ಹಗರಿಬೊಮ್ಮನಹಳ್ಳಿಯಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ತಾಲೂಕು ಸಂಘಟನೆಯಿಂದ ಉಪತಹಸೀಲ್ದಾರ್‌ರಾದ ವಿಶ್ವೇಶ್ವರಯ್ಯ ಹಾಗೂ ಅನ್ನದಾನೇಶ್ವರಗೆ ಮನವಿ ಸಲ್ಲಿಸಲಾಯಿತು. ಎಬಿವಿಪಿ ತಾಲೂಕು ಅಧ್ಯಕ್ಷ ನಾಗಭೂಷಣ, ಕಾರ್ಯದರ್ಶಿ ಸಂಗಮೇಶ, ವಿದ್ಯಾರ್ಥಿಗಳಾದ ಅನುಶ್ರೀ, ಸಂದೀಪ, ಸದಸ್ಯರಾದ ವಿಕಾಸ, ವರುಣ, ಅಕಾಶ, ಹಾಲೇಶ, ಗೋಣಿಸ್ವಾಮಿ ಇತರರಿದ್ದರು. 
ಜಿಲ್ಲೆ

ವಿದ್ಯಾರ್ಥಿಗಳಿಗೆ ಹೆಚ್ಚುವರಿ ಬಸ್ ಸೌಲಭ್ಯ ಕಲ್ಪಿಸಲಿ

ರುದ್ರಪ್ಪ ವಾಲಿ

ಹಗರಿಬೊಮ್ಮನಹಳ್ಳಿ: ಶಾಲಾ-ಕಾಲೇಜಿಗೆ ತೆರಳುವ ವಿದ್ಯಾರ್ಥಿಗಳಿಗೆ ನಿಗದಿತ ವೇಳೆಗೆ ಸೂಕ್ತ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಸಂಘಟನೆ ಪದಾಧಿಕಾರಿಗಳು ಪಟ್ಟಣದ ತಹಸಿಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಉಪತಹಸೀಲ್ದಾರ್‌ರಾದ ವಿಶ್ವೇಶ್ವರಯ್ಯ ಹಾಗೂ ಅನ್ನದಾನೇಶ್ವರಗೆ ಬುಧವಾರ ಮನವಿ ಸಲ್ಲಿಸಿದರು.

ಜಿಲ್ಲಾ ಸಂಚಾಲಕ ಟಿ.ಭರತ್ ಮಾತನಾಡಿ, ರಾಜ್ಯ ಸರ್ಕಾರದ ಶಕ್ತಿ ಯೋಜನೆಯಿಂದ ಗ್ರಾಮೀಣ ಭಾಗದಲ್ಲಿ ವಿದ್ಯಾರ್ಥಿಗಳಿಗೆ ಕೆಎಸ್‌ಆರ್‌ಟಿಸಿ ಬಸ್‌ಗಳಿಂದ ಅವ್ಯವಸ್ಥೆಯಾಗಿದೆ.

ಬಸ್‌ಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪ್ರಯಾಣಿಕರು ಹೆಚ್ಚಾಗಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳಿಗೆ ಶಾಲಾ ಕಾಲೇಜಿಗೆ ತೆರಳಲು ತುಂಬಾ ಸಮಸ್ಯೆಯಾಗುತ್ತಿದೆ. ಬಸ್ ಚಾಲಕ ಮತ್ತು ನಿರ್ವಾಹಕರು ಪಾಸ್ ವಿದ್ಯಾರ್ಥಿಗಳನ್ನು ಕಂಡರೆ ನಿಗದಿತ ಸ್ಥಳದಲ್ಲಿ ಬಸ್‌ಗಳನ್ನು ನಿಲ್ಲಿಸುವುದಿಲ್ಲ. ಸರಿಯಾದ ಸಮಯಕ್ಕೆ ತರಗತಿಗಳಿಗೆ ಹಾಜರಾಗಲು ಸಾಧ್ಯವಾಗುತ್ತಿಲ್ಲ.

ಇದು ಕೇವಲ ಒಂದು ಭಾಗದಲ್ಲಷ್ಟೇ ಸಮಸ್ಯೆ ಆಗುತ್ತಿಲ್ಲ. ತಾಲೂಕಿನ ಎಲ್ಲಾ ಹೋಬಳಿ ಕೇಂದ್ರಗಳು ಸೇರಿದಂತೆ ಗ್ರಾಮೀಣ ಭಾಗದಲ್ಲಿಯೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗಿದೆ. ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ವಿದ್ಯಾರ್ಥಿಗಳ ಸಮಸ್ಯೆಗಳನ್ನು ಅರಿತು ಪರಿಶೀಲಿಸಿ ಸೂಕ್ತ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.