ಜಿಲ್ಲೆ

ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ

ಎನ್.ವೆಂಕಟೇಶ್

ಚಿಂತಾಮಣಿ: ತಾಲೂಕಿನ ಚೇಳೂರು ರಸ್ತೆಯ ಏನಿಗದೆಲೆ ಕರ್ನಾಟಕ ವಿದ್ಯುತ್ ಮಂಡಳಿ ಪವರ್ ಸ್ಟೇಷನ್ ಎದುರು ರಸ್ತೆಬದಿ ನಿಂತಿದ್ದ ಲಾರಿಗೆ ಟೆಂಪೋ ಡಿಕ್ಕಿ ಹೊಡೆದಿರುವ ಘಟನೆ ಗುರುವಾರ ರಾತ್ರಿ ಸಂಭವಿಸಿದೆ. ಟೆಂಪೋ ಚಾಲಕ ಮತ್ತು ಮತ್ತೊಬ್ಬರಿಗೆ ಗಾಯಗಳಾಗಿದೆ. ತಾಲೂಕಿನ ಚಿಲಕಲನೇರ್ಪು ಗ್ರಾಮದ ಯಶವಂತ್‌ಕುಮಾರ್ ಮತ್ತು ಮಾದಮಂಗಲ ಗ್ರಾಮದ ಮೌನೀಶ್ ಗಾಯಗೊಂಡವರು. ಪವರ್ ಸ್ಟೇಷನ್‌ನಲ್ಲಿ ವಿದ್ಯುತ್ ಕಂಬಗಳನ್ನು ಇಳಿಸಲು ಕ್ರೇನ್ ತಂದಿದ್ದ ಲಾರಿಯನ್ನು ಕ್ರೇನ್ ಇಳಿಸಿದ ನಂತರ ಸ್ಟೇಷನ್ ಎದುರು ರಸ್ತೆಬದಿ ನಿಲ್ಲಿಸಲಾಗಿತ್ತು. ಚಿಂತಾಮಣಿ ಎಪಿಎಂಸಿಯಲ್ಲಿ ಟೊಮ್ಯಾಟೊ ಅನ್‌ಲೋಡ್ ಮಾಡಿದ ಟೆಂಪೋ ಚಿಲಕಲನೇರ್ಪು ಕಡೆಗೆ ಹೊರಟಿತ್ತು. ಈ ವೇಳೆ ಅಪಘಾತ ಸಂಭವಿಸಿದೆ. ಗಾಯಾಳುಗಳನ್ನು ಕೆಂಚಾರ್ಲಹಳ್ಳಿ ಠಾಣೆ ಪೊಲೀಸರು ಜೀಪಿನಲ್ಲಿ ಕರೆದೊಯ್ದು ಆಸ್ಪತ್ರೆಗೆ ಸೇರಿಸಿದ್ದಾರೆ. ಗಾಯಾಳುಗಳು ನೀಡಿದ ದೂರಿನ ಮೇರೆಗೆ ಪೊಲೀಸರು ಕ್ರಮ ಕೈಗೊಂಡಿದ್ದಾರೆ.