ಜಿಲ್ಲೆ

ಗಾಯಗೊಂಡ ಹೆಬ್ಬಾವಿಗೆ ಯಶಸ್ವಿ ಶಸ್ತ್ರಚಿಕಿತ್ಸೆ

ಇಂದಿರಾ ಎನ್ ಕೆ

ಉಡುಪಿ: ಆದಿ ಉಡುಪಿ ಪರಿಸರದಲ್ಲಿ ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿ ಗಾಯಗೊಂಡಿದ್ದ ಹೆಬ್ಬಾವು ಉಚ್ಛು ಟ್ರಸ್ಟ್ ಸದಸ್ಯರ ಕಾಳಜಿ ಹಾಗೂ ಪಶುವೈದ್ಯರ ಆರೈಕೆಯಿಂದ ಬದುಕುಳಿದಿದೆ.

ನ.16ರಂದು ಆದಿ ಉಡುಪಿಯಲ್ಲಿ ಹುಲ್ಲು ಕೊಯ್ಯುವ ಯಂತ್ರಕ್ಕೆ ಸಿಲುಕಿ ಹೆಬ್ಬಾವು ತೀವ್ರವಾಗಿ ಗಾಯಗೊಂಡಿತ್ತು. ಸ್ಥಳೀಯರು ಉಚ್ಛು ಟ್ರಸ್ಟ್ ಟ್ರಸ್ಟಿ ಅಕ್ಷಯ್ ಶೇಟ್‌ಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ತೆರಳಿದ ಅವರು 32 ಕೆ.ಜಿ ತೂಕ, 10 ಅಡಿ ಉದ್ದದ ಹೆಬ್ಬಾವನ್ನು ರಕ್ಷಿಸಿ ಪಶು ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾರೆ. ಹೆಬ್ಬಾವಿಗೆ 15 ಸೆ.ಮೀ ಉದ್ದವಾದ ಗಾಯವಾಗಿ ಜತೆಗೆ ದೇಹದ ಒಳಭಾಗಕ್ಕೂ ಆಳವಾದ ಹಾನಿಯಾಗಿತ್ತು. ಅರಣ್ಯ ಇಲಾಖೆಯ ಸಹಕಾರದೊಂದಿಗೆ ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯಲ್ಲಿರುವ ಸಮನ್ವಯಾ ಕ್ಲಿನಿಕ್ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ತಂಡದಲ್ಲಿರುವ ಪಶುವೈದ್ಯರಾದ ಡಾ.ಮೇನಾ ಮತ್ತು ಡಾ.ಯಶಸ್ವಿನಿ ವಾರ್ಗದರ್ಶನದಲ್ಲಿ ಡಾ. ಅನಿರುದ್ಧ ಶಸ್ತ್ರಚಿಕಿತ್ಸೆ ನೀಡಿದ್ದಾರೆ. ಚಿಕಿತ್ಸೆಗೆ ತೊಡಕಾಗಬಾರದೆಂಬ ಕಾರಣಕ್ಕೆ ಹೆಬ್ಬಾವಿಗೆ ಅನಸ್ತೇಶಿಯಾ ನೀಡಲಾಗಿತ್ತು. ಒಂದು ಗಂಟೆ ನಂತರ ಹೆಬ್ಬಾವು ಚೇತರಿಸಿಕೊಂಡಿತ್ತು. 10 ದಿನ ಆರೈಕೆ ವಾಡಿ ಅದೇ ಸ್ಥಳಕ್ಕೆ ಹೆಬ್ಬಾವನ್ನು ಬೀಡಲಾಗಿದೆ.

1000ಕ್ಕೂ ಅಧಿಕ ಹಾವುಗಳ ರಕ್ಷಣೆ

ಹಾವುಗಳ ರಕ್ಷಣೆ ಜತೆಗೆ ಅವುಗಳ ಕುರಿತು ಅರಿವು ಮೂಡಿಸುವ ಉದ್ದೇಶದೊಂದಿಗೆ ಅಕ್ಷಯ್ ಶೇಟ್ ನೇತತ್ವದಲ್ಲಿ ಉಡುಪಿಯ ಉಚ್ಛು ಟ್ರಸ್ಟ್ ಎರಡು ವರ್ಷಗಳ ಹಿಂದೆ ಪ್ರಾರಂಭವಾಯಿತು. ವೈದ್ಯರನ್ನು ಒಳಗೊಂಡಂತೆ ಹತ್ತು ಮಂದಿ ಟ್ರಸ್ಟ್‌ನಲ್ಲಿದ್ದಾರೆ. ರಸ್ತೆ ಅಪಘಾತ, ಬಾವಿ, ಸಾರ್ವಜನಿಕ ಸ್ಥಳಗಳಲ್ಲಿ ಹಾಗೂ ಪ್ಲಾಸ್ಟಿಕ್ ನುಂಗಿ ತೊಂದರೆಕ್ಕೀಡಾಗುವ ಹಾವುಗಳನ್ನು ಆಸ್ಪತ್ರೆಗೆ ಕರೆತಂದು ಕರೆತಂದು ಅವುಗಳಿಗೆ ಚಿಕಿತ್ಸೆ ಕೊಡಿಸುವ ಕಾರ್ಯ ಮಾಡುತ್ತಿದ್ದಾರೆ. ಇಲ್ಲಿಯವರೆಗೆ 1000ಕ್ಕೂ ಅಧಿಕ ಹಾವುಗಳಿಗೆ ಚಿಕಿತ್ಸೆ ನೀಡಿ, ಕಾಡಿಗೆ ಬಿಟ್ಟಿದ್ದಾರೆ.