ಜಿಲ್ಲೆ

ರಾಜ್ಯಮಟ್ಟದ ಅಂಚೆ-ಕುಂಚ ಸ್ಪರ್ಧೆಗೆ ಆಹ್ವಾನ: ವಿಜೇತರಿಗೆ ನಗದು ಬಹುಮಾನ

ಬೆಳ್ತಂಗಡಿ: ಶ್ರೀ ಕ್ಷೇತ್ರ ಧರ್ಮಸ್ಥಳದ ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್​ ಆಶ್ರಯದಲ್ಲಿ 'ಸಂಗೀತ ಪರಿಕರಗಳ ಪರಿಚಯ' ಎಂಬ ವಿಷಯ ಕುರಿತು ರಾಜ್ಯಮಟ್ಟದ ಚಿತ್ರ ಬಿಡಿಸುವ ಸ್ಪರ್ಧೆ ಆಯೋಜಿಸಲಾಗಿದೆ.

20/14 ಸೆಂ.ಮೀ. ಗಾತ್ರದ ಡ್ರಾಯಿಂಗ್​ ಶೀಟ್​, ಸ್ಪರ್ಧಾ ಕಾರ್ಡ್​ ಅಥವಾ ಅಂಚೆ ಕಾರ್ಡ್​ ಮೂಲಕ ಚಿತ್ರ ಬಿಡಿಸಬಹುದು. ಸ್ಪರ್ಧೆ ಕರ್ನಾಟಕದವರಿಗೆ ಮಾತ್ರ ಅನ್ವಯಿಸುತ್ತದೆ. ಪ್ರವೇಶ ಶುಲ್ಕವಿಲ್ಲ. ಪ್ರಾಥಮಿಕ ಶಾಲಾ ವಿಭಾಗ, ಪ್ರೌಢ, ಕಾಲೇಜು ಹಾಗೂ ಸಾರ್ವಜನಿಕ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಪ್ರತಿ ವಿಭಾಗದಲ್ಲೂ ಪ್ರಥಮ, ದ್ವಿತೀಯ, ತೃತೀಯ ಸ್ಥಾನ ಪಡೆದವರಿಗೆ ನಗದು ಬಹುಮಾನ ಹಾಗೂ ಸ್ಮರಣಿಕೆ ನೀಡಿ ಗೌರವಿಸಲಾಗುವುದು.

ಪೆನ್ಸಿಲ್​, ಜಲವರ್ಣ, ತೈಲವರ್ಣ ಅಥವಾ ಇಂಡಿಯನ್​ ಇಂಕ್​ ಹಾಗೂ ವಿವಿಧ ರೀತಿಯಿಂದ ಚಿತ್ರಗಳನ್ನು ರಚಿಸಬಹುದು. ಒಬ್ಬರು ಎಷ್ಟು ಚಿತ್ರಗಳನ್ನಾದರೂ ಕಳುಹಿಸಬಹುದು. ವಿದ್ಯಾರ್ಥಿಗಳಾಗಿದ್ದಲ್ಲಿ ಮನೆ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ವಿದ್ಯಾಲಯದ ಮುದ್ರೆ ಹಾಗೂ ಶಾಲಾ ಕಾಲೇಜಿನ ಮುಖ್ಯಸ್ಥರ ಸಹಿಯೊಂದಿಗೆ ದೃಢೀಕರಿಸಿ ಕಳುಹಿಸಬೇಕು. ಶಾಲಾ ಮುಖ್ಯಸ್ಥರ ಸಹಿ ಇಲ್ಲದಿದ್ದಲ್ಲಿ ಅಂಥ ಚಿತ್ರಗಳನ್ನು ಸಾರ್ವಜನಿಕ ವಿಭಾಗ ಎಂದು ಬರೆದು ಸ್ಪರ್ಧಿಯ ಪೂರ್ಣ ವಿಳಾಸ (ದೂರವಾಣಿ ಸಂಖ್ಯೆ ಸಹಿತ) ಕಳುಹಿಸಬೇಕು.

ಸ್ಪರ್ಧಿಗಳು ಚಿತ್ರಗಳನ್ನು ತಮ್ಮ ಪೂರ್ಣ ವಿಳಾಸ ಹಾಗೂ ದೂರವಾಣಿ ಸಂಖ್ಯೆಯೊಂದಿಗೆ 2023ರ ಮಾ.31ರೊಳಗೆ ನಿರ್ದೇಶಕರು, ಅಂಚೆ&ಕುಂಚ ವಿಭಾಗ, ಯೋಗ ಮತ್ತು ನೈತಿಕ ಶಿಕ್ಷಣ ಯೋಜನೆ, ಶಾಂತಿವನ ಟ್ರಸ್ಟ್​ ಶ್ರೀ ಕ್ಷೇತ್ರ ಧರ್ಮಸ್ಥಳ-574216, ಬೆಳ್ತಂಗಡಿ ತಾಲೂಕು, ದಕ್ಷಿಣ ಕನ್ನಡ ಜಿಲ್ಲೆ. ಈ ವಿಳಾಸಕ್ಕೆ ಕಳುಹಿಸಬೇಕೆಂದು ಯೋಜನೆಯ ನಿರ್ದೇಶಕ ಡಾ.ಐ. ಶಶಿಕಾಂತ್​ ಜೈನ್​ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.