ಜಿಲ್ಲೆ

ಗಣಪತಿ ವಿಸರ್ಜನೆ ವೇಳೆ ಕಿಡಿಗೇಡಿಗಳಿಂದ ಕಲ್ಲು ತೂರಾಟ; ಪೊಲೀಸರಿಗೆ ಗಾಯ, ಪರಿಸ್ಥಿತಿ ಉದ್ವಿಗ್ನ

Webdesk - Manjunatha B

ದಾವಣಗೆರೆ: ಸೆಪ್ಟೆಂಬರ್​ 12ರಂದು ನಾಗಮಂಗಲದಲ್ಲಿ ಗಣೇಶ ವಿಸರ್ಜನೆ ವೇಳೆ ನಡೆದಿದ್ದ ಕೋಮು ಗಲಭೆಯ ಬೆಂಕಿ ಆರುವ ಮುನ್ನವೇ ಇದೀಗ ರಾಜ್ಯದಲ್ಲಿ ಅದೇ ರೀತಿಯ ಮತ್ತೊಂದು ಘಟನೆ ಸಂಭವಿಸಿದೆ. ದಾವಣೆಗೆರೆಯ ಬೇತೂರು ಗಣಪತಿ ವಿಸರ್ಜನೆ ವೇಳೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಪೊಲೀಸರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಪರಿಸ್ಥಿತಿ ನಿಭಾಯಿಸಲು ಪೊಲೀಸರು ಹರಸಾಹಸ ಪಡುತ್ತಿದ್ದಾರೆ.

ದಾವಣಗೆರೆಯ ಅರಳಿ ಮರ ಸರ್ಕಲ್ ಬಳಿ ಗಣೇಶ ಮೆರವಣಿಗೆ ನಡೆಯುತ್ತಿದ್ದ ವೇಳೆ ದುಷ್ಕರ್ಮಿಗಳ ಗುಂಪೊಂದು ಕಲ್ಲು ತೂರಾಟ ನಡೆಸಿದೆ. ಇದಲ್ಲದೆ ಕಿಡಿಗೇಡಿಗಳು ಪೊಲೀಸರ ಮೇಲೂ ಕಲ್ಲು ತೂರಾಟ ನಡೆಸಿದ್ದು, ಘಟನೆಯಲ್ಲಿ ಸರ್ಕಲ್ ಇನ್ಸ್ ಪೆಕ್ಟರ್ ಗುರುಬಸವರಾಜ್ ಹಾಗೂ ಕ್ರೈಂ ವಿಭಾಗದ ಪೊಲೀಸ್ ಕಾನ್ಸ್ ಸ್ಟೇಬಲ್ ರಘು ಎಂಬುವವರಿಗೆ ಗಾಯವಾಗಿದೆ.

ಗಣೇಶನ ಮೆರವಣಿಗೆ ಸಾಗುವ ದಾರಿಯೂದ್ದಕ್ಕೂ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ಎರಡು ಗುಂಪುಗಳ ಜನರು ಜಮಾಯಿಸಿದ್ದಾರೆ. ಪೊಲೀಸ್ ಸರ್ಪಗಾವಲಿನಲ್ಲೇ ಗಣೇಶ್ ವಿಸರ್ಜನಾ ಮೆರವಣಿಗೆ ನಡೆದಿದೆ. ಇನ್ನೂ ಗಣೇಶ ಮೆರವಣಿಗೆಯ ದಾರಿಯುದ್ದಕ್ಕೂ ಕಲ್ಲು ತೂರಾಟ ನಡೆಸಲಾಗಿದೆ. ಇನ್ನು ಕಲ್ಲು ತೂರಿದ ಕಿಡಿಗೇಡಿಗಳನ್ನ ಪೊಲೀಸರು ಓಡಿಸಿಕೊಂಡು ಹೋಗಿದ್ದು, ಸಿಸಿಟಿವಿ ದೃಶ್ಯ ಸಂಗ್ರಹಿಸಿ ಆರೋಪಿಗಳ ಪತ್ತೆಕಾರ್ಯ ನಡೆದಿದೆ. ಘಟನೆ ಸಂಬಂಧ ಉಮಾ ಪ್ರಶಾಂತ್ ನೇತೃತ್ವದಲ್ಲಿ ಬಿಗಿ ಪೊಲೀಸ್ ಭದ್ರತೆ ಮಾಡಿಕೊಳ್ಳಲಾಗಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಂಗಡಿ‌ ಮುಗ್ಗಟ್ಟುಗಳನ್ನ ಪೊಲೀಸರು ಮುಚ್ಚಿಸಿದ್ದಾರೆ.

ಈ ಕುರಿತು ಮಾತನಾಡಿರುವ ಜಿಲ್ಲಾ ಪೊಲೀಸ್​ ವರಿಷ್ಠಾಧಿಕಾರಿ ಉಮಾ ಪ್ರಶಾಂತ್​, ಬೇತೂರು ರಸ್ತೆ ಗಣೇಶ ಮೆರವಣಿಗೆ ವೇಳೆ ಕಲ್ಲು ತೂರಾಟ ಆಗಿದೆ. ಇನ್ಸ್‌ಪೆಕ್ಟರ್, ಕಾನ್ಸ್‌ಟೇಬಲ್‌ಗೆ ಸಣ್ಣಪುಟ್ಟ ಗಾಯಗಳಾಗಿವೆ. ಪರಿಸ್ಥಿತಿ ನಿಯಂತ್ರಣದಲ್ಲಿದೆ, ಆರೋಪಿಗಳ ಪತ್ತೆಗಾಗಿ ಕ್ರಮ ಕೈಗೊಂಡಿದ್ದೇವೆ. ನಿಷೇಧಾಜ್ಞೆ ಜಾರಿ ಬಗ್ಗೆ ಡಿಸಿ ಜೊತೆ ಚರ್ಚೆ ನಡೆಸಲಾಗಿದೆ. ಪ್ರಚೋದನಾತ್ಮಕ ಭಾಷಣವೇ ಗಲಾಟೆಗೆ ಕಾರಣವಾಗಿದೆ. ನಿನ್ನೆ ಒಂದು ಕೋಮಿನವರು ಪ್ರಚೋದನಾತ್ಮಕ ಹೇಳಿಕೆ ನೀಡಿದ್ದರು. ಇದಕ್ಕೆ ಇನ್ನೊಂದು ಕೋಮಿನವರು ವಿರೋಧ ವ್ಯಕ್ತಪಡಿಸಿದ್ದರು. ಎರಡೂ ಕಡೆಯವರಿಂದ ದೂರು ದಾಖಲಾಗಿದೆ, ಕ್ರಮಕೈಗೊಳ್ತೇವೆ ಎಂದು ಘಟನೆಯ ಕುರಿತು ಮಾಹಿತಿ ನೀಡಿದ್ದಾರೆ.