ಜಿಲ್ಲೆ

ವಿದ್ಯಾರ್ಥಿಗಳು ಅವಕಾಶ ಬಳಸಿಕೊಳ್ಳಿ: ಬಿನುತ ಬಂಗೇರ ಹೇಳಿಕೆ

Avinash R

ಬೆಳ್ತಂಗಡಿ: ವಿದ್ಯಾರ್ಥಿಗಳು ಪಠ್ಯದ ಜತೆಗೆ ಪಠ್ಯೇತರ ಅಭಿರುಚಿ ಬೆಳೆಸಿಕೊಂಡು ಕಾಲೇಜಿನಲ್ಲಿ ಸಿಗುವ ಅವಕಾಶ ಬಳಸಿಕೊಳ್ಳಬೇಕು. ಆ ಮೂಲಕ ಕಾಲೇಜು ಶಿಕ್ಷಣ ಹಂತದಲ್ಲಿಯೇ ತಮ್ಮ ವ್ಯಕ್ತಿತ್ವಕ್ಕೆ ಸ್ಪಷ್ಟ ರೂಪ ನೀಡಬೇಕು ಎಂದು ಕಾಲೇಜು ಆಡಳಿತ ಮಂಡಳಿ ಸದಸ್ಯೆ ಬಿನುತ ಬಂಗೇರ ಹೇಳಿದರು.

ಶುಕ್ರವಾರ ಶ್ರೀ ಗುರುದೇವ ಪದವಿ ಪೂರ್ವ ಕಾಲೇಜಿನ ಜ್ಞಾನ ಗಂಗಾ ಭಿತ್ತಿ ಪತ್ರಿಕೆ ಅನಾವರಣಗೊಳಿಸಿ ಮಾತನಾಡಿ, ಕಲೆ, ಸಾಹಿತ್ಯದ ಅಭಿರುಚಿ ನಮ್ಮ ಜ್ಞಾನ ಭಂಡಾರ ಹೆಚ್ಚಿಸುವುದು. ಅದರಲ್ಲಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವ ಕಲಾಸಕ್ತಿ ವಿದ್ಯಾರ್ಥಿ ಬದುಕಿನಲ್ಲಿ ಇರಬೇಕು ಎಂದರು.

ಶ್ರೀ ಗುರುದೇವ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲೆ ಡಾ.ಸವಿತಾ, ಪದವಿ ಪೂರ್ವ ಕಾಲೇಜು ಪ್ರಾಂಶುಪಾಲ ಸುಕೇಶ್ ಕುಮಾರ್, ಉಪ ಪ್ರಾಂಶುಪಾಲ ಬಿ.ಎ.ಸಮೀವುಲ್ಲಾ ಶುಭ ಹಾರೈಸಿದರು.

ಉಪನ್ಯಾಸಕರು, ಲಲಿತ ಕಲಾ ಸಂಘದ ಸಂಯೋಜಕರಾದ ಭಾಗ್ಯಶ್ರೀ, ಸಾಹಿಸ್ತಾ ಬಾನು ಉಪಸ್ಥಿತರಿದ್ದರು. ಉಪನ್ಯಾಸಕ ಹರೀಶ್ ಪೂಜಾರಿ ನಿರೂಪಿಸಿದರು.