ಲಿದೆ.