ವಿಜಯವಾಣಿ ಸುದ್ದಿಜಾಲ ಪಡುಬಿದ್ರಿ ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಿದರೆ ಪ್ರಕೃತಿ ವಿಪತ್ತು ನಿರ್ವಹಣೆ ಕಾಯ್ದೆಯಡಿ ಕಠಿಣ ಕ್ರಮ ಕೈಗೊಳ್ಳುವುದಾಗಿ ತಹಸೀಲ್ದಾರ್ ಪ್ರತಿಭಾ ಆರ್. ಖಡಕ್ ಎಚ್ಚರಿಕೆ ನೀಡಿದರು. ಪಾಂಗಳ ಗ್ರಾಮದ ಬೀಡು ಪ್ರದೇಶದಲ್ಲಿ ತೋಡನ್ನು ಮುಚ್ಚಿ ನೈಸರ್ಗಿಕ ನೀರಿನ ಹರಿವಿಗೆ ತಡೆಯೊಡ್ಡಲಾಗಿತ್ತು. ಇದರಿಂದ ಸುತ್ತಮುತ್ತಲಿನ ಮನೆಗಳು ಜಲಾವೃತವಾಗಿ ತೊಂದರೆ ಉಂಟಾಗಿತ್ತು. ಈ ಬಗ್ಗೆ ಸಾರ್ವಜನಿಕರಿಂದ ದೂರು ಬಂದ ಹಿನ್ನೆಲೆಯಲ್ಲಿ ವೃತ್ತ ನಿರೀಕ್ಷಕಿ ಜಯಶ್ರೀ, ಕಾಪು ಠಾಣಾಧಿಕಾರಿ ತೇಜಸ್ವಿ ಹಾಗೂ ಇನ್ನಂಜೆ ಗ್ರಾಪಂ ಅಧ್ಯಕ್ಷೆ ಮಾಲಿನಿ ಅವರೊಂದಿಗೆ ಶುಕ್ರವಾರ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ, ಸಮಸ್ಯೆಗೆ ತಾತ್ಕಾಲಿಕ ಪರಿಹಾರ ಕಲ್ಪಿಸಿ ಮಾತನಾಡಿದರು.
ಕಳೆದ ವರ್ಷವೂ ಈ ಪ್ರದೇಶದಲ್ಲಿ ಸಮಸ್ಯೆ ಉಂಟಾಗಿದ್ದು, ಆ ವೇಳೆಯೂ ಕಾರ್ಯಾಚರಣೆ ನಡೆಸಿ ಸಮಸ್ಯೆ ಪರಿಹರಿಸಲಾಗಿತ್ತು. ಈ ಭಾಗದಲ್ಲಿ ಮಳೆ ನೀರು ಹರಿಯಲು ಶಾಶ್ವತ ತೋಡು ನಿರ್ಮಾಣ ಮಾಡುವಂತೆ ಒತ್ತಾಯಿಸಿದ್ದಾರೆ. ಗ್ರಾಪಂ ತೋಡು ನಿರ್ಮಿಸಲು ಬದ್ಧವಿದೆ. ಆದರೆ ಪಟ್ಟಾ ಜಾಗದ ಮಾಲೀಕರು ಕಾಮಗಾರಿಗೆ ತಡೆ ಒಡ್ಡುತ್ತಿರುವುದರಿಂದ ತೋಡು ನಿರ್ಮಿಸಲು ಅಡ್ಡಿಯಾಗುತ್ತಿದೆ ಎಂದು ಪಿಡಿಒ ಚಂದ್ರಕಲಾ, ತಹಸೀಲ್ದಾರ್ ಗಮನಕ್ಕೆ ತಂದರು.ನೀರಿನ ನೈಸರ್ಗಿಕ ಹರಿವಿಗೆ ತಡೆಯೊಡ್ಡಿ ಕೃತಕ ನೆರೆಗೆ ಕಾರಣವಾಗುವಂತಹವರ ಮೇಲೆ ಕ್ರಮ ಕೈಗೊಳ್ಳಲಾಗುವುದು. ಎಲ್ಲರಿಗೂ ಈ ಭೂಮಿಯ ಮೇಲೆ ಬದುಕುವ ಹಕ್ಕಿದೆ ಎಂದ ತಹಸೀಲ್ದಾರ್ ಪ್ರತಿಭಾ, ಶೀಘ್ರದಲ್ಲೇ ಶಾಶ್ವತ ತೋಡು ನಿರ್ಮಿಸುವ ಭರವಸೆ ನೀಡಿದರು.