More

    ಬಸ್ ಸೌಲಭ್ಯಕ್ಕಾಗಿ ರಸ್ತೆ ತಡೆ: ಮುದ್ದಲಿಂಗನಹಳ್ಳಿಯಲ್ಲಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ಹೋರಾಟ

    ವಿಜಯವಾಣಿ ಸುದ್ದಿಜಾಲ ತ್ಯಾಮಗೊಂಡ್ಲು
    ತುಮಕೂರು ಮತ್ತು ಇತರ ಸ್ಥಳಗಳಿಗೆ ವ್ಯಾಸಂಗಕ್ಕಾಗಿ ತೆರಳುವ ತ್ಯಾಮಗೊಂಡ್ಲು ಹೋಬಳಿಯ ವಿದ್ಯಾರ್ಥಿಗಳಿಗೆ ಸಮರ್ಪಕ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸುವಂತೆ ಒತ್ತಾಯಿಸಿ ಬುಧವಾರ ರಾಷ್ಟ್ರೀಯ ಹೆದ್ದಾರಿ 207 ದೊಡ್ಡಬಳ್ಳಾಪುರ-ತುಮಕೂರು ಮಾರ್ಗದ ಮುದ್ದಲಿಂಗನಹಳ್ಳಿಯಲ್ಲಿ ಶಾಸಕ ಡಾ.ಕೆ.ಶ್ರೀನಿವಾಸಮೂರ್ತಿ ನೇತೃತ್ವದಲ್ಲಿ ವಿದ್ಯಾರ್ಥಿಗಳು, ಪಾಲಕರು ರಸ್ತೆತಡೆ ಮಾಡಿ ಪ್ರತಿಭಟನೆ ನಡೆಸಿದರು.
    ಹೋಬಳಿಯಿಂದ ತುಮಕೂರಿಗೆ ನೂರಾರು ವಿದ್ಯಾರ್ಥಿಗಳು ವಿದ್ಯಾಭ್ಯಾಸಕ್ಕೆ ತೆರಳುತ್ತಿದ್ದು, ಸಾರಿಗೆ ಸಂಸ್ಥೆಯ ಬಸ್‌ಗಳನ್ನೇ ಅವಲಂಬಿದ್ದಾರೆ. ಆದರೆ ಬಸ್‌ಗಳು ತಡವಾಗಿ ಬರುವುದಲ್ಲದೇ, ಕೆಲ ಬಸ್‌ಗಳು ಮುದ್ದಲಿಂಗನಹಳ್ಳಿಯಲ್ಲಿ ನಿಲ್ಲಿಸುತ್ತಿಲ್ಲ. ನಿಲ್ಲಿಸಿದರೂ ಬಸ್‌ಪಾಸ್ ಇರುವ ವಿದ್ಯಾರ್ಥಿಗಳನ್ನು ಹತ್ತಿಸಿಕೊಳ್ಳುವುದಿಲ್ಲ. ಹಾಗೂ ಹತ್ತಿದರೆ ಟಿಕೆಟ್ ತೆಗೆದುಕೊಳ್ಳುವಂತೆ ನಿರ್ವಾಹಕರು ಪೀಡಿಸುತ್ತಾರೆ ಎಂದು ವಿದ್ಯಾರ್ಥಿಗಳು ಅಲವತ್ತುಕೊಂಡರು.
    ಬಸ್ ನಿರ್ವಾಹಕರಿಗೂ ಮಕ್ಕಳಿಲ್ಲವೇ, ಅವರ ಮಕ್ಕಳು ಸಾರಿಗೆ ಬಸ್‌ಗಳನ್ನು ಅವಲಂಬಿಸಿಲ್ಲವೇ ಎಂದು ಪ್ರಶ್ನಿಸಿದ ಪಾಲಕರು, ವಿದ್ಯಾರ್ಥಿಗಳನ್ನು ಕಡೆಗಣಿಸಿ, ವಿದ್ಯಾಭ್ಯಾಸಕ್ಕೆ ತೊಂದರೆಯುಂಟು ಮಾಡುವುದು ಸರಿಯಲ್ಲ. ನಿಗದಿತ ಡಿಪೋದಿಂದ ಹೆಚ್ಚುವರಿಯಾಗಿ 3 ಬಸ್‌ಗಳನ್ನು ಬೆಳಗ್ಗೆ ಹಾಗೂ ಸಂಜೆ ವೇಳೆಗೆ ಮೀಸಲಿಟ್ಟು, ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಬೇಕು ಎಂದು ಒತ್ತಾಯಿಸಿದರು.
    ವಿದ್ಯಾರ್ಥಿನಿ ಅನನ್ಯಾ ಮಾತನಾಡಿ, ಹೋಬಳಿಯ 7 ಪಂಚಾಯಿತಿಗಳ 500ಕ್ಕೂ ಹೆಚ್ಚು ವಿದ್ಯಾರ್ಥಿಗಳು ಬೆಳಗ್ಗೆ 7 ಗಂಟೆಗೆ ಮುದ್ದಲಿಂಗನಹಳ್ಳಿಗೆ ಬಂದರೂ ಬಸ್ ಸರಿಯಾದ ಸಮಯಕ್ಕೆ ಬಾರದೆ, ತರಗತಿಗೆ ಸಮಯಕ್ಕೆ ಸರಿಯಾಗಿ ಹೋಗಲು ಆಗುತ್ತಿಲ್ಲ. ಹಾಜರಾತಿ ಕಡಿಮೆಯಾದರೆ ಪರೀಕ್ಷೆಗೆ ಸಮಸ್ಯೆ ಆಗುತ್ತದೆ. ಕಾಲೇಜಿನಲ್ಲಿ ಇದನ್ನು ಹೇಳಿದರೆ ನಂಬುತ್ತಿಲ್ಲ. ಡಿಪೋಗೆ ಕರೆ ಮಾಡಿದರೂ ಸರಿಯಾಗಿ ಸ್ಪಂದಿಸುವುದಿಲ್ಲ. ಆದ್ದರಿಂದ ರಸ್ತೆ ತಡೆ ಮಾಡಿ ಪ್ರತಿಭಟಿಸುತ್ತಿದ್ದೇವೆ. ಸ್ಥಳಕ್ಕೆ ಸಾರಿಗೆ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಬಂದು ನಮ್ಮ ಬೇಡಿಕೆ ಈಡೇರಿಸಬೇಕು ಎಂದು ಆಗ್ರಹಿಸಿದರು.
    ನೂರಾರು ವಿದ್ಯಾರ್ಥಿಗಳು ಮುದ್ದಲಿಂಗನಹಳ್ಳಿಯಿಂದ ಬಸ್ ಹತ್ತುತ್ತಾರೆ. ಬೆಳಗಿನ ವೇಳೆ ಹೆಚ್ಚಿನ ಸಂಖ್ಯೆಯ ಬಸ್‌ಗಳನ್ನು ನಿಯೋಜಿಸಬೇಕು ಸ್ಥಳೀಯ ಮುಖಂಡ ಚಿನ್ಮಯ್ ಆಗ್ರಹಿಸಿದರು.

    ಟ್ರಾಫಿಕ್ ಜಾಮ್: ಬೆಳಗ್ಗೆ 7 ಗಂಟೆಯಿಂದಲೇ ಶಾಲಾ-ಕಾಲೇಜು ವಿದ್ಯಾರ್ಥಿಗಳು, ಸ್ಥಳೀಯ ಮುಖಂಡರು ಮತ್ತು ಪಾಲಕರ ಬೆಂಬಲದೊಂದಿಗೆ ರಸ್ತೆ ತಡೆ ನಡೆಸಲು ಮುಂದಾದರು ಈ ವೇಳೆ ಹೋರಾಟಕ್ಕೆ ಶಾಸಕರು ಬೆಂಬಲ ಸೂಚಿಸಿ ರಸ್ತೆಲ್ಲೇ ಕುಳಿತ್ತಿದ್ದರಿಂದ ದೊಡ್ಡಬಳ್ಳಾಪುರ-ದಾಬಸ್‌ಪೇಟೆ ಮಾರ್ಗದಲ್ಲಿ ಸುಮಾರು 2 ಗಂಟೆ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಬಳಿಕ ಸ್ಥಳಕ್ಕೆ ಬಂದ ದೊಡ್ಡಬಳ್ಳಾಪುರ ಡಿಪೋ ವ್ಯವಸ್ಥಾಪಕ ಸಂತೋಷ್ ಅವರನ್ನು ತರಾಟೆ ತೆಗೆದುಕೊಂಡ ಶಾಸಕರು, ಚಿಕ್ಕಬಳ್ಳಾಪುರ, ಶಿಡ್ಲಘಟ್ಟ, ತುಮಕೂರು ಡಿಪೋ ವ್ಯವಸ್ಥಾಪಕರ ಜತೆ ದೂರವಾಣಿಯಲ್ಲಿ ಮಾತನಾಡಿ, ಅಗತ್ಯಕ್ಕೆ ತಕ್ಕಂತೆ ಬಸ್ ವ್ಯವಸ್ಥೆ ಮಾಡುವುದಾಗಿ ಭರವಸೆ ನೀಡಿದ ಬಳಿಕ ವಾಹನ ಸಂಚಾರಕ್ಕೆ ಅನುವು ಮಾಡಿಕೊಡಲಾಯಿತು.

    ಸಮಸ್ಯಗೆ ಪರಿಹಾರ ಭರವಸೆ: ಮುದ್ದಲಿಂಗನಹಳ್ಳಿ ಬಳಿ ಸಾರಿಗೆ ಸಂಸ್ಥೆಯಿಂದ ಸಂಚಾರ ನಿಯಂತ್ರ ಕೇಂದ್ರ ಆರಂಭಿಸುವ ಜತೆಗೆ ಸಮಾವೇಶಗಳಿಗೆ ಬಸ್‌ಗಳನ್ನು ಬಾಡಿಗೆಗೆ ಕೊಟ್ಟರೂ ವಿದ್ಯಾರ್ಥಿಗಳಿಗೆ ಸಮಸ್ಯೆಯಾಗದಂತೆ ಕ್ರಮ ಕೈಗೊಳ್ಳುವ ಜತೆಗೆ ಆಯಾ ಡಿಪೋದಿಂದ ಹೊರಡುವ ಎಲ್ಲ ಬಸ್‌ಗಳ ಚಾಲಕ ಮತ್ತು ನಿರ್ವಾಹಕರಿಗೆ ವಿದ್ಯಾರ್ಥಿಗಳಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸುವಂತೆ ಕಟ್ಟುನಿಟ್ಟಾದ ಸೂಚನೆ ನೀಡಬೇಕು. ಈಗ ನಡೆಯುತ್ತಿರುವ ಮೇಲ್ಸೇತುವೆ ಕಾಮಗಾರಿ ಮುಗಿದ ನಂತರ ಬಸ್‌ಗಳು ಮುದ್ದಲಿಂಗನಹಳ್ಳಿಯಲ್ಲಿ ಕಡ್ಡಾಯವಾಗಿ ನಿಲುಗಡೆ ನೀಡಬೇಕು. ಈ ಬಗ್ಗೆ ಸಾರಿಗೆ ಸಚಿವರ ಬಳಿಯೇ ಮಾತನಾಡಿ ವ್ಯವಸ್ಥೆ ಮಾಡಲಾಗುತ್ತದೆ. ಇದರಿಂದ ಸಮಸ್ಯೆ ನಿವಾರಣೆಯಾಗುತ್ತದೆ ಎಂದು ಶಾಸಕರು ಆಶ್ವಾಸನೆ ನೀಡಿದರು.

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts