ಜಿಲ್ಲೆ

ಮೂರು ಕಂದಮ್ಮಗಳ ನಿಗೂಢ ಸಾವು; ರುಬೆಲ್ಲಾ ಅಡ್ಡ ಪರಿಣಾಮ ಶಂಕೆ

Webdesk - Ravikanth

ಬೆಳಗಾವಿ: ಮೈಲಿಬೇನೆ ನಿಯಂತ್ರಣಕ್ಕಾಗಿ ರುಬೆಲ್ಲಾ ಚುಚ್ಚುಮದ್ದು ನೀಡಲಾಗಿದ್ದ ಮೂವರು ಮಕ್ಕಳು ಅಸ್ವಸ್ಥಗೊಂಡು ಇಲ್ಲಿಯ ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ನಡೆದಿದೆ. ರಾಮದುರ್ಗ ತಾಲೂಕಿನ ಬೋಚಬಾಳ ಗ್ರಾಮದ ಪವಿತ್ರಾ ಹುಲಗೂರ (13 ತಿಂಗಳು), ಮಧು ಉಮೇಶ ಕುರಗುಂದಿ (14 ತಿಂಗಳು) ಹಾಗೂ ರಾಮದುರ್ಗ ತಾಲೂಕಿನ ಮಲ್ಲಾಪುರ ಗ್ರಾಮದ ಚೇತನ (15 ತಿಂಗಳು) ಮೃತಕಂದಮ್ಮಗಳು. ಸಾಲಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಸಿಬ್ಬಂದಿ ಒಟ್ಟು 17 ಮಕ್ಕಳಿಗೆ ಜ. 13ರಂದು ಮೈಲಿಬೇನೆ ನಿಯಂತ್ರಣದ ರುಬೆಲ್ಲಾ ಚುಚ್ಚುಮದ್ದು ನೀಡಿದ್ದರು. ಆ ಬಳಿಕ ನಾಲ್ಕು ಮಕ್ಕಳು ಅಸ್ವಸ್ಥಗೊಂಡಿದ್ದವು. ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೇ ಒಂದು ಮಗು ಮೃತಪಟ್ಟಿತ್ತು. ಮೂವರು ಮಕ್ಕಳನ್ನು ಜಿಲ್ಲಾಸ್ಪತ್ರೆಗೆ ರವಾನಿಸಲಾಗಿತ್ತು. ಭಾನುವಾರ 2 ಮಕ್ಕಳು ಮೃತಪಟ್ಟಿದ್ದು, ಇನ್ನೊಂದು ಮಗು ಸಾವು ಬದುಕಿನ ಮಧ್ಯೆ ಹೋರಾಡುತ್ತಿದೆ.

2 ಗಂಟೆಯಲ್ಲೇ ರಿಯಾಕ್ಷನ್: ರುಬೆಲ್ಲಾ ಲಸಿಕೆ ಪಡೆದ 2 ಗಂಟೆಯಲ್ಲೇ ಅಡ್ಡ ಪರಿಣಾಮವಾಗಿದೆ ಎನ್ನಲಾಗಿದೆ. ಲಸಿಕೆ, ರಕ್ತದ ಮಾದರಿಯನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ವರದಿ ಬಂದ ಬಳಿಕ ಮಕ್ಕಳ ಮರಣಕ್ಕೆ ಕಾರಣ ತಿಳಿಯಲಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಎಸ್.ವಿ. ಮುನ್ಯಾಳ ಪ್ರತಿಕ್ರಿಯೆ ನೀಡಿದ್ದಾರೆ.

ಈ ಪ್ರಕರಣದಲ್ಲಿ ಕ್ಲಿನಿಕಲ್ ಎಕ್ಸಾಮಿನೇಷನ್ ಮಾಡಬೇಕಾಗುತ್ತದೆ. ಮಾಡುತ್ತೇವೆ. ಪೋಸ್ಟ್ ಮಾರ್ಟಂ ಮಾಡಿದ ಬಳಿಕ ಸ್ಪಷ್ಟ ಕಾರಣ ಗೊತ್ತಾಗಲಿದೆ. ಲಸಿಕೆಯಿಂದಲೇ ಸಾವಾಗಿದೆಯೇ ಎಂಬ ವಿಚಾರ ನಂತರವಷ್ಟೇ ತಿಳಿಯುತ್ತದೆ. | ಡಾ.ಸಿ.ಎನ್.ಅಶ್ವತ್ಥನಾರಾಯಣ ಉನ್ನತ ಶಿಕ್ಷಣ ಸಚಿವ

ವರದಿ ಕೇಳಿದ ಸಚಿವ ಸುಧಾಕರ್: ಮೂರು ಮಕ್ಕಳು ನಿಗೂಢವಾಗಿ ಮೃತಪಟ್ಟ ಘಟನೆಗೆ ಸಂಬಂಧಪಟ್ಟಂತೆ ಸಂಪೂರ್ಣ ವರದಿ ನೀಡುವಂತೆ ಬೆಳಗಾವಿ ಡಿಎಚ್​ಒಗೆ ಆರೋಗ್ಯ ಸಚಿವ ಸುಧಾಕರ್ ಸೂಚನೆ ನೀಡಿದ್ದಾರೆ. ಡಿಎಚ್​ಒಗೆ ಕರೆ ಮಾಡಿದ್ದ ಸಚಿವರು, ಲಸಿಕೆಯಿಂದ ಮಕ್ಕಳು ಮೃತಪಟ್ಟಿವೆಯೇ? ಅಥವಾ ಇಲಾಖೆ ಸಿಬ್ಬಂದಿಯ ಬೇಜವಾಬ್ದಾರಿ ಇದೆಯೇ ಎಂಬ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ವರದಿ ನೀಡುವಂತೆ ಸೂಚನೆ ನೀಡಿದ್ದಾರೆ.