ಜಿಲ್ಲೆ

ಗಣೇಶ ಮೆರವಣಿಗೆ ವೇಳೆ ಅನ್ಯಕೋಮಿನ ಯುವಕರಿಂದ ಕಲ್ಲು ತೂರಾಟ; ಪೊಲೀಸ್ ಠಾಣೆ ಎದುರು ಹಿಂದೂಗಳಿಂದ ಪ್ರತಿಭಟನೆ

ಮಂಡ್ಯ: ಮಂಡ್ಯದ ನಾಗಮಂಗಲ ಪಟ್ಟಣದ ಮೈಸೂರು ರಸ್ತೆಯ ದರ್ಗಾದ ಬಳಿ ಬುಧವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆ ವೇಳೆ ಅನ್ಯಕೋಮಿನ ಗುಂಪೊಂದು ಕಲ್ಲು ತೂರಾಟ ಮಾಡಿದ ಪರಿಣಾಮ ಕೆಲವರಿಗೆ ಗಾಯಗಳಾಗಿವೆ. ಪರಿಸ್ಥಿತಿ ಉದ್ವಿಗ್ನಗೊಂಡ ಹಿನ್ನೆಲೆಯಲ್ಲಿ ಪೊಲೀಸರು ಲಾಠಿ ಪ್ರಹಾರ ನಡೆಸಿದ್ದಾರೆ.

ಪಟ್ಟಣದ ಬದ್ರಿಕೊಪ್ಪಲು ಗ್ರಾಮದ ಯುವಕರು ಪಟ್ಟಣದ ಹೆದ್ದಾರಿಯಲ್ಲಿ ಗಣೇಶ ವಿಸರ್ಜನೆ ಅಂಗವಾಗಿ ಅದ್ದೂರಿಯಾಗಿ ಗಣೇಶ ಮೂರ್ತಿ ಮೆರವಣಿಗೆ ಮಾಡಲಾಗುತ್ತಿತ್ತು. ಆ ಸಂದರ್ಭದಲ್ಲಿ ನಾಗಮಂಗಲದ ಮೈಸೂರು ರಸ್ತೆಯಲ್ಲಿರುವ ದರ್ಗಾ ಬಳಿ ಮೆರವಣಿಗೆ ಬಂದ ವೇಳೆ ಅನ್ಯಕೋಮಿನ ಯುವಕರು ಕಲ್ಲುತೂರಾಟ ನಡೆಸಿದ್ದಾರೆ.

ಈ ವೇಳೆ ಹಿಂದೂ-ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ ನಡೆದಿದೆ, ಈ ವೇಳೆ ತಳ್ಳಾಟ ನೂಕಾಟವಾಗಿದ್ದು, ಪರಿಸ್ಥಿತಿ ತಿಳಿಗೊಳಿಸಲು ಪೊಲೀಸರು ಹರಸಾಹಸ ನಡೆಸಿದ್ದಾರೆ. ಬಳಿಕ ಕಿಡಿಗೇಡಿಗಳ ವಿರುದ್ಧ ಕ್ರಮಕ್ಕಾಗಿ ಆಗ್ರಹಿಸಿ ಪೊಲೀಸ್ ಠಾಣೆ ಎದುರು ಗಣೇಶ ಮೂರ್ತಿ ನಿಲ್ಲಿಸಿ ಹಿಂದೂಗಳು ಪ್ರತಿಭಟನೆ ನಡೆಸಿದ್ದಾರೆ.