ವಿಜಯವಾಣಿ ಸುದ್ದಿಜಾಲ ಕಿನ್ನಿಗೋಳಿ
ಪ್ರತಿದಿನ ಮಂಗಳೂರು ನಗರದಲ್ಲಿ 300 ಟನ್, ಬೆಂಗಳೂರು ಮಹಾ ನಗರದಲ್ಲಿ 2,400 ಟನ್, ಇಡೀ ಭಾರತದಲ್ಲಿ 2 ಲಕ್ಷ ಟನ್ ಕಸ ಉತ್ಪತ್ತಿಯಾಗುತ್ತಿದೆ. ಆದರೆ ಇದರಲ್ಲಿ ಕೇವಲ 40% ಮಾತ್ರ ನಿರ್ವಹಣೆಯಾಗುತ್ತಿದೆ. ಉಳಿದ ಕಸ ಹಾಗೂ ಪ್ಲಾಸ್ಟಿಕ್ ತ್ಯಾಜ್ಯಗಳು ವಿವಿಧ ನೀರಿನ ಮೂಲಗಳಿಗೆ ಸೇರಿ ಸಮುದ್ರ ಸೇರುತ್ತದೆ. ಅಲ್ಲಿ ಪ್ಲಾಸ್ಟಿಕ್ ತ್ಯಾಜ್ಯಗಳು ಅತಿಸೂಕ್ಷ್ಮ ಕಣಗಳಾಗಿ ವಿಭಜನೆ ಹೊಂದಿ ಮೈಕ್ರೋ ಪ್ಲಾಸ್ಟಿಕ್ ರೂಪದಲ್ಲಿ ಉಪ್ಪು ಹಾಗೂ ಮೀನುಗಳ ರೂಪದಲ್ಲಿ ನಮ್ಮ ತಟ್ಟೆಗೆ ಹಿಂತಿರುಗಿ ಬರುತ್ತದೆ ಎಂದು ರಾಮಕೃಷ್ಣ ಮಿಷನ್ ಸ್ವಚ್ಛತಾ ಅಭಿಯಾನದ ಸಂಯೋಜಕ ರಂಜನ್ ಬೆಳ್ಳರ್ಪಾಡಿ ಹೇಳಿದರು.
ಮಂಗಳೂರು ರಿಫೈನರಿ ಆ್ಯಂಡ್ ಪೆಟ್ರೋಕೆಮಿಕಲ್ಸ್ ಲಿಮಿಟೆಡ್ ಸಂಸ್ಥೆಯ ವತಿಯಿಂದ ಬಡಗ ಎಕ್ಕಾರು ಸರಕಾರಿ ಪ್ರೌಢಶಾಲೆಯಲ್ಲಿ ಗುರುವಾರ ನಡೆದ ಸ್ವಚ್ಛತಾ ಪಕ್ವಾಡ ಕಾರ್ಯಕ್ರಮ- 2024ರಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪಾಲ್ಗೊಂಡು ಅವರು ಸ್ವಚ್ಛತೆಯ ಅರಿವು ಮೂಡಿಸಿದರು.
ಪ್ರತಿ ದಿನ ಪ್ರತಿ ಮನೆಯಲ್ಲಿ ಉತ್ಪತ್ತಿಯಾಗುವ ಕಸದ ಪ್ರಮಾಣ ಸರಾಸರಿ ಒಂದು ಕೆ.ಜಿ., ಈ ಕಸದಲ್ಲಿ 60% ಹಸಿ ಕಸವಾಗಿದ್ದು, ಈ ಕಸವನ್ನು ಸೂಕ್ತವಾಗಿ ನಿರ್ವಹಣೆ ಮಾಡುವ ಸಾಧ್ಯತೆಗಳ ಬಗ್ಗೆ ವಿದ್ಯಾರ್ಥಿಗಳು, ಪೋಷಕರಿಗೆ ತಿಳಿವಳಿಕೆ ಮೂಡಿಸಿದರು.
ಈ ಸಂದರ್ಭದಲ್ಲಿ ಶಾಲೆಯ 50 ವಿದ್ಯಾರ್ಥಿಗಳಿಗೆ ಸಂಸ್ಥೆ ವತಿಯಿಂದ ಸ್ಕಾಲರ್ ಶಿಪ್ ನೀಡಲಾಯಿತು. ಕಾರ್ಯಕ್ರಮದಲ್ಲಿ ತ್ಯಾಜ್ಯ ನಿರ್ವಹಣೆಯ ಕುರಿತು ಪ್ರಾತ್ಯಕ್ಷಿಕೆ ಮೂಲಕ ಹಸಿ ಕಸದಿಂದ ಉಪಯುಕ್ತ ಗೊಬ್ಬರವನ್ನು ಮನೆಯಲ್ಲಿ ತಯಾರಿಸುವ ವಿಧಾನದ ಬಗ್ಗೆ ಉಪಯುಕ್ತ ಮಾಹಿತಿಗಳನ್ನು ನೀಡಲಾಯಿತು.
ಎಂ.ಆರ್.ಪಿ.ಎಲ್. ಸಂಸ್ಥೆಯ ಮಾನವ ಸಂಪನ್ಮೂಲ ಅಧಿಕಾರಿ ಸ್ಟೀವನ್ ಪಿಂಟೋ ಸ್ವಚ್ಛತಾ ಸಂಕಲ್ಪವನ್ನು ವಿದ್ಯಾರ್ಥಿಗಳಿಗೆ ಬೋಧಿಸಿದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿ ನಾಗರಾಜ ರಾವ್ ಸಂಸ್ಥೆಯ ಪ್ರತಿನಿಧಿಯಾಗಿ ಉಪಸ್ಥಿತರಿದ್ದರು. ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಸುದೀಪ್ ಅಮೀನ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು.
ಎಂ.ಆರ್.ಪಿ.ಎಲ್. ಸಂಸ್ಥೆಯ ಹಿರಿಯ ಅಧಿಕಾರಿ ನಾಗರಾಜ ರಾವ್, ಎಕ್ಕಾರು ಗ್ರಾ.ಪಂ. ಉಪಾಧ್ಯಕ್ಷೆ ಪದ್ಮಾಕ್ಷಿ, ಶಾಲಾಭಿವೃದ್ಧಿ ಸಮಿತಿ ಸದಸ್ಯರಾದ ಸುರೇಶ್ ಕೆ. ಮೆಲ್ವಿನ್, ಬಬಿತಾ, ವಿನೋದಾ, ಮುಖ್ಯ ಶಿಕ್ಷಕಿ ಇಂದಿರಾ ಎನ್.ರಾವ್, ಶಿಕ್ಷಕಿಯರಾದ ಪೂರ್ಣಿಮಾ ಎಚ್. ಎಂ., ಜ್ಯೋತಿ ಬಿ., ರಾಜಶ್ರೀ ಕೆ., ರಮ್ಯಾ ಕೆ., ವಿದ್ಯಾಲತಾ, ವಿನ್ನಿ ನಿರ್ಮಲಾ ಡಿಸೋಜ, ಜಯಂತಿ ಎಂ., ಶಿಕ್ಷಕ ಡಾ.ಅನಿತ್ ಕುಮಾರ್, ವಿದ್ಯಾರ್ಥಿಗಳು ಹಾಗೂ ಪೊಷಕರು ಉಪಸ್ಥಿತರಿದ್ದರು. ಶಿಕ್ಷಕಿ ವಿದ್ಯಾಗೌರಿ ಎಂ.ಕೆ. ಸ್ವಾಗತಿಸಿದರು. ಚಿತ್ರಾಶ್ರೀ ಕೆ.ಎಸ್. ವಂದಿಸಿದರು.