ಜಿಲ್ಲೆ

ವಿದ್ಯಾರ್ಥಿಗಳು ಮಾನವೀಯ ಗುಣ ಅಳವಡಿಸಿಕೊಳ್ಳಬೇಕು

ಇಂದಿರಾ ಎನ್ ಕೆ

ಕೋಟ: ವಿದ್ಯಾರ್ಥಿ ಜೀವನದಲ್ಲಿ ಸಂಸ್ಕಾರಯುತ ಸ್ನೇಹಮಯಿ ವಾತಾವರಣ ರೂಪಿಸಿಕೊಳ್ಳಬೇಕು. ಈ ಮೂಲಕ ದ್ವೇಷ, ಅಸೂಯೆ ಇದರಿಂದ ಮುಕ್ತರಾಗಬೇಕು ಎಂದು ಮಾಜಿ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅಭಿಪ್ರಾಯಪಟ್ಟರು.

ಶುಕ್ರವಾರ ಕೋಟ ಪಡುಕರೆ ಲಕ್ಷ್ಮೀ ಸೋಮಬಂಗೇರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಲ್ಲಿ ವಿಶ್ವವಿದ್ಯಾಲಯ ಮಟ್ಟದ ಅಂತರ್ ಕಾಲೇಜು ಸಾಂಸ್ಕೃತಿಕ ಸ್ಪರ್ಧೆ ‘ಆರೋಹ -2025’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಪ್ರತಿಯೊಬ್ಬರು ಮಾನವೀಯ ಮೌಲ್ಯಗಳನ್ನು ಕಲೆಯ ಮೂಲಕ ಹೊರಹೊಮ್ಮಿಸಬೇಕು. ಸಮಾಜದ ಸ್ವಾಸ್ಥೃ ಕಾಪಾಡಬೇಕು. ಇದು ವಿದ್ಯಾರ್ಥಿಗಳ ಧ್ಯೇಯವಾಗಬೇಕು ಎಂದರು.

ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅಭ್ಯಾಗತರಾಗಿ ಗೀತಾನಂದ ಫೌಂಡೇಶನ್ ಪ್ರವರ್ತಕ ಆನಂದ್ ಸಿ.ಕುಂದರ್, ಉದ್ಯಮಿ ಪೃಥ್ವಿರಾಜ್ ಶೆಟ್ಟಿ, ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯ ರಮೇಶ್ ಎಚ್.ಕುಂದರ್, ಸಮುದ್ಯತಾ ಗ್ರೂಪ್ಸ್ ಮುಖ್ಯಸ್ಥ ಯೋಗೇಂದ್ರ ತಿಂಗಳಾಯ, ಕಾಲೇಜು ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸುದಿನ ಕೋಡಿ, ಉದ್ಯಮಿ ನಾಗರಾಜ್ ಮಣೂರು ಪಡುಕರೆ, ಅಲೋಕ್ ಇವೆಂಟ್ಸ್ ಮುಖ್ಯಸ್ಥ ಅಲೋಕ್ ಪುತ್ರನ್, ಕೋಟ ಗ್ರಾಪಂ ಸದಸ್ಯ ಭುಜಂಗ ಗುರಿಕಾರ, ವಿದ್ಯಾರ್ಥಿ ಸಂಚಾಲಕ ಪವನ್ ಜಿ., ಕಾಲೇಜು ಪ್ರಾಧ್ಯಾಪಕ ಡಾ.ಮನೋಜ್ ಕುಮಾರ್ ಉಪಸ್ಥಿತರಿದ್ದರು. ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಪ್ರೊ.ರಮೇಶ್ ಆಚಾರ್ ಸ್ವಾಗತಿಸಿದರು. ಕಾಲೇಜಿನ ಪ್ರಾಂಶುಪಾಲ ಡಾ.ರಾಜೇಂದ್ರ ಎಸ್.ನಾಯಕ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಸಿಂಚನಾ ಕಾರ್ಯಕ್ರಮ ನಿರೂಪಿಸಿದರು.