ಜಿಲ್ಲೆ

ಸಮಯ ಸದುಪಯೋಗದಿಂದ ಜೀವನದಲ್ಲಿ ಉನ್ನತಿ : ರೂಪಾ ವಸುಂದರ ಆಚಾರ್ಯ ಹೇಳಿಕೆ

ಸೌಮ್ಯ ಆರ್

ವಿಜಯವಾಣಿ ಸುದ್ದಿಜಾಲ ಮೂಡುಬಿದಿರೆ

ಪ್ರತಿಯೊಬ್ಬರಲ್ಲಿಯೂ ಪ್ರತಿಭೆ, ಕೌಶಲಗಳಿರುತ್ತವೆ. ಅದನ್ನು ಅಭಿವ್ಯಕ್ತಿಪಡಿಸಲು ಬೇಸಿಗೆ ಶಿಬಿರಗಳು ತಳಹದಿಯಾಗುತ್ತವೆ. ವಿದ್ಯಾರ್ಥಿ ಹಂತದಲ್ಲೇ ಸಮಯ ಸದುಪಯೋಗಪಡಿಸಿಕೊಂಡು ಜೀವನದಲ್ಲಿ ಉನ್ನತಿ ಸಾಧಿಸಬೇಕು ಎಂದು ಡ್ರೈ ಫ್ಲವರ್ ಕಲಾವಿದೆ ರೂಪಾ ವಸುಂದರ ಆಚಾರ್ಯ ಹೇಳಿದರು.

ಕಾಳಿಕಾಂಬಾ ಮಹಿಳಾ ಸಮಿತಿ ವತಿಯಿಂದ ಶ್ರೀ ಗುರುಮಠ ಕಾಳಿಕಾಂಬಾ ದೇವಸ್ಥಾನದಲ್ಲಿ ನಡೆದ ಎರಡು ದಿನಗಳ ಬೇಸಿಗೆ ಉಚಿತ ಶಿಬಿರದಲ್ಲಿ ಮಾತನಾಡಿದರು.

ರಂಗ ನಿರ್ದೇಶಕ, ಆಳ್ವಾಸ್ ರಂಗ ಅಧ್ಯಯನ ಕೇಂದ್ರ ನಿರ್ದೇಶಕ ಜೀವನರಾಮ್ ಸುಳ್ಯ ಮಾತನಾಡಿ, ಸಂಬಂಧಗಳು ದೂರವಾಗುತ್ತಿರುವ ಇಂದಿನ ದಿನಗಳಲ್ಲಿ ಇಂತಹ ಶಿಬಿರಗಳು ಅಗತ್ಯ. ಶಿಬಿರಗಳು ಶಿಕ್ಷಣಕ್ಕೆ ಪೂರಕವಾಗಿರಬೇಕು. ಮಕ್ಕಳಿಗೆ ಖುಷಿಯನ್ನು ನೀಡುವಂತಿರಬೇಕು ಎಂದರು.

ಕ್ಷೇತ್ರದ ಆಡಳಿತ ಮೊಕ್ತೇಸರ ಬಾಲಕೃಷ್ಣ ಆಚಾರ್ಯ ಉಳಿಯ ಶಿಬಿರ ಉದ್ಘಾಟಿಸಿದರು. ಮೊಕ್ತೇಸರರಾದ ಶಿವರಾಮ ಆಚಾರ್ಯ ಉಳಿಯ, ಯೋಗೀಶ ಆಚಾರ್ಯ, ಕಾಳಿಕಾಂಬಾ ಸೇವಾ ಸಮಿತಿ ಅಧ್ಯಕ್ಷ ಶ್ರೀನಾಥ್ ಆಚಾರ್ಯ, ಜೈನ್ ಹೈಸ್ಕೂಲಿನ ಅಧ್ಯಾಪಕ ಹರೀಶ ಆಚಾರ್ಯ ಶುಭ ಹಾರೈಸಿದರು.

ಕಾಳಿಕಾಂಬಾ ಮಹಿಳಾ ಸಮಿತಿ ಅಧ್ಯಕ್ಷೆ ಶಾಂತಲಾ ಎಸ್.ಆಚಾರ್ಯ ಅಧ್ಯಕ್ಷತೆ ವಹಿಸಿ ಸ್ವಾಗತಿಸಿದರು. ಕಾವ್ಯ ವಂದಿಸಿದರು. ಕಾರ್ಯದರ್ಶಿ ರಶ್ಮಿತಾ ಅರವಿಂದ ಆಚಾರ್ಯ ಅತಿಥಿಗಳನ್ನು ಗೌರವಿಸಿದರು. ಶಿಕ್ಷಕಿ ಯಮುನಾ ಯೋಗೀಶ ಆಚಾರ್ಯ ಕಾರ್ಯಕ್ರಮ ನಿರ್ವಹಿಸಿದರು.