More

    ನೈರ್ಮಲ್ಯ ರತ್ನ ಪಂಚಾಯಿತಿಯಲ್ಲಿ ಅನೈರ್ಮಲ್ಯ!: ಗಬ್ಬೆದ್ದು ನಾರುತ್ತಿದೆ ಬಾಶೆಟ್ಟಿಹಳ್ಳಿ ಪಪಂ ಕಸದ ಡಂಪಿಂಗ್‌ಯಾರ್ಡ್ ಸೃಷ್ಟಿ

    ವಿಜಯವಾಣಿ ವಿಶೇಷ ಬೆಂಗಳೂರು ಗ್ರಾಮಾಂತರ
    ಕಸ ವಿಲೇವಾರಿ, ಸ್ವಚ್ಛತೆ ಹಾಗೂ ನೈರ್ಮಲ್ಯ ವಿಷಯದಲ್ಲಿ ಕೇಂದ್ರ ಹಾಗೂ ರಾಜ್ಯ ಪ್ರಶಸ್ತಿಗಳನ್ನು ಪಡೆದುಕೊಂಡಿದ್ದ ದೊಡ್ಡಬಳ್ಳಾಪುರ ತಾಲೂಕಿನ ಬಾಶೆಟ್ಟಿಹಳ್ಳಿ ಪಟ್ಟಣ ಪಂಚಾಯಿತಿಗೆ ಅನೈರ್ಮಲ್ಯದ ಸೋಂಕು ಮೆತ್ತಿಕೊಂಡಿದೆ.
    ಈಗಾಗಲೇ ತಾಲೂಕು ಕಸದ ವಿಷಯವಾಗಿ ರಾಷ್ಟ್ರೀಯ ಮಟ್ಟದಲ್ಲೂ ಹೆಸರು ಕೆಡಿಸಿಕೊಂಡಿದೆ, ಇದರ ಸಾಲಿನಲ್ಲಿ ಈಗ ಬಾಶೆಟ್ಟಿಹಳ್ಳಿ ಪಂಚಾಯಿತಿ ಮುಂಚೂಣಿಗೆ ಬಂದಿದೆ.
    ಬಾಶೆಟ್ಟಿಹಳ್ಳಿ ಜನಸಂಖ್ಯೆ ಆಧಾರ ಹಾಗೂ ಸರ್ಕಾರದ ವಿವಿಧ ಮಾನದಂಡಗಳಡಿ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿತು. ಬಡ್ತಿ ಪಡೆದ ಮೇಲೆ ಅಭಿವೃದ್ಧಿ ಮತ್ತಷ್ಟು ವೇಗ ಪಡೆದುಕೊಳ್ಳುವ ನಿರೀಕ್ಷೆಯಲ್ಲಿದ್ದ ಜನತೆಗೆ ಇಲ್ಲಿನ ಆಡಳಿತ ವೈಖರಿ ತೀವ್ರ ನಿರಾಸೆ ಮೂಡಿಸಿದೆ. ಕಳೆದೆರಡು ವರ್ಷದಿಂದ ಯಾವುದೇ ಅಭಿವೃದ್ಧಿ ಕೆಲಸಗಳಲ್ಲಿ ಸಾಧನೆ ಮಾಡದ ಪಂಚಾಯಿತಿ ಕಸ ವಿಲೇವಾರಿ ವಿಷಯದಲ್ಲಿ ಸಾರ್ವಜನಿಕರ ಆಕ್ರೋಶಕ್ಕೆ ಗುರಿಯಾಗಿದೆ.
    ಕಸ ವಿಲೇವಾರಿಯಲ್ಲಿ ವಿಫಲ: ಕಸ ವಿಲೇವಾರಿ ಮತ್ತು ಸ್ವಚ್ಛತೆ ವಿಷಯಗಳಲ್ಲಿ ಎರಡು ಬಾರಿ ಗಾಂಧಿ ಗ್ರಾಮ ಪುರಸ್ಕಾರ ಪ್ರಶಸ್ತಿ ಪಡೆದಿರುವ ಹಾಗೂ ಕೇಂದ್ರ ಸರ್ಕಾರ ಕೊಡಮಾಡುವ ದೀನ್ ದಯಾಳ್ ಉಪಾಧ್ಯಾಯ ಪಂಚಾಯತ್, ಸಶಕ್ತಿಕರಣ್, ನೈರ್ಮಲ್ಯ ರತ್ನ ಪ್ರಶಸ್ತಿ ಸೇರಿ ಹಲವು ಪ್ರಶಸ್ತಿಗಳಿಗೆ ಭಾಜನವಾಗಿದ್ದ ಬಾಶೆಟ್ಟಿಹಳ್ಳಿ ಗ್ರಾಪಂ ಪಟ್ಟಣ ಪಂಚಾಯಿತಿಯಾಗಿ ಮೇಲ್ದರ್ಜೆಗೇರಿದ ಬಳಿಕ ಇವೆಲ್ಲ ಪ್ರಶಸ್ತಿಗಳಿಗೆ ಅಪವಾದ ಎಂಬಂತಾಗಿದೆ. ಮನೆ ಮನೆಯಲ್ಲಿ ಕಸ ವಿಂಗಡಣೆ ಕೆಲಸ ಸ್ಥಗಿತಗೊಂಡಿದೆ. ಪಂಚಾಯಿತಿ ವ್ಯಾಪ್ತಿಯ ಗ್ರಾಮಗಳಿಗೆ ಸ್ವಚ್ಛತಾ ವಾಹನಗಳು ತೆರಳುವುದೇ ಕಷ್ಟಕರವಾಗಿದ್ದು, ಕಸದ ಸಮಸ್ಯೆ ಉಲ್ಬಣವಾಗಿದೆ.
    ಮಿನಿ ಡಂಪಿಂಗ್‌ಯಾರ್ಡ್: ವೈಜ್ಞಾನಿಕವಾಗಿ ಕಸ ಸಂಗ್ರಹ ಮಾಡದ ಪಟ್ಟಣ ಪಂಚಾಯಿತಿ ವೈಫಲ್ಯದಿಂದಾಗಿ ವರದನಹಳ್ಳಿ ಬಳಿ ಮಿನಿ ಡಂಪಿಂಗ್‌ಯಾರ್ಡ್ ಸೃಷ್ಟಿಯಾಗಿದೆ. ಹಸಿ ಕಸ, ಒಣಕಸ, ಪ್ಲಾಸ್ಟಿಕ್, ಘನತ್ಯಾಜ್ಯ ಹೀಗೆ ಯಾವುದೇ ರೀತಿ ವಿಂಗಡಣೆ ಮಾಡದೆ ಕಸ ಸಂಗ್ರಹ ಮಾಡಿ ವರದನಹಳ್ಳಿ ಬಳಿಯ ಕಲ್ಲು ಬಂಡೆ ಹಳ್ಳದ ಬಳಿ ಸುರಿಯಲಾಗುತ್ತಿದೆ.
    ಅವೈಜ್ಞಾನಿಕವಾಗಿ ಸುರಿದಿರುವ ಕಸಕ್ಕೆ ಬೆಂಕಿ ಇಡಲಾಗುತ್ತಿದೆ. ಇದರಿಂದ ಸುತ್ತಮುತ್ತಲಿನ ಪ್ರದೇಶ ವಿಷಯುಕ್ತವಾಗಿದೆ. ದನಕರು ಹಾಗೂ ಕುರಿ ಮೇಕೆಗಳು ವಿಷಯುಕ್ತ ನೀರುಕುಡಿಯಬೇಕಾಗಿದೆ.

    ತ್ಯಾಜ್ಯ ವಿಲೇ ಘಟಕ ನಿಷ್ಕ್ರಿಯ: 2019ನೇ ಸಾಲಿನಲ್ಲಿ ವೈಜ್ಞಾನಿಕ ತ್ಯಾಜ್ಯ ವಿಲೇವಾರಿಗಾಗಿ ಕೋಟ್ಯಂತರ ರೂಪಾಯಿ ವೆಚ್ಚದಲ್ಲಿ ರಾಜ್ಯಕ್ಕೆ ಮಾದರಿಯಾಗುವ ಘನತ್ಯಾಜ್ಯ ಸಂಪನ್ಮೂಲ ಸಂಸ್ಕರಣ ಮತ್ತು ನಿರ್ವಹಣಾ ಘಟಕ ಸ್ಥಾಪನೆ ಮಾಡಲಾಯಿತು. ಈ ಘಟಕಕ್ಕೆ ಅಕ್ಕಪಕ್ಕದ ರಾಜ್ಯಗಳಿಂದ, ವಿವಿಧ ಜಿಲ್ಲೆಗಳಿಂದ ಹಾಗೂ ಜನಪ್ರತಿನಿಧಿಗಳ ತಂಡ ಆಗಮಿಸಿ
    ಕಸ ಘಟಕ, ವಿಲೇವಾರಿ ಮಾಹಿತಿ ಪಡೆದುಕೊಂಡಿದ್ದರು. ಆದರೀಗ ತ್ಯಾಜ್ಯ ವಿಲೇವಾರಿ ಘಟಕ ಬಹುತೇಕ ನಿಷ್ಕ್ರಿಯವಾಗಿದೆ.

    ಕಸದ ಅವ್ಯವಸ್ಥೆ ಬಗ್ಗೆ, ಅಭಿವೃದ್ಧಿ ಕೆಲಸಗಳ ಬಗ್ಗೆ ಅಧಿಕಾರಿಗಳಿಗೆ ತಿಳಿಸಿದರೆ ಪ್ರಯೋಜನವಾಗಿಲ್ಲ. ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಸ್ಥಾನಕ್ಕೆ ಕೆಎಎಸ್ ಅಧಿಕಾರಿ ನೇಮಕವಾಗಬೇಕು. ಆದರೆ ಇಲ್ಲಿ ಕಂದಾಯ ನಿರೀಕ್ಷಕ ಅಧಿಕಾರಿ ಬಡ್ತಿ ಆಧಾರದ ಮೇಲೆ ಈ ಕುಳಿತಿದ್ದಾರೆ. ಉತ್ತಮ ಅಧಿಕಾರಿ ಬರದಿದ್ದರೆ ಪಟ್ಟಣ ಪಂಚಾಯಿತಿ ಉದ್ಧಾರವಾಗುವುದೇ ಇಲ್ಲ.
    ಅಂಬರೀಶ್ ಕಸವನಹಳ್ಳಿ ಮುಖಂಡ

    ಟ್ರ್ಯಾಕ್ಟರ್ ಹಾಗೂ ಸ್ವಚ್ಛತಾ ವಾಹನಗಳ ಸಂಖ್ಯೆ ಕಡಿಮೆ ಇದೆ. ಸಿಬ್ಬಂದಿ ಸಂಖ್ಯೆಯೂ ಕಡಿಮೆ ಇದೆ. ಘನತ್ಯಾಜ್ಯ ಘಟಕ ಸೂಕ್ತವಾಗಿ ಕೆಲಸ ಮಾಡುತ್ತಿದೆ. ಮುಂದೆ ಮತ್ತಷ್ಟು ಸುಸಜ್ಜಿತವಾಗಿ ನಡೆಸುವ ಪ್ರಯತ್ನ ಮಾಡಲಾಗುವುದು.
    ಮುನಿರಾಜು ಮುಖ್ಯಾಧಿಕಾರಿ ಬಾಶೆಟ್ಟಿಹಳ್ಳಿ, ಪಟ್ಟಣ ಪಂಚಾಯಿತಿ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts