ಹೊನ್ನಾಳಿ/ನ್ಯಾಮತಿ: ಕೋವಿಡ್ ಪಿಡುಗಿನ ವೇಳೆ ಪ್ರಾಣ ಪಣಕ್ಕಿಟ್ಟು ಆರೋಗ್ಯ ಸೇವೆ ಒದಗಿಸಿದ ಹೊನ್ನಾಳಿ - ನ್ಯಾಮತಿ ಅವಳಿ ತಾಲೂಕುಗಳ 5,500 ಕರೊನಾ ಸೇನಾನಿಗಳಿಗೆ ಸನ್ಮಾನ ಹಾಗೂ ಇವರಿಗೆ ಆತ್ಮಬಲ ತುಂಬಿ ಪ್ರೋತ್ಸಾಹಿಸಿದ ಹಿಂದಿನ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಕರೊನಾ ಸೂಪರ್ ವಾರಿಯರ್ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಒಂದೇ ದಿನ ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗೌರವ ಸಲ್ಲಿಸಿರುವುದು ರಾಜ್ಯದಲ್ಲಿ ಇದೇ ಮೊದಲು ಎನ್ನಲಾಗಿದ್ದು, ಶಾಸಕ ಎಂ.ಪಿ. ರೇಣುಕಾಚಾರ್ಯ ಅವರು ಈ ಕಾರ್ಯಕ್ರಮ ಆಯೋಜಿಸಿದ್ದರು. ನ್ಯಾಮತಿ ಸರ್ಕಾರಿ ಕಾಲೇಜು ಮೈದಾನದಲ್ಲಿ ಮಂಗಳವಾರ ನಡೆದ ಈ ಸಮಾರಂಭ ರಾಜ್ಯಕ್ಕೆ ಮಾದರಿ ಎಂದು ಮಾಜಿ ಸಿಎಂ ಬಿಎಸ್‌ವೈ ಸೇರಿ ಹಲವು ಗಣ್ಯರು ಮೆಚ್ಚುಗೆ ವ್ಯಕ್ತಪಡಿಸಿದರು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಯಡಿಯೂರಪ್ಪ, ಪರಸ್ಪರ ಮುಖ ಕೊಟ್ಟು ಮಾತನಾಡಲು ಹಿಂಜರಿಯುವಂತಹ ಸನ್ನಿವೇಶದಲ್ಲಿ ಆಶಾ, ಅಂಗನವಾಡಿ, ಆರೋಗ್ಯ, ಪೊಲೀಸ್ ಸೇರಿ ಇತರರು ಸಲ್ಲಿಸಿದ ಸೇವೆಗೆ ಬೆಲೆ ಕಟ್ಟಲಾಗದು ಎಂದರು. ತಮ್ಮ ಪ್ರಾಣ ಪಣಕ್ಕಿಟ್ಟು, ಮಕ್ಕಳು ಮರಿಗಳನ್ನು ದೂರವಿಟ್ಟು ತಿಂಗಳೊಪ್ಪತ್ತು ಸೇವೆ ಸಲ್ಲಿಸಿದ ಎಲ್ಲರೂ ಪ್ರಾತಃಸ್ಮರಣೀಯರು. ಇಂತಹ ಕಾರ್ಯಕ್ರಮ ರಾಜ್ಯದ ಇತರೆಡೆ ವಿಸ್ತರಣೆಯಾಗಲಿ ಎಂದು ಆಶಿಸಿದರು.
ರೇಣುಕಾಚಾರ್ಯಗೆ ಬಿಎಸ್‌ವೈ-ಸುಧಾಕರ್ ಶ್ಲಾಘನೆ: ಕೋವಿಡ್‌ನಿಂದ ಜನ ತಲ್ಲಣಗೊಂಡ ಸಮಯದಲ್ಲಿ ಶಾಸಕ ಎಂ.ಪಿ.ರೇಣುಕಾಚಾರ್ಯ ಮನೆಯಲ್ಲಿ ಕೂರದೆ ಹೊನ್ನಾಳಿ-ನ್ಯಾಮತಿ ಅವಳಿ ತಾಲೂಕಿನ ಮನೆಮನೆಗೆ ಹೋಗಿ ಜಾಗೃತಿ ಮೂಡಿಸುವ ಜತೆಗೆ ಅಸಂಘಟಿತರು, ಬಡವರಿಗೆ ಉಚಿತ ಊಟ, ಔಷಧ, ಆಹಾರ ಕಿಟ್ ವಿತರಿಸಿದರು ಎಂದು ಬಿಎಸ್‌ವೈ ಶ್ಲಾಘಿಸಿದರು.
ಅರಬಗಟ್ಟದಲ್ಲಿ ಒಂದು ಸಾವಿರ ಬೆಡ್‌ಗಳ ಕೋವಿಡ್ ಕೇರ್ ಕೇಂದ್ರ ತೆರೆಯುವ ಜತೆಗೆ ಅಲ್ಲಿಯೇ ವಾಸ್ತವ್ಯ ಹೂಡಿದ, ಯೋಗಪಾಠ ಹೇಳಿಕೊಟ್ಟ, ಸಾಮಾಜಿಕ ಅಂತರ ಕಾಪಾಡಿಕೊಂಡು ಸಾಮೂಹಿಕ ಊಟ ಸೇವಿಸಿದ ದೇಶದ ಏಕೈಕ ಶಾಸಕ ಎಂದು ಬಣ್ಣಿಸಿದರು. ಶಾಸಕರಿಗೆ ಇರಬೇಕಾದ ಸಾಮಾಜಿಕ ಬದ್ಧತೆಗೆ ಎಂ.ಪಿ. ರೇಣುಕಾಚಾರ್ಯ ಮಾದರಿ. ಸೋಂಕಿತರು ಆರೋಗ್ಯವಾಗಿ ಮನೆಗೆ ಹಿಂದಿರುಗುವವರೆಗೂ ಆರೈಕೆ ಮಾಡಿದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಇಂತಹ ಶಾಸಕರನ್ನು ಪಡೆದಿರುವ ನೀವೇ ಧನ್ಯರು ಎಂದಯ ಆರೋಗ್ಯ ಸಚಿವ ಸುಧಾಕರ್ ತಿಳಿಸಿದರು.
ಕರೊನಾ ನಿಯಂತ್ರಣದಲ್ಲಿ ಯಶಸ್ವಿ: ರಾಜ್ಯದಲ್ಲಿ ಕರೊನಾ ನಿಯಂತ್ರಿಸುವಲ್ಲಿ ಯಶಸ್ವಿಯಾಗಿದ್ದೇವೆ. ಇಂಡಿಯಾ ಟುಡೆ ಸಮೀಕ್ಷೆ ನಡೆಸಿ ನಮ್ಮನ್ನು ಗೌರವಿಸಿದೆ. ಪ್ರತಿಪಕ್ಷಗಳು ಬಾಯಿ ಚಪಲಕ್ಕೆ ಹಾಗೂ ರಾಜಕೀಯ ಕಾರಣಗಳಿಗೆ ಟೀಕೆ ಮಾಡುತ್ತಿವೆ ಎಂದು ಆರೋಗ್ಯ ಸಚಿವ ಸುಧಾಕರ್ ಹೇಳಿದರು. ಎರಡು ಬಾರಿ ಕರೊನಾ ಬಂದರೂ ಬಿ.ಎಸ್. ಯಡಿಯೂರಪ್ಪ ಅವರು ವಿಶ್ರಾಂತಿ ಬಯಸಲಿಲ್ಲ. ಆಸ್ಪತ್ರೆಯಿಂದಲೇ ಕಡತ ವಿಲೇವಾರಿ ಮಾಡಿದರು. ಸಭೆ ನಡೆಸಿ ಸೋಂಕು ನಿಯಂತ್ರಣಕ್ಕೆ ಕ್ರಮ ಕೈಗೊಂಡರು. ಬಿಎಸ್‌ವೈ ನಮಗೆಲ್ಲ ಪ್ರೋತ್ಸಾಹದ ಚಿಲುಮೆ ಎಂದರು.
ಯಡಿಯೂರಪ್ಪ ಕೊಡುಗೆ ದೊಡ್ಡದು: ನನಗೆ ರಾಜಕೀಯವಾಗಿ ಬಲ ತುಂಬಿದವರೇ ಯಡಿಯೂರಪ್ಪ. ಹೊನ್ನಾಳಿ ಹಾಗೂ ನ್ಯಾಮತಿ ಅವಳಿ ತಾಲೂಕಿನ ಅಭಿವೃದ್ಧಿಗೆ ಅವರ ಆಡಳಿತಾವಧಿಯಲ್ಲಿ ದೊಡ್ಡ ಕೊಡುಗೆ ನೀಡಿದ್ದಾರೆ. ಕರೊನಾ ಸಂಕಷ್ಟದಲ್ಲೂ ಕೆರೆ ತುಂಬಿಸಲು 500 ಕೋಟಿ ರೂ., ಹೊನ್ನಾಳಿ ಪಾರ್ಕ್‌ಗೆ 18.5 ಕೋಟಿ ರೂ., ಟ್ರೀ ಪಾರ್ಕ್‌ಗೆ 4.5 ಕೋಟಿ ರೂ., ಶಾಲಾ ಕಟ್ಟಡ ಸೇರಿ ವಿವಿಧ ಕಾಮಗಾರಿಗಳಿಗೆ 200 ಕೋಟಿ ರೂ. ನೀಡಿದ್ದಾರೆ ಶಾಸಕ ರೇಣುಕಾಚಾರ್ಯ ಹೇಳಿದರು. ಕೋವಿಡ್ ನಿರ್ವಹಣೆಯಲ್ಲಿ ಬಿಎಸ್‌ವೈ ಪಾತ್ರ ದೊಡ್ಡದು. ವಯಸ್ಸು ಲೆಕ್ಕಿಸದೆ ಕೆಲಸ ಮಾಡಿದರು ಎಂದು ಸಂಸದ ಜಿ.ಎಂ.ಸಿದ್ದೇಶ್ವರ್ ಮೆಚ್ಚುಗೆ ಸೂಚಿಸಿದರು. ಮಾಯಕೊಂಡ ಶಾಸಕ ಲಿಂಗಣ್ಣ, ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ, ಜಿಪಂ ಸಿಇಒ ಡಾ. ವಿಜಯ ಮಹಾಂತೇಶ್ ದಾನಮ್ಮನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷ್ಯಂತ್ ಇತರರಿದ್ದರು.
5.500 ಸೇನಾನಿಗಳಿಗೆ ಏಕಕಾಲಕ್ಕೆ ಸನ್ಮಾನ: ವೇದಿಕೆ ಮುಂಭಾಗ 5,500 ಕರೊನಾ ಸೇನಾನಿಗಳಿಗೆ ಏಕಕಾಲಕ್ಕೆ ಸನ್ಮಾನ ಮಾಡಲಾಯಿತು. ಪುಷ್ಪಾರ್ಚನೆ ಮಾಡಿ ಪ್ರಶಸ್ತಿ ಫಲಕ, ಪ್ರಮಾಣಪತ್ರ ವಿತರಿಸಲಾಯಿತು. ಮಹಿಳಾ ಸೇನಾನಿಗಳಿಗೆ ತಲಾ ಎರಡು ಸೀರೆ, ಕುಂಕುಮ, ಅರಿಶಿಣ, ಬಳೆ ಒಳಗೊಂಡ ಕಿಟ್ ನೀಡಲಾಯಿತು.
ಯಾವತ್ತೂ ಕುಟುಂಬಕ್ಕೆ ಸಮಯ ನೀಡಿಲ್ಲ. ನನ್ನ ಕೊನೆ ಉಸಿರಿನವರೆಗೆ ಹೊನ್ನಾಳಿ- ನ್ಯಾಮತಿ ಅವಳಿ ತಾಲೂಕಿನ ಜನಸೇವೆ ಮಾಡುತ್ತೇನೆ.| ಎಂ.ಪಿ.ರೇಣುಕಾಚಾರ್ಯ ಶಾಸಕ
ಸರ್ಕಾರಕ್ಕೆ ಬಿಎಸ್‌ವೈ ಬ್ಯಾಕ್ ಇಂಜಿನ್: ಬಿ.ಎಸ್.ಯಡಿಯೂರಪ್ಪ ಜನಮಾನಸದಲ್ಲಿ ನೆಲೆಸಿದ ಧೀಮಂತ ನಾಯಕ. ಅವರ ಸಲಹೆ ಹಾಗೂ ಸಹಕಾರದಿಂದ ಸರ್ಕಾರ ಮುನ್ನೆಡೆಸಲಾಗುತ್ತಿದೆ. ಮುಖ್ಯಮಂತ್ರಿ ಆದಿಯಾಗಿ ಸಚಿವ ಸಂಪುಟದ ಎಲ್ಲರೂ ಬಿಎಸ್‌ವೈ ಸಲಹೆ ಪಡೆಯುತ್ತಾರೆ. ಅವರು ಸರ್ಕಾರಕ್ಕೆ ಬ್ಯಾಕ್ ಇಂಜಿನ್ ಇದ್ದಂತೆ ಎಂದು ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಹೇಳಿದರು.