ಜಿಲ್ಲೆ

ವೃದ್ಧೆಯ ರಕ್ಷಣೆಗಾಗಿ ಬಾವಿಗೆ ಇಳಿದ ಎಸ್‌ಐ!

ಉಡುಪಿ: ನಗರದ ಹೊರ ವಲಯದ ಮಾರ್ಪಳ್ಳಿ ಎಂಬಲ್ಲಿ ಸ್ವತಃ ಎಸ್‌ಐ ಬಾವಿಗೆ ಇಳಿದು ವೃದ್ಧೆಯನ್ನು ರಕ್ಷಿಸಿದ ಘಟನೆ ಗುರುವಾರ ನಡೆದಿದೆ.

ಕುಕ್ಕಿಕಟ್ಟೆಯ ವೃದ್ಧೆಯೊಬ್ಬರು ಮನೆಯ ಬಾವಿಗೆ ಆಕಸ್ಮಿಕವಾಗಿ ಬಿದ್ದು, ಜೀವನ್ಮರಣದ ಸ್ಥಿತಿಯಲ್ಲಿದ್ದರು. ಮಾಹಿತಿ ತಿಳಿದು ಆಗಮಿಸಿದ  ನಗರ ಠಾಣೆ ಪಿ.ಎಸ್.ಐ ಸದಾಶಿವ ಗವರೋಜಿ, ಅಗ್ನಿಶಾಮಕ ದಳದ ಸಿಬ್ಬಂದಿ ಜತೆಗೆ ತಾನೂ ಬಾವಿಗೆ ಇಳಿದು ರಕ್ಷಣಾ ಕಾರ್ಯಾಚರಣೆಗೆ ಸಹಕರಿಸಿದರು.

ಎಸ್‌ಐ ಸದಾಶಿವ, ಅಗ್ನಿಶಾಮಕ ದಳದ ಸಿಬ್ಬಂದಿ ವಿನಾಯಕ್ ಹಾಗೂ ಸ್ಥಳೀಯ ಆಟೋ ಚಾಲಕ ರಾಜೇಶ್ ನಾಯಕ್ ವೃದ್ಧೆಗೆ ಹಗ್ಗ ಕಟ್ಟಿ ಮೇಲಕ್ಕೆ ಕರೆತಂದರು. ವೃದ್ಧೆಯನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಆರೋಗ್ಯವಾಗಿದ್ದಾರೆ.

ತುರ್ತು ಜೀವರಕ್ಷಣೆ ಕಾರ್ಯಚರಣೆಯಲ್ಲಿ ಸಾಹಸ ಮೆರೆದಿರುವ ಜೀವರಕ್ಷಕರಿಗೆ ಸ್ಥಳೀಯರಿಂದ ಪ್ರಶಂಸೆ ವ್ಯಕ್ತವಾಗಿದೆ. ಜಿಲ್ಲಾ ನಾಗರಿಕ ಸಮಿತಿಯ ಸಂಚಾಲಕ ನಿತ್ಯಾನಂದ ಒಳಕಾಡು, ತಾರಾನಾಥ್ ಮೇಸ್ತ ಶಿರೂರು ಅಭಿನಂದನೆ ಸಲ್ಲಿಸಿದ್ದಾರೆ.