ವಿಜಯವಾಣಿ ಸುದ್ದಿಜಾಲ ಉಳ್ಳಾಲ
ಪಹಲ್ಗಾಮ್‌ನಲ್ಲಿ ಆತಂಕವಾದಿಗಳು ಅಮಾಯಕರನ್ನು ಕೊಂದು ಕಾಶ್ಮೀರಿಗಳನ್ನು ಸಂಕಷ್ಟಕ್ಕೀಡುಮಾಡಿದ್ದಾರೆ. ಭಾರತ ಮತ್ತು ಭಾರತೀಯರನ್ನು ಸಂರಕ್ಷಿಸುವ ಕಾರ್ಯದಲ್ಲಿ ನಿರತರಾಗಿರುವ ಸೈನಿಕರಿಗೆ ಶಕ್ತಿ, ಧೈರ್ಯ ನೀಡುವಂತೆ ಹಾಗೂ ದೇಶದ ರಕ್ಷಣೆಗಾಗಿ ಹೋರಾಡುವವರಿಗೆ ದರ್ಗಾದಲ್ಲಿ ನಿಂತು ದೇವನ ಮುಂದೆ ಪ್ರಾರ್ಥಿಸುತ್ತಿದ್ದೇವೆ ಎಂದು ಮದನಿ ಅರೆಬಿಕ್ ಕಾಲೇಜು ಪ್ರೊಫೆಸರ್ ನೌಮಾನ್ ನೂರಾನಿ ಹೇಳಿದರು.
ದೇಶ ರಕ್ಷಣೆಯಲ್ಲಿ ತೊಡಗಿಸಿಕೊಂಡಿರುವ ಭಾರತೀಯ ಯೋಧರ ಸುರಕ್ಷತೆಗಾಗಿ ಉಳ್ಳಾಲ ದರ್ಗಾ ಸಮಿತಿ ಆಶ್ರಯದಲ್ಲಿ ಸೋಮವಾರ ದರ್ಗಾ ವಠಾರದಲ್ಲಿರುವ ಸಭಾಂಗಣದಲ್ಲಿ ಸಾಮೂಹಿಕ ಪ್ರಾರ್ಥನೆ ನೆರವೇರಿಸಿ ಮಾತನಾಡಿದರು.
ರಾಜ್ಯ ಎಸ್‌ವೈಎಸ್ ಸಂಘಟನಾ ಕಾರ್ಯದರ್ಶಿ ಅಬೂಬಕ್ಕರ್ ಸಿದ್ದೀಕ್ ಮೋಂಟುಗೋಳಿ ಮಾತನಾಡಿ, ಸೈನಿಕರು ಗಡಿ ಪ್ರದೇಶದಲ್ಲಿ ಪ್ರಾಣದ ಹಂಗು ತೊರೆದು ಶತ್ರುಗಳ ವಿರುದ್ಧ ನಮ್ಮನ್ನು ಕಾಯುತ್ತಿದ್ದಾರೆ. ಅವರಿಗೂ ಕುಟುಂಬ ಇದೆ. ಆದರೆ ಎಲ್ಲರನ್ನೂ ತೊರೆದು ನಮ್ಮ ರಕ್ಷಣೆಯಲ್ಲಿ ತೊಡಗಿದ್ದು ಅವರೊಂದಿಗೆ ನಿಲ್ಲುವುದು ಪ್ರತಿಯೊಬ್ಬನ ಕರ್ತವ್ಯ ಎಂದರು.
ದರ್ಗಾ ಅಧ್ಯಕ್ಷ ಬಿ.ಜಿ.ಹನೀಫ್ ಅಧ್ಯಕ್ಷತೆ ವಹಿಸಿದ್ದರು. ಕೇಂದ್ರ ಜುಮಾ ಮಸೀದಿ ಖತೀಬ್ ಹಾಫಿಳ್ ಅಬ್ದುಲ್ ಮಜೀದ್ ಫಾಳಿಲಿ ಕಾಮಿಲ್ ಸಖಾಫಿ ದುವಾ ನೆರವೇರಿಸಿದರು. ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ದರ್ಗಾ ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಸಖಾಫಿ, ಕಾರ್ಯದರ್ಶಿ ಮುಸ್ತಫಾ, ಕೋಶಾಧಿಕಾರಿ ನಾಝೀಮ್ ಮುಕಚೇರಿ ಮತ್ತಿತರರು ಉಪಸ್ಥಿತರಿದ್ದರು.
ಧಾರ್ಮಿಕ ಉಪನ್ಯಾಸ
ಧಾರ್ಮಿಕ ಸಭೆಯಲ್ಲಿ ಸಯ್ಯಿದ್ ಹಬೀಬುಲ್ಲಾಹ್ ತಂಙಳ್ ಪೆರುವಾಯಿ ದುವಾ ನೆರವೇರಿಸಿದರು. ಸಿರಾಜುದ್ದೀನ್ ಸಖಾಫಿ ಕನ್ಯಾನ ಹಾಗೂ ಸಿರಾಜುದ್ದೀನ್ ಸಖಾಫಿ ಪತ್ತನಾಪುರಮ್ ಉಪನ್ಯಾಸ ನೀಡಿದರು. ಆಝಾದ್‌ನಗರ ಮಸೀದಿ ಅಧ್ಯಕ್ಷ ಮುಹಮ್ಮದ್, ಖತೀಬ್ ಅಬ್ದುಲ್ ಸಮದ್ ಅಹ್ಸನಿ, ದರ್ಗಾ ಉಪಾಧ್ಯಕ್ಷ ಅಶ್ರಫ್ ರೈಟ್ ವೇ, ಕಾರ್ಯದರ್ಶಿಗಳಾದ ಮುಸ್ತಫಾ ಮದನಿನಗರ, ಇಸ್ಹಾಕ್, ಕೋಶಾಧಿಕಾರಿ ನಾಝೀಮ್ ಮುಕಚೇರಿ, ಸದಸ್ಯರಾದ ಝೈನುದ್ದೀನ್ ಮೇಲಂಗಡಿ, ಅಬ್ದುಲ್ ಖಾದರ್ ಕೋಡಿ, ಇಮ್ತಿಯಾಝ್, ಅಬೂಬಕ್ಕರ್ ಹೈದರಲಿನಗರ, ಅರೆಬಿಕ್ ಕಾಲೇಜಿನ ಪ್ರೊ.ಇಬ್ರಾಹಿಂ ಅಹ್ಸನಿ, ಆಝಾದ್ ಇಸ್ಮಾಯಿಲ್, ಗುತ್ತಿಗೆದಾರ ಯು.ಕೆ.ಯೂಸುಫ್ ಉಳ್ಳಾಲ, ಅಶ್ರಫ್ ಕೋಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶ್ರಫ್, ಸಾಜಿದ್ ಉಳ್ಳಾಲ, ಅಬ್ಬಾಸ್ ಕೋಟೆಪುರ, ಕೆಎಂಕೆ ಮಂಜನಾಡಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಕಾರ್ಯದರ್ಶಿ ಶಿಹಾಬುದ್ದೀನ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಪಹಲ್ಗಾಮ್‌ನಲ್ಲಿ ಪ್ರವಾಸಿಗರ ಮೇಲೆ ದುಷ್ಕರ್ಮಿಗಳು ಎಸಗಿರುವ ದಾಳಿಯನ್ನು ನಾವು ಉಗ್ರವಾಗಿ ಖಂಡಿಸುತ್ತೇವೆ. ದೇಶದ ಮೇಲೆ ದಾಳಿ ನಡೆಸಿದವರ ಮೇಲೆ ನಮ್ಮ ಸೈನಿಕರು ಆಪರೇಶನ್ ಸಿಂಧೂರದ ಜೀವದ ಹಂಗು ತೊರೆದು ಪ್ರತಿರೋಧ ತೋರುತ್ತಿದ್ದಾರೆ. ನಮ್ಮ ದೇಶಕ್ಕಾಗಿ ತಮ್ಮ ಪ್ರಾಣವನ್ನೇ ತ್ಯಾಗ ಮಾಡುತ್ತಿದ್ದಾರೆ. ದೇಶದ ಭದ್ರತೆಗೆ ಧಕ್ಕೆ ಬಂದಾಗ ನಾವೆಲ್ಲರೂ ಒಂದಾಗಿ ಸರ್ಕಾರದೊಂದಿಗೆ ಕೈಜೋಡಿಸುತ್ತೇವೆ. ನಾವು ಮಾಡುವ ಐದು ಹೊತ್ತಿನ ನಮಾಝ್‌ನಲ್ಲೂ ಪ್ರಾರ್ಥಿಸುತ್ತೇವೆ. ಬಿ.ಜಿ.ಹನೀಫ್ ದರ್ಗಾ ಅಧ್ಯಕ್ಷ