ಜಿಲ್ಲೆ

ಕಂಚಿನ ಕಂಠದ ಸುಬ್ರಹ್ಮಣ್ಯ ಧಾರೇಶ್ವರ ಇನ್ನಿಲ್ಲ

Uttara Kannada - Subash Hegde

ಕಾರವಾರ: ಯಕ್ಷಗಾನ ಬಡಗುತಿಟ್ಟಿನ ಖ್ಯಾತ ಭಾಗವತ ಸುಬ್ರಹ್ಮಣ್ಯ ಧಾರೇಶ್ವರ(67)ಗುರುವಾರ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ಹೊಂದಿದರು.
ಮೃತರಿಗೆ ಪತ್ನಿ, ಪುತ್ರ, ಪುತ್ರಿ ಅಸಂಖ್ಯಾತ ಅಭಿಮಾನಿಗಳಿದ್ದಾರೆ.
ಕಾಳಿಂಗ ನಾವುಡರ‌ ಬಳಿಕ ಕಂಚಿನ ಕಂಠದ ಭಾಗವತರು ಎಂದು ಅತ್ಯಂತ ಪ್ರಸಿದ್ಧರಾಗಿದ್ದವರು ಧಾರೇಶ್ವರರು. ಪ್ರಾಚಾರ್ಯ ನಾರಾಯಣ ಉಪ್ಪೂರರ ಬಳಿ ಕಲಿತಿದ್ದರು. ತಮ್ಮ ಜೇನಿನ ಕಂಠದಿಂದ 300 ಕ್ಕೂ ಹೆಚ್ಚು, ಪೌರಾಣಿಕ ಯಕ್ಷಗಾನದಲ್ಲಿ ಹಾಡಿದ್ದಾರೆ., 400 ಕ್ಕೂ ಅಧಿಕ ಯಕ್ಷಗಾನ ಆಡಿಯೋ ಕ್ಯಾಸೆಟ್ ಗಳಲ್ಲಿ ಅವರ ಧ್ವನಿ ಇದೆ.‌
1957 ರ ಸೆ.5 ರಂದು ಜನಿಸಿದ ಧಾರೇಶ್ವರ ಅವರು, ಮೂಲತಃ ಉತ್ತರ ಕನ್ನಡ ಜಿಲ್ಲೆಯ ಗೋಕರ್ಣದಲ್ಲಿ ಇಲೆಕ್ಟ್ರಿಕಲ್ ಅಂಗಡಿ ಹೊಂದಿದ್ದರು. ಯಕ್ಷಗಾನದ ಮೇಲಿನ ಅಪಾರ ಅಭಿಮಾನದಿಂದ ಕೋಟ ಯಕ್ಷಗಾನ ಕೇಂದ್ರ ಸೇರಿ ಭಾಗವತಿಕೆ ಕಲಿತರು. ಅಮೃತೇಶ್ವರಿ ಮೇಳ, ಪೆರ್ಡೂರು ಮೇಳಗಳಲ್ಲಿ 26 ವರ್ಷಗಳ ಸಂಚಾರ ನಡೆಸಿದ್ದರು.
ಕರ್ನಾಟಕ ರಾಜ್ಯೋತ್ಸವ ಸೇರಿ ಹಲವು ಪ್ರಶಸ್ತಿಗಳು ಲಭಿಸಿದ್ದವು.ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ನಾಗೂರಿನ ಸ್ವಗೃಹದಲ್ಲಿ ಇಂದು ಅವರ ಅಂತ್ಯ ಸಂಸ್ಕಾರ ನಡೆಯಲಿದೆ.