ಬೆಂಗಳೂರು: ದಿಶಾ ಭಾರತದ 'ನನ್ನ ಭಾರತ ಯುವ ಅಭಿಯಾನ'ದ ಭಾಗವಾಗಿ ಆಗಸ್ಟ್ 1 ರಿಂದ 15ರ ವರೆಗೆ ರಾಜ್ಯಾದ್ಯಂತ ಪ್ರವಾಸ ಮಾಡಿದ 'ಸ್ವರಾಜ್ಯ ರಥ' ಬಸವನಗುಡಿಯ ದೊಡ್ಡ ಗಣಪತಿ ದೇವಸ್ಥಾನ ತಲುಪುವ ಮೂಲಕ ಮುಕ್ತಾಯಗೊಂಡಿತು.
ದಿಶಾ ಭಾರತ ಸಂಸ್ಥೆಯ ‘ನನ್ನ ಭಾರತ’ ಅಭಿಯಾನದ ಸಮಾರೋಪ ಸಮಾರಂಭದ ಉಪನ್ಯಾಸ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಸ್ವಯಂಸೇವಕ ಸಂಘದ ಜಂಟಿ ಪ್ರಧಾನ ಕಾರ್ಯದರ್ಶಿ ಡಾ.ಮನಮೋಹನ್ ವೈದ್ಯ ಮಾತನಾಡಿ, 1945ರಲ್ಲಿ ಜರ್ಮನಿ, ಇಂಗ್ಲೆಂಡ್, ಜಪಾನ್ 2ನೇ ವಿಶ್ವಯುದ್ಧದ ಕಾರಣಕ್ಕಾಗಿ ಮತ್ತೊಮ್ಮೆ ತಮ್ಮ ರಾಷ್ಟ್ರದ ಪುನರ್ ನಿರ್ಮಾಣಕ್ಕೆ ಮುಂದಾದರು. 1948ರಲ್ಲಿ ಶತಮಾನಗಳ ಕಾಲ ಕಂಡ ಕನಸ್ಸಿನ ಪ್ರತಿಫಲವಾಗಿ ಇಸ್ರೇಲ್ ತನ್ನ ಸ್ವಂತ ರಾಷ್ಟ್ರದ ಹುಟ್ಟಿನೊಂದಿಗೆ ಪುನರ್ ಉಗಮ ಕಂಡಿತು. ಆದರೆ 1947ರಲ್ಲಿ ಅಂದರೆ ಅವುಗಳಿಗೆ ಸಮಕಾಲೀನವಾಗಿ ಸ್ವಾಧೀನತೆಯನ್ನು ಪಡೆದುಕೊಂಡ ಭಾರತ ನಮ್ಮ ಅಸ್ತಿತ್ವದ ಆತ್ಮ ಯಾವುದು ಎನ್ನುವುದನ್ನು ನಾವು ಮರೆತಿರುವ ಕಾರಣ ಅವರಷ್ಟು ಬೆಳವಣಿಗೆ ಸಾಧಿಸಲು ಆಗಲಿಲ್ಲ ಎಂದರು.
ಭಾರತ ಜೀವನ ಧರ್ಮ ಅಧ್ಯಾತ್ಮಾಧಾರಿತವಾಗಿತ್ತು. ಅದು ಪ್ರತಿ ಭಾರತೀಯನಿಗೂ ಒಂದು ಆಕಾರವನ್ನು ನೀಡಿದೆ. ಸತ್ಯ ಒಂದೇ, ಅದನ್ನು ಅರಿಯುವ ಮಾರ್ಗ ಹಲವು ಎನ್ನುವುದನ್ನು ನಂಬಿದ್ದೇವೆ. ಜಗತ್ತಿನ ಎಲ್ಲರನ್ನು ಎಲ್ಲರನ್ನು ಸಮಾನವಾಗಿ ಕಾಣುತ್ತೇವೆ. ಆದರೂ ಭಾರತದಲ್ಲಿ ಅಸಹಿಷ್ಣುತೆ ಇದೆ ಎನ್ನಲಾಗುತ್ತದೆ. ಸಹಿಷ್ಣುತೆಯೆನ್ನುವುದು ಬಂದಾಗಲೇ ಅಸಹಿಷ್ಣುತೆಯ ಬೀಜ ಭಿತ್ತಲಾಗುತ್ತದೆ ಎನ್ನುವುದ ವಾಸ್ತವ. ಹಾಗಾಗಿ ಸ್ವಾಮಿ ವಿವೇಕಾನಂದರು 1893ರ ಚಿಕಾಗೋ ಉಪನ್ಯಾಸದಲ್ಲಿ ಹೇಳಿದಂತೆ ನಾವು ಸಹಿಸುಕೊಳ್ಳುವುದಕ್ಕಿಂತ ಒಂದು ಹೆಜ್ಜೆ ಮುಂದೆ ಹೋಗಿ ಎಲ್ಲಾ ಮಾರ್ಗಗಳನ್ನು ಒಪ್ಪಿಕೊಳ್ಳುತ್ತೇವೆ. ಜಗತ್ತಿನ ಪ್ರತಿ ಅಂಶವೂ ದೈವಾಂಶ ಸಂಭೂತ ಎಂದು ಭಾವಿಸುತ್ತೇವೆ. ಈ ನಿಲುವುಗಳ ಅರ್ಥ ಏಕತೆಯನ್ನು ನೋಡುವ ಭಾರತದ ದೃಷ್ಟಿಯನ್ನು ತಿಳಸುತ್ತದೆ. ವಿವಿಧತೆಯಲ್ಲಿ ಏಕತೆಯನ್ನು ಕಾಣುವುದು ನಮ್ಮ ಪರಂಪರೆಯೇ ಆಗಿದೆ. ಆದರೆ ಭಾರತ ವಿವಿಧ ಸಂಸ್ಕೃತಿಯ ರಾಷ್ಟ್ರ ಎನ್ನಲಾಗುತ್ತದೆ. ಆದರೆ ವಾಸ್ತವದಲ್ಲಿ ಇದು ಸರಿಯಾದ ವಿಶ್ಲೇಷಣೆಯಲ್ಲ. ಭಾರತದ ಸಂಸ್ಕೃತಿ ವಿವಿಧತೆಯನ್ನು ಆಚರಿಸುವುದಾಗಿದೆ ಎನ್ನುವುದು ಸರಿಯಾದ ವಿಶ್ಲೇಷಣೆ. ನಮ್ಮ ಸಂಸ್ಕೃತಿ ಒಂದೇ. ಅದರ ಆಧಾರ ಆಧ್ಯಾತ್ಮಿಕತೆ.
ಭಾರತದ ಜೀವನಧರ್ಮ ಪ್ರತಿ ಆತ್ಮವೂ ಸಮಾನವಾಗಿ ಶಕ್ತವಾಗಿರುತ್ತದೆ ಎನ್ನುವುದನ್ನು ತಿಳಿಸುತ್ತದೆ. ಸ್ತ್ರೀ ಮತ್ತು ಪುರುಷ ಇಬ್ಬರೂ ಸಮಾನವಾಗಿ ಶಕ್ತರು ಎನ್ನುವುದನ್ನು ಭಾರತ ಮಾತ್ರ ಒಪ್ಪುತ್ತದೆ. ಪ್ರಕೃತಿಯನ್ನು ಆಂತರಿಕವಾಗಿ ಮತ್ತು ಬಾಹ್ಯವನ್ನು ಕಂಡುಕೊಳ್ಳುವ ಮೂಲಕ ಪ್ರತಿ ಭಾರತೀಯ ತನ್ನೊಳಗೆ ದೈವತ್ವವನ್ನು ಪ್ರಕಟೀಕರಿಸಬೇಕು ಎನ್ನುವುದೇ ನಮ್ಮ ಧರ್ಮದ ಧ್ಯೇಯವಾಗಿದೆ. ಅದಕ್ಕಾಗಿ ಭಕ್ತಿಯೋಗ, ಕರ್ಮಯೋಗ, ಜ್ಞಾನಯೋಗ ಮತ್ತು ರಾಜಯೋಗ ಎಂಬ ನಾಲ್ಕು ಮಾರ್ಗಗಳನ್ನು ಮಾಡಲಾಗಿದೆ ಎಂದು ಹೇಳಿದರು.