ಜಿಲ್ಲೆ

ಜುಲೈ ಅಂತ್ಯದೊಳಗೆ ಕೆರೆಗಳ ಸರ್ವೇ ಪೂರ್ಣಗೊಳಿಸಲು ಡಿಸಿ ಆದೇಶ

ಕಾರವಾರ: ಎಲ್ಲ ತಹಸೀಲ್ದಾರಗಳು ಜುಲೈ ಅಂತ್ಯದೊಳಗೆ ತಮ್ಮ ವ್ಯಾಪ್ತಿಯ ಕೆರೆಗಳನ್ನು ಗುರುತಿಸಿ, ಸಂಬಂಧಪಟ್ಟ ಇಲಾಖೆಗಳ ಸಮನ್ವಯ ಸಾಧಿಸಿ ಸರ್ವೇ ಮಾಡಿ ಗಡಿ ಗುರುತಿಸುವ ಕಾರ್ಯ ಮಾಡಬೇಕು ಎಂದು ಜಿಲ್ಲಾಧಿಕಾರಿ ಪ್ರಭುಲಿಂಗ ಕವಳಿಕಟ್ಟಿ ಸೂಚಿಸಿದರು.

ಜಿಲ್ಲಾಧಿಕಾರಿ ಕಚೇರಿಯಲ್ಲಿ ಸೋಮವಾರ ಆಯೋಜಿಸಿದ್ದ ಕರ್ನಾಟಕ ಕೆರೆ ಸಂರಕ್ಷಣೆ ಮತ್ತು ಅಭಿವೃದ್ಧಿ ಪ್ರಾಧಿಕಾರದ ಜಿಲ್ಲಾ ಕಾರ್ಯನಿರ್ವಹಣಾ ಸಮಿತಿಯ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕೆರೆಗಳ ಸಂರಕ್ಷಣೆ ಮತ್ತು ಜೀರ್ಣೋದ್ಧಾರಕ್ಕೆ ಹೆಚ್ಚಿನ ಒತ್ತು ನೀಡಬೇಕು. ಕೆರೆಗಳ ಸಮೀಕ್ಷೆ ಮಾಡಿ ಗಡಿ ಗುರುತಿಸಿದ ನಂತರ ಮತ್ತೊಮ್ಮೆ ಒತ್ತುವರಿಯಾಗದಂತೆ ನಿಗಾ ವಹಿಸಬೇಕು. ನ್ಯಾಯಾಲಯ ಪ್ರಕರಣಗಳಲ್ಲಿ ಇದ್ದಂತಹ ಕೆರೆಗಳನ್ನು ನ್ಯಾಯಾಲಯದ ಸೂಚನೆಯಂತೆ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದರು.

ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಯಾದ ಸಣ್ಣ ನೀರಾವರಿ ಇಲಾಖೆ ಇಇ ಅವಿನಾಶ ಆಲೂರು, ಜಿಲ್ಲೆಯಲ್ಲಿ 11 ತಾಲೂಕುಗಳಿಂದ ಒಟ್ಟು 2,118 ಕೆರೆಗಳಿದ್ದು, ಅದರಲ್ಲಿ ಕಾರವಾರ, ಕುಮಟಾ, ಅಂಕೋಲಾ, ಭಟ್ಕಳ ಮತ್ತು ಹೊನ್ನಾವರ ತಾಲೂಕುಗಳಲ್ಲಿ ಕೆರೆಗಳ ಸಮೀಕ್ಷೆ ಪೂರ್ಣಗೊಂಡಿದೆ.

ಹಳಿಯಾಳ, ಜೊಯಿಡಾ, ಶಿರಸಿ, ಸಿದ್ದಾಪುರ, ಯಲ್ಲಾಪುರ, ಮುಂಡಗೋಡ ತಾಲೂಕುಗಳಲ್ಲಿ ಕೆರೆಗಳ ಸಮೀಕ್ಷೆ, ಸರ್ವೇ ಕಾರ್ಯ ಬಾಕಿ ಇದೆ. ಅವುಗಳನ್ನೂ ಶೀಘ್ರ ಪೂರೈಸಲಾಗುವುದು ಎಂದರು.

ಅಪರ ಜಿಲ್ಲಾಧಿಕಾರಿ ರಾಜು ಮೊಗವೀರ, ಜಿಲ್ಲಾ ಕಾನೂನು ಸೇವಾ ಪ್ರಾಽಕಾರದ ಸದಸ್ಯ ಕಾರ್ಯದರ್ಶಿ ರೇಣುಕಾ ಡಿ.ರಾಯ್ಕರ್, ಉಪವಿಭಾಗಾಧಿಕಾರಿ ಜಯಲಕ್ಷ್ಮೀ ರಾಯಕೋಡ, ಸಣ್ಣ ನೀರಾವರಿ ಇಲಾಖೆ ಎಇಇ ವಿನೋದ ನಾಯ್ಕ ಸಭೆಯಲ್ಲಿದ್ದರು.