ವಿದ್ಯುತ್ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ

Bel_Belalu
Published on

ವಿಜಯವಾಣಿ ಸುದ್ದಿಜಾಲ ಬೆಳ್ತಂಗಡಿ

ವಿದ್ಯುತ್ ಸಬ್‌ಸ್ಟೇಷನ್ ನಿರ್ಮಾಣಕ್ಕೆ ಸ್ಥಳ ಮಂಜೂರಾತಿ ಮಾಡಲು ಗ್ರಾಮಸ್ಥರ ಒತ್ತಾಯ, ಗ್ರಾಮಸ್ಥರ ಬೇಡಿಕೆಯಂತೆ ಜಂಟಿ ಸರ್ವೇ ನಡೆಸಲು ಬೆಳಾಲು ಗ್ರಾಮಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

ಬೆಳಾಲು ಗ್ರಾಪಂ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮಸಭೆ ಗ್ರಾಪಂ ಸಭಾಂಗಣದಲ್ಲಿ ಅಧ್ಯಕ್ಷೆ ವಿದ್ಯಾ ಶ್ರೀನಿವಾಸ ಗೌಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ ಸಹಾಯಕ ಕಾರ್ಯಪಾಲ ಅಭಿಯಂತರ ನಿತಿನ್ ಮಾರ್ಗದರ್ಶಿಯಾಗಿ ಭಾಗವಹಿಸಿದ್ದರು.

4 ವರ್ಷಗಳಿಂದ ಪ್ರಯತ್ನ ಮಾಡಿದ ಪರಿಣಾಮ ಗ್ರಾಪಂ ವ್ಯಾಪ್ತಿಯ ಮಾಯ ಕ್ರಾಸ್ ಬಳಿ 110 ಕೆ.ವಿ. ವಿದ್ಯುತ್ ಸಬ್‌ಸ್ಟೇಷನ್ ಮಂಜೂರಾತಿಗೆ ಒಪ್ಪಿಗೆ ಸಿಕ್ಕಿದೆ. ಇದಕ್ಕೆ ಬೇಕಾಗುವ 4 ಎಕರೆ ಸ್ಥಳಕ್ಕೆ ಗುರುತು ಮಾಡಲಾಗಿದ್ದು, ಅದು ಅರಣ್ಯ ಜಾಗ ಎಂದು ಆಕ್ಷೇಪ ಬಂದಿದೆ. ಇದನ್ನು ಕಂದಾಯ ಇಲಾಖೆ, ಅರಣ್ಯ ಇಲಾಖೆ ಸರ್ವೇ ಮಾಡಿ ಊರಿಗೆ ಅಗತ್ಯ ಇರುವ ಸಬ್‌ಸ್ಟೇಷನ್ ಮಾಡಬೇಕು. ಇದರಿಂದ ಈ ವ್ಯಾಪ್ತಿಯ ಕೆಲವು ಗ್ರಾಮಗಳಿಗೆ ಅನುಕೂಲವಾಗುತ್ತದೆ ಎಂದು ಗ್ರಾಮಸ್ಥರು ಒತ್ತಾಯಿಸಿದರು. ಗ್ರಾಮಸ್ಥರ ಬೇಡಿಕೆಯಂತೆ ಜಂಟಿ ಸರ್ವೇ ಮಾಡುವುದಾಗಿ ಸಭೆಯಲ್ಲಿ ನಿರ್ಣಯ ಅಂಗೀಕರಿಸಲಾಯಿತು.

ಅನಂತೋಡಿಯಿಂದ ಪಾನಡ್ಕ ಕೊಯ್ಯೂರು ಸಂಪರ್ಕ ರಸ್ತೆ ಕಾಮಗಾರಿ ಆಗಿದೆ ಎಂದು ನಾಮಫಲಕ ಹಾಕಿದ್ದಾರೆ. ಆದರೆ ಈ ರಸ್ತೆ ಕಾಮಗಾರಿ ಸಂಪೂರ್ಣ ಆಗದೇ ವಾಹನ ಸವಾರರಿಗೆ ಸಂಚಾರಕ್ಕೆ ತುಂಬ ತೊಂದರೆಯಾಗಿದೆ. ಆದ್ದರಿಂದ ಬಾಕಿ ಇರುವ ಕಾಮಗಾರಿ ಕೂಡಲೇ ಮುಗಿಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದರು. ಮುಖ್ಯ ರಸ್ತೆ ಗುತ್ತಿಗೆದಾರರಿಗೆ 5 ವರ್ಷದ ಒಪ್ಪಂದ ಇರುವುದರಿಂದ ರಸ್ತೆ ಬದಿಯಲ್ಲಿರುವ ಪೊದೆಗಳನ್ನು ಸಂಬಂಧಪಟ್ಟ ಗುತ್ತಿಗೆದಾರರು ತೆಗೆಯಬೇಕು ಎಂದು ಸಭೆಯಲ್ಲಿ ಒತ್ತಾಯಿಸಿದರು. ಕಳೆದ ಗ್ರಾಮಸಭೆಯಲ್ಲಿ ವಸತಿ ನಿಲಯದ ಬೇಡಿಕೆ ಸೇರಿದಂತೆ ಇತರ ಬೇಡಿಕೆ ಬಗ್ಗೆ ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಗ್ರಾಮಸ್ಥ ಸುಲೈಮಾನ್ ಕೇಳಿದಾಗ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಬೇಡಿಕೆ ಕುರಿತು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಕಳುಹಿಸಲಾಗಿದೆ ಎಂದರು.

ಬೈಪಾಡಿಯಿಂದ ಸರ್ಕಾರಿ ಬಸ್ ಇದ್ದರೂ ಶಾಲಾ ಮಕ್ಕಳ ಅನುಕೂಲಕ್ಕೆ ಸಮಯಕ್ಕೆ ಸರಿಯಾಗಿ ಬಸ್ ಇಲ್ಲ. ಆದುದರಿಂದ ಬೆಳಗ್ಗೆ 8 ಗಂಟೆ ಸಮಯಕ್ಕೆ ಬಸ್ ವ್ಯವಸ್ಥೆ ಆಗಬೇಕು. ಇಂದಲ್ಕೆ, ಪೆಜಕ್ಕಳ, ನಿಂತಿಕಲ್ಲು, ಪೀನಾರಿ ಕಡೆಗಳಲ್ಲಿ ಬೀದಿ ದೀಪ ಅಳವಡಿಸಬೇಕು. ಎಲ್ಲ ಗ್ರಾಮೀಣ ರಸ್ತೆಗಳನ್ನು ಸಂಚಾರಕ್ಕೆ ಯೋಗ್ಯವಾಗುವಂತೆ ದುರಸ್ಥಿ ಮಾಡಬೇಕು ಎಂಬ ಇತ್ಯಾದಿ ಬೇಡಿಕೆ ಸಭೆಯಲ್ಲಿ ಕೇಳಿ ಬಂತು. ಗ್ರಾಮಸ್ಥರಾದ ರಮೇಶ್ ಗೌಡ, ಮಾಧವ ಗೌಡ, ಸುರೇಶ್ ಶೆಟ್ಟಿಗಾರ್, ಜೋಯಿ, ವಿಜಯ ಗೌಡ, ವಿಶ್ವನಾಥ ಮೊದಲಾದವರು ಚರ್ಚೆಯಲ್ಲಿ ಭಾಗವಸಿದರು.

ಕನ್ನಡ ರಾಜ್ಯೋತ್ಸವ ಪ್ರಯುಕ್ತ ನೀಡಲಾಗಿರುವ ದ.ಕ. ಜಿಲ್ಲಾ ಪ್ರಶಸ್ತಿ ಪುರಸ್ಕೃತರಾಗಿರುವ ಹಿರಿಯ ಯಕ್ಷಗಾನ ಕಲಾವಿದ ಪುಳಿತ್ತಡಿ ಲಕ್ಷ್ಮಣ ಗೌಡ, ಬೆಳಾಲು ಶ್ರೀ ಧ.ಮ. ಪ್ರೌಢ ಶಾಲಾ ನಿವೃತ್ತ ಮುಖ್ಯಶಿಕ್ಷಕ ರಾಮಕೃಷ್ಣ ಭಟ್ ಚೊಕ್ಕಾಡಿ, ಬೆಳಾಲು ಗ್ರಾಪಂ ನಿವೃತ್ತ ನೌಕರ ಮಂಜುನಾಥ ಗೌಡ ಅವರನ್ನು ಪಂಚಾಯಿತಿ ವತಿಯಿಂದ ಸನ್ಮಾನಿಸಲಾಯಿತು.

ಗ್ರಾಪಂ ಉಪಾಧ್ಯಕ್ಷೆ ಗೀತಾ, ಸದಸ್ಯರಾದ ಸುರೇಂದ್ರ ಗೌಡ, ಸತೀಶ್ ಗೌಡ, ದಿನೇಶ್ ಕೋಟ್ಯಾನ್, ಜಯಂತ ಗೌಡ, ಕೃಷ್ಣಯ್ಯ ಆಚಾರ್ಯ, ಪ್ರವೀಣ್, ವಿಜಯ, ಜಯಂತಿ, ಪ್ರೇಮಾ, ಯಶೋದಾ ಕೆ., ಯಶೋದಾ ಸುರುಳಿ, ವಿವಿಧ ಇಲಾಖೆ ಅಧಿಕಾರಿಗಳು, ಆಶಾ ಕಾರ್ಯಕರ್ತರು, ಅಂಗನವಾಡಿ ಕಾರ್ಯಕರ್ತರು, ಸಂಘ ಸಂಸ್ಥೆ ಪದಾಧಿಕಾರಿಗಳು ಸೇರಿದಂತೆ ಹಲವರು ಉಪಸ್ಥಿತರಿದ್ದರು.

ಪಿಡಿಒ ತಾರಾನಾಥ ನಾಯ್ಕ ಸ್ವಾಗತಿಸಿದರು. ಅನುಪಾಲನಾ ವರದಿ ವಾಚಿಸಿದರು. ಸಿಬ್ಬಂದಿ ಪೂರ್ಣಿಮಾ ಜಮಾ ಖರ್ಚು ವರದಿ ಮಂಡಿಸಿದರು.

ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯ

ಕೊಲ್ಪಾಡಿ ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಇದ್ದ ಶಿಕ್ಷಕರು ಹೆರಿಗೆ ರಜೆಯಲ್ಲಿ ಇದ್ದಾಗ ಬೇರೆ ಶಿಕ್ಷಕರ ನೇಮಕ ಮಾಡದೆ ಸಮಸ್ಯೆಯಾಗಿದೆ. ಹೀಗೆ ಆದರೆ ಶಾಲೆ ಮುಚ್ಚುವ ಸ್ಥಿತಿ ಬರಬಹುದು ಇಂತಹ ಸಂದರ್ಭದಲ್ಲಿ ಇಲಾಖೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಗ್ರಾಮಸ್ಥರು ಒತ್ತಾಯ ಮಾಡಿದರು.

ಗ್ರಾಮದ ಅಭಿವೃದ್ಧಿಗೆ ಗ್ರಾಮಸಭೆಯಲ್ಲಿ ಗ್ರಾಮಸ್ಥರ ಅಭಿಪ್ರಾಯ, ಚರ್ಚೆ ಅಗತ್ಯ. ಗ್ರಾಮಸಭೆಯಲ್ಲಿ ಗ್ರಾಮದ ಅಭಿವೃದ್ಧಿ ಕುರಿತು ಚರ್ಚೆ ನಡೆದಿದೆ. ಪಂಚಾಯಿತಿ ವ್ಯಾಪ್ತಿಯ 4 ವಾರ್ಡ್‌ಗಳಲ್ಲಿ ಬೇಡಿಕೆಯ ಕಾಮಗಾರಿಗೆ ಅನುದಾನ ಹಂಚಲಾಗಿದೆ. ಸ್ಮಶಾನ ನಿರ್ಮಾಣಕ್ಕೆ ಎನ್‌ಆರ್‌ಇಜಿಯಿಂದ 5 ಲಕ್ಷ ರೂ.ಅನುದಾನ ಬಂದಿದೆ. ಉಳಿದ ಕಾಮಗಾರಿಯನ್ನು ದಾನಿಗಳ ಸಹಕಾರದಿಂದ ಮಾಡಲಾಗುವುದು. ವಿದ್ಯಾ ಶ್ರೀನಿವಾಸ, ಅಧ್ಯಕ್ಷರು ಗ್ರಾಪಂ ಬೆಳಾಲು. https://www.vijayavani.net/mangalore-edu-karunya-cricket-meyar-inaguration https://www.vijayavani.net/shree-kshethra-dharmasthala-deeposthava

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net