

ಕಾರವಾರ: ಸುಮಾರು 2500 ವರ್ಷಗಳ ಹಿಂದಿನ ಬೃಹತ್ ಶಿಲಾಯುಗ ಸಂಸ್ಕೃತಿಗೆ ಸೇರಿದ ನಿಲಿಸುಗಲ್ಲೊಂದನ್ನು ಹೊನ್ನಾವರ ತಾಲೂಕಿನ ಹಿರೇಬೈಲು ಗ್ರಾಮದಲ್ಲಿ ಇತಿಹಾಸ ವಿದ್ಯಾರ್ಥಿಗಳು ಗುರುತಿಸಿದ್ದಾರೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಪ್ರಾಚೀನ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಶೋಧನ ವಿದ್ಯಾರ್ಥಿ ಸುಬ್ರಮಣ್ಯ ಮಂಜುನಾಥ ಆಚಾರಿ ಇತ್ತೀಚೆಗೆ ಹಿರೇಬೈಲು ಗ್ರಾಮದಲ್ಲಿ ಕೈಗೊಂಡ ಕ್ಷೇತ್ರ ಕಾರ್ಯದಲ್ಲಿ ಇದನ್ನು ಗುರುತಿಸಿ ವರದಿ ಮಾಡಿದ್ದಾರೆ.
ಹಿರೇಬೈಲಿನ ಶಂಭುಲಿಂಗೇಶ್ವರ ದೇವಾಲಯಕ್ಕೆ ಹೋಗುವ ಮಾರ್ಗದಲ್ಲಿ ರಾಜು ನಾಯ್ಕ ಎಂಬುವರ ಜಮೀನಿನ ಹತ್ತಿರ ಸೇತುವೆ ಎಡಭಾಗದಲ್ಲಿ ಈ ಕಲ್ಲು ಪತ್ತೆಯಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಅದು 8 ಅಡಿ ಎತ್ತ ಹಾಗೂ ಒಂದು ಅಡಿ ಅಗಲವಾಗಿದೆ. ತುಸು ಪೂರ್ವಕ್ಕೆ ಬಾಗಿದೆ. ಪಕ್ಕದಲ್ಲಿಯೇ ಮೂರು ಅಡಿ ಎತ್ತರದ ಮತ್ತೊಂದು ನಿಲುಸುಗಲ್ಲು ಕೂಡ ಇದೆ.
ಬೃಹತ್ ಶಿಲಾಯುಗದ ಜನರು ಶವ ಸಂಸ್ಕಾರ ಮಾಡಿ ಆ ಸ್ಥಳದಲ್ಲಿ ನೈಸರ್ಗಿಕವಾಗಿ ದೊರೆಯುವ ಉದ್ದನೆಯ ಕಲ್ಲನ್ನು ಲಂಬವಾಗಿ ನಿಲ್ಲಿಸುತ್ತಿದ್ದರು. ಇವುಗಳನ್ನು ಇಂದು ನಿಲಿಸುಗಲ್ಲು ಎಂದು ಕರೆಯುತ್ತಾರೆ.
ಸದ್ಯ ಹಿರೇಬೈಲು ಗ್ರಾಮದ ಜನರು ಈ ನಿಲುಸುಗಲ್ಲನ್ನು ಜಟಕೇಶ್ವರ ಎಂದು ಕರೆದು ವರ್ಷಕ್ಕೆ ಎರಡು ಬಾರಿ ಪೂಜೆ ಸಲ್ಲಿಸುತ್ತಿರುವುದಾಗಿ ತಿಳಿಸಿದರು. ಈ ಹಿಂದೆ ಹಿರಿಯ ಇತಿಹಾಸ ಸಂಶೋಧಕ ಅ.ಸುಂದರಂ ಅವರು ಹೊನ್ನಾವರ ರಾಮತೀರ್ಥ ಬಳಿ ಶಿಲಾಯುಗದ ಅವಶೇಷಗಳನ್ನು ಗುರುತಿಸಿದ್ದರು ಎಂದು ವಿವರಿಸಿದ್ದಾರೆ.