ಜಿಲ್ಲೆ

ಜನಿವಾರ ಕತ್ತರಿಸಿದ್ದರಿಂದ ವಿದ್ಯಾರ್ಥಿಯ ಭವಿಷ್ಯ ಅತಂತ್ರ

Karthika K.S

ಕೋಟ: ಷೋಡಶ ಕರ್ಮಗಳನ್ನು ಆಚರಿಸುವ ಪ್ರತಿಯೊಂದು ಸಮಾಜಕ್ಕೆ ಜನಿವಾರ ಪವಿತ್ರ ಹಾಗೂ ಮಹತ್ವದ್ದಾಗಿದೆ. ಸಿಇಟಿ ಪರೀಕ್ಷಾ ಕೇಂದ್ರದಲ್ಲಿ ಅಧಿಕಾರಿ ಅಭ್ಯರ್ಥಿಯ ಜನಿವಾರ ಕತ್ತರಿಸಿದ್ದು ಹೇಯ ಕೃತ್ಯ. ಇದರಿಂದ ವಿದ್ಯಾರ್ಥಿಯ ಶೈಕ್ಷಣಿಕ ಭವಿಷ್ಯ ಅತಂತ್ರವಾಗಿದೆ ಎಂದು ಬ್ರಾಹ್ಮಣ ಮಹಾಸಭಾ ಸಾಲಿಗ್ರಾಮ ವಲಯಾಧ್ಯಕ್ಷ ಶಿವರಾಮ ಉಡುಪ ಹೇಳಿದರು.

ಶಿವಮೊಗ್ಗದ ಸಿಇಟಿ ಕೇಂದ್ರದಲ್ಲಿ ವಿದ್ಯಾರ್ಥಿಯ ಜನಿವಾರ ಕತ್ತರಿಸಿದ್ದನ್ನು ಖಂಡಿಸಿ ಬ್ರಾಹ್ಮಣ ಮಹಾಸಭಾ ವತಿಯಿಂದ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.

ಪುರೋಹಿತ ಚೇಂಪಿ ಪ್ರಕಾಶ್ ಭಟ್ ಮಾತನಾಡಿ, ಈ ಕೃತ್ಯದಿಂದ ಬ್ರಾಹ್ಮಣ ಸಮಾಜ ಮಾತ್ರವಲ್ಲದೇ ಎಲ್ಲ ಸಮುದಾಯಗಳೂ ತಲೆತಗ್ಗಿಸುವಂತಾಗಿದೆ. ಭವಿಷ್ಯದಲ್ಲಿ ಇನ್ನೆಂದೂ ಈ ರೀತಿ ನಡೆಯಬಾರದು ಎಂದರು.

ವಿಶ್ವಬ್ರಾಹ್ಮಣ ಸಮಾಜದ ಅಧ್ಯಕ್ಷ ಮಣೂರು ಸುಬ್ರಾಯ ಆಚಾರ್ಯ ಮಾತನಾಡಿ, ಸರ್ಕಾರ ಮತ್ತು ಸಂಬಂಧಿತ ಇಲಾಖೆ ಜನರಲ್ಲಿ ಕ್ಷಮೆ ಯಾಚಿಸಬೇಕು. ಅನ್ಯಾಯಕ್ಕೆ ಒಳಗಾದ ವಿದ್ಯಾರ್ಥಿಗೆ ನ್ಯಾಯ ಒದಗಿಸಬೇಕು ಎಂದು ಆಗ್ರಹಿಸಿದರು.

ಸುದ್ದಿಗೋಷ್ಠಿಯಲ್ಲಿ ಸೋಮಕ್ಷತ್ರಿಯ ಗಾಣಿಗ ಸಮಾಜದ ಕೋಟ ಯುವ ಸಂಘಟನೆ ಅಧ್ಯಕ್ಷ ಗಿರೀಶ್ ಗಾಣಿಗ ಬೆಟ್ಲಕ್ಕಿ, ಜಿಎಸ್‌ಬಿ ಸಮಾಜದ ವೆಂಕಟೇಶ್ ಭಟ್, ಬ್ರಾಹ್ಮಣ ಸಮಾಜದ ಪ್ರಮುಖರಾದ ರಾಜಾರಾಂ ಐತಾಳ, ಮಂಜುನಾಥ ಉಪಾಧ್ಯ, ಪಟ್ಟಾಭಿರಾಮ ಸೋಮಯಾಜಿ, ಸುಬ್ರಹ್ಮಣ್ಯ ಹೇರ್ಳೆ, ಸುಬ್ರಾಯ ಉರಾಳ, ರಮೇಶ್ ಮಯ್ಯ ಇದ್ದರು.