More

    ದೇಶದಲ್ಲಿ ಬಿಜೆಪಿಯಿಂದ ಬದಲಾವಣೆ: ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಅನಿಸಿಕೆ

    ವಿಜಯವಾಣಿ ಸುದ್ದಿಜಾಲ ಆನೇಕಲ್
    ಕೇಂದ್ರದಲ್ಲಿ ಬಿಜೆಪಿ ಸರ್ಕಾರ ಆಡಳಿತ ನಡೆಸಿರುವುದು ಕೇವಲ 16 ವರ್ಷ. ಕಾಂಗ್ರೆಸ್ 60 ವರ್ಷ ಆಡಳಿತ ನಡೆಸಿದೆ. ದೇಶದ ಬದಲಾವಣೆ ಯಾವ ಸಮಯದಲ್ಲಿ ಆಗಿದೆ ಎನ್ನುವುದನ್ನು ಜನ ಅರ್ಥ ಮಾಡಿಕೊಳ್ಳಬೇಕು ಎಂದು ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಹೇಳಿದರು.
    ಪಟ್ಟಣದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಾತನಾಡಿದ ಅವರು,
    ಸಿಎಂ ಬೊಮ್ಮಾಯಿ ಅವರು ಬಜೆಟ್‌ನಲ್ಲಿ ವಿದ್ಯಾರ್ಥಿಗಳು ಹಾಗೂ ಕಾರ್ಮಿಕರಿಗೆ ಉಚಿತ ಬಸ್‌ಪಾಸ್ ಘೋಷಣೆ ಮಾಡಿದ್ದು, ಲಕ್ಷಾಂತರ ಜನರಿಗೆ ಅನುಕೂಲವಾಗಿದೆ. ಬಿಜೆಪಿ ಅವಧಿಯಲ್ಲಿ ಉತ್ತಮ ಕೆಲಸ ಮಾಡಿದ್ದೇವೆ. ಗುಣಮಟ್ಟದ ಕಾಮಗಾರಿಗೆ ಆದ್ಯತೆ ನೀಡಿದ್ದು, ಇದಕ್ಕೆ ಅತ್ತಿಬೆಲೆ-ಆನೇಕಲ್ ಮುಖ್ಯರಸ್ತೆ ಸಾಕ್ಷಿ ಎಂದರು.
    ತಾಲೂಕಿನಲ್ಲಿ ಈಗಿನ ಆಡಳಿತ ಹೇಗಿದೆ ಎಂದರೆ 10 ಕಿಲೋಮೀಟರ್ ರಸ್ತೆಗೆ 8 ಕಿಲೋಮೀಟರ್ ಕಾಮಗಾರಿ ಮಾಡಿ ಪೂರ್ಣ ಬಿಲ್ ಮಾಡಿರುವುದು ತನಿಖೆ ನಡೆಯುತ್ತಿದೆ. 6 ಕಿಮೀಗೆ 3 ಕಿಮೀ ರಸ್ತೆ ಮಾಡಿ ಬಿಲ್ ಮಾಡಿಸಿಕೊಂಡಿರುವುದು ಶೀಘ್ರವೇ ಬಯಲಿಗೆ ಬರಲಿದೆ. ಅತ್ತಿಬೆಲೆ ಟಿವಿಎಸ್ ರಸ್ತೆಯನ್ನು ಸಾಕಷ್ಟು ಅಭಿವೃದ್ಧಿ ಮಾಡಿ, ಪದೇಪದೆ ತೇಪೆ ಹಾಕಿದ್ದು ಯಾರೆಂದು ಜನರಿಗೆ ತಿಳಿದಿದೆ ಎಂದು ಕ್ಷೇತ್ರದ ಶಾಸಕರ ಕಾರ್ಯವೈಖರಿಯನ್ನು ಲೇವಡಿ ಮಾಡಿದರು.
    ಬಿಜೆಪಿ, ಅಂಬೇಡ್ಕರ್ ಕೊಟ್ಟ ಸಂವಿಧಾನವನ್ನು ಮನೆ ಮನೆಗೆ ತಲುಪಿಸುವ ಕೆಲಸ ಮಾಡುತ್ತಿದೆ. ಆದರೆ ಕಾಂಗ್ರೆಸ್ ನಾಯಕರು ಮಾನಸಿಕ ಸ್ಥಿಮಿತ ಕಳೆದುಕೊಂಡವರಂತೆ ಬಿಜೆಪಿ ನಾಯಕರು ಸಂವಿಧಾನ ಬದಲಾವಣೆ ಮಾಡುತ್ತಾರೆ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದರು.
    ಪಕ್ಷದ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಅರುಣ್ ಕುಮಾರ್ ಮಾತನಾಡಿ, ಕಾಂಗ್ರೆಸ್ ನಾಯಕರು ಮಾಡುವ ತಪ್ಪುಗಳಿಗೆ ಲೆಕ್ಕವೇ ಇಲ್ಲ. ರಾಹುಲ್ ಗಾಂಧಿ ಅವರು ಧರ್ಮದ ವಿಚಾರದಲ್ಲಿ ವಿದೇಶದಲ್ಲಿ ಭಾರತದ ಮಾನ ತೆಗೆಯುವ ರೀತಿ ವರ್ತಿಸುತ್ತಾರೆ. ಆದರೆ ದೇಶದ ಧರ್ಮ ಉಳಿವಿಗಾಗಿ ಬಿಜೆಪಿ ಸರ್ಕಾರ ಹೋರಾಟ ಮಾಡುತ್ತಿದೆ ಎಂದರು.
    ಕಂದಾಯ ಸಚಿವ ಆರ್. ಅಶೋಕ್ ಮಾತನಾಡಿ, ವಿಜಯ ಸಂಕಲ್ಪ ಯಾತ್ರೆಯಿಂದ ಕಾಂಗ್ರೆಸ್‌ನವರಿಗೆ ಈಗಾಗಲೇ ಭಯ ಶುರುವಾಗಿದೆ. ಕೇಂದ್ರ ಹಾಗೂ ರಾಜ್ಯದ ಸಚಿವರು ಎಲ್ಲೆಡೆ ಪ್ರಚಾರ ಮಾಡುತ್ತಿದ್ದು, ಜನ ನಮ್ಮ ಪರವಾಗಿದ್ದಾರೆ ಎಂದರು.
    ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಮುಖ್ಯಮಂತ್ರಿ ಸ್ಥಾನದ ಸ್ಪರ್ಧೆಗೆ ಬಿದ್ದಿದ್ದು, ಮುಂದಿನ ದಿನಗಳಲ್ಲಿ ಸಿದ್ದರಾಮಯ್ಯ ಟಿಪ್ಪು ಪಕ್ಷ ಕಟ್ಟುವ ದಿನ ದೂರ ಇಲ್ಲ ಎಂದು ವೇವಡಿ ಮಾಡಿದರು. ಪಟ್ಟಣದ ನಾರಾಯಣಸ್ವಾಮಿ ಅವರ ನಿವಾಸದಿಂದ ಚೌಡೇಶ್ವರಿ ದೇವಾಲಯದವರೆಗೆ ಪೂರ್ಣಕುಂಭದೊಂದಿಗೆ ನೂರಾರು ಮಹಿಳೆಯರ ಜತೆಗೆ ಮೆರವಣಿಗೆ ಮಾಡಲಾಯಿತು. ಬೆಂಗಳೂರು ದಕ್ಷಿಣ ಶಾಸಕ ಎಂ.ಕೃಷ್ಣಪ್ಪ, ವಿಧಾನ ಪರಿಷತ್ ಸದಸ್ಯರಾದ ಅ. ದೇವೇಗೌಡ, ಛಲವಾದಿ ನಾರಾಯಣಸ್ವಾಮಿ, ಯುವಮೋರ್ಚಾ ರಾಜ್ಯಾಧ್ಯಕ್ಷ ಸಂದೀಪ್, ಬಿಜೆಪಿ ಆನೇಕಲ್ ಮಂಡಲ ಅಧ್ಯಕ್ಷ ನಾಯನಹಳ್ಳಿ ಮುನಿರಾಜುಗೌಡ, ಮುಖಂಡರಾದ ಟಿ.ವಿ ಬಾಬು, ಹುಲ್ಲಳ್ಳಿ ಶ್ರೀನಿವಾಸ್, ನಾಗರಾಜ್, ಟಾಟ್ ಶ್ರೀನಿವಾಸ್, ಕೆ.ಶಿವರಾಮು, ಬಂಡಾಪುರ ರಾಮಚಂದ್ರ ಮತ್ತಿತರರು ಇದ್ದರು.

    ಗೆಲುವಿಗೆ ಶಪಥ: ಆನೇಕಲ್ ತಾಲೂಕಿನಲ್ಲಿ ಬಿಜೆಪಿಯ ಶಾಸಕರನ್ನು ಅಧಿಕಾರಕ್ಕೆ ತಂದೆ ತರುತ್ತೇನೆ ಎಂದು ಶ್ರೀರಾಮ ದೇವಾಲಯದ ಮುಂದೆ ಕೇಂದ್ರ ಸಚಿವ ಎ.ನಾರಾಯಣಸ್ವಾಮಿ ಶಪಥ ಮಾಡಿದರು.

    ಪೂರ್ಣಕುಂಭ ಮೆರವಣಿಗೆಯಲ್ಲಿ ಜಿಗಣಿಗೆ ಯಾತ್ರೆ: ಬನ್ನೇರುಘಟ್ಟ ಚಂಪಕಧಾಮ ದೇವಾಲಯದಿಂದ ಸಾವಿರಾರು ಮಹಿಳೆಯರು ಪೂರ್ಣ ಕುಂಭದೊಂದಿಗೆ ಮೆರವಣಿಗೆಯಲ್ಲಿ ಪಾಲ್ಗೊಂಡು ಹರಪನಹಳ್ಳಿ ಕೊಪ್ಪ ಮೂಲಕ ಜಿಗಣಿಗೆ ಯಾತ್ರೆಯಲ್ಲಿ ಬರಲಾಯಿತು. ದಾರಿಯುವುದಕ್ಕೂ ನಾಯಕರಿಗೆ ಸೇಬು ಹಾಗೂ ಮೋಸಂಬಿ, ಹೂವಿನ ಬೃಹತ್ ಹಾರ ಹಾಕುವ ಮೂಲಕ ಸ್ವಾಗತ ಕೋರಿದರು. ಜಿಗಣಿ ವೃತ್ತದಲ್ಲಿ ಸಚಿವ ಮುನಿರತ್ನ ಮಾತನಾಡಿ, ಕಾಂಗ್ರೆಸ್ ಮುಚ್ಚುವ ಹಂತಕ್ಕೆ ಬಂದಿದೆ. ಅವರು ಸರಿಯಾಗಿ ಇದ್ದಿದ್ದರೆ ನಾವು 17 ಜನ ಪಕ್ಷವನ್ನು ಬಿಟ್ಟು ಬರುತ್ತಿರಲಿಲ್ಲ ಎಂದ ಅವರು, ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರ ರಾಜ್ಯದಲ್ಲಿ ಮಾದರಿ ಆಗಬೇಕಾದರೆ ಬಿಜೆಪಿ ಅಭ್ಯರ್ಥಿ ಗೆಲ್ಲಿಸಬೇಕು ಎಂದರು. ಶಾಸಕ ಎಂ. ಕೃಷ್ಣಪ್ಪ ಮಾತನಾಡಿ, ಕ್ಷೇತ್ರ ಅತಿ ದೊಡ್ಡದಾಗಿದ್ದರೂ ಎಲ್ಲರನ್ನೂ ಒಗ್ಗೂಡಿಸಿಕೊಂಡು ಅಭಿವೃದ್ಧಿ ಮಾಡಿದ್ದೇನೆ. ಕೆಲವು ಕಾಂಗ್ರೆಸ್ ಮುಖಂಡರು ಹೆನ್ನಾಗರ ಗ್ರಾಪಂನಲ್ಲಿ ಅಭಿವೃದ್ಧಿ ಕಾರ್ಯಕ್ರಮ ಉದ್ಘಾಟನೆಗೆ ಬಂದಾಗ ನನ್ನ ಕೆಲಸದ ಬಗ್ಗೆ ಪ್ರಶ್ನಿಸಿದ್ದಾರೆ. ಕೋಟಿಗಟ್ಟಲೆ ಅನುದಾನ ತಂದಿದ್ದು ನಾನು ಎನ್ನುವುದು ಅವರ ಗಮನಕ್ಕಿರಲಿ ಎಂದು ಲೇವಡಿ ಮಾಡಿದರು. ವಿಧಾನಪರಿಷತ್ ಸದಸ್ಯ ಗೋಪಿನಾಥ ರೆಡ್ಡಿ,ಅಶ್ವತ್ಥ ನಾರಾಯಣ, ಬಿಜೆಪಿ ಮಂಡಲ ಅಧ್ಯಕ್ಷ ರಾಜಶೇಖರ ರೆಡ್ಡಿ, ಜಿಪಂ ಮಾಜಿ ಸದಸ್ಯ ವೆಂಕಟೇಶ್, ಮುಖಂಡರಾದ ಜಿಗಣಿ ಆರ್. ಪುನೀತ್, ಗಿರೀಶ್, ಪ್ರವೀಣ್ ಇದ್ದರು.

    ಕಾಂಗ್ರೆಸ್ ನಾಯಕರಂತೆ ನಾವು ಯಾವುದೇ ಸಂಸ್ಥೆಯನ್ನು ಮುಚ್ಚಿಲ್ಲ. ಲೋಕಾಯುಕ್ತಕ್ಕೆ ಸಂಪೂರ್ಣ ಅಧಿಕಾರ ನೀಡಿದ್ದು, ಯಾರೇ ತಪ್ಪು ಮಾಡಿದರೂ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಎನ್ನದೆ ತನಿಖೆ ಮಾಡುವ ಸಂಪೂರ್ಣ ಅಧಿಕಾರ ನೀಡಲಾಗಿದೆ. ಅದೇ ರೀತಿ ಶಾಸಕ ಮಾಡಾಳ್ ಅವರ ತನಿಖೆಯೂ ನಡೆಯಲಿದೆ.
    ಆರ್.ಅಶೋಕ್ ಸಚಿವ

    ಸಿನಿಮಾ

    ಲೈಫ್‌ಸ್ಟೈಲ್

    ಟೆಕ್ನಾಲಜಿ

    Latest Posts