ಜಿಲ್ಲೆ

ಗಣಿತ ಪರೀಕ್ಷೆ ಬರೆದು ಈಜಲು ಹೋದ ಎಸ್​ಎಸ್​ಎಲ್​ಸಿ ವಿದ್ಯಾರ್ಥಿ ಸಾವು!

Webdesk - Ravikanth

ಚಿಕ್ಕೋಡಿ: ಎಸ್​ಎಸ್ಎಲ್​ಸಿ ವಿದ್ಯಾರ್ಥಿಯೊಬ್ಬ ಇಂದು ಗಣಿತ ಪರೀಕ್ಷೆ ಬರೆದು ಸೀದಾ ಮನೆಗೇ ಹೋಗಿದ್ದರೆ ಬಹುಶಃ ಬದುಕುಳಿದಿರುತ್ತಿದ್ದ. ಪರೀಕ್ಷೆ ಬರೆದ ಮಗ ಮನೆಗೆ ಮರಳುತ್ತಾನೆ ಎಂಬ ನಿರೀಕ್ಷೆಯಲ್ಲಿದ್ದ ಮನೆಯವರಿಗೆ ಬಂದಿದ್ದು ಆಘಾತಕಾರಿ ಸುದ್ದಿ. ಬೆಳಗಾವಿ ಜಿಲ್ಲೆಯ ಗೋಕಾಕ್​ನಲ್ಲಿ ಇಂಥದ್ದೊಂದು ದುರಂತ ಸಂಭವಿಸಿದೆ.

ಉಮರ್ ಫಾರೂಕ್​ (16) ಸಾವಿಗೀಡಾದ ವಿದ್ಯಾರ್ಥಿ. ಇಂದು ಈತ ಎಸ್ಎಸ್​ಎಲ್​ಸಿಯ ಗಣಿತ ಪರೀಕ್ಷೆಗೆ ಹಾಜರಾಗಿದ್ದು, ಪರೀಕ್ಷೆ ಮುಗಿದ ಬಳಿಕ ನೇರವಾಗಿ ಮನೆಗೆ ತೆರಳುವ ಬದಲು ಗೆಳೆಯರೊಂದಿಗೆ ಮೋಜಿಗೆಂದು ಈಜಾಟಕ್ಕೆ ಇಳಿದಿದ್ದೇ ಪ್ರಾಣಕ್ಕೆ ಮುಳುವಾಗಿದೆ.

ಬೆಳಗಾವಿ ಜಿಲ್ಲೆಯ ಗೋಕಾಕನ ಯೋಗಿಕೊಳ್ಳದ ಮಾರ್ಕಂಡೇಯ ನದಿಯಲ್ಲಿ ಈಜಲು ಹೋದ ಈತ ನೀರುಪಾಲಾಗಿದ್ದ. ಅಗ್ನಿಶಾಮಕ ಸಿಬ್ಬಂದಿ ಕಾರ್ಯಾಚರಣೆ ನಡೆಸಿ ಬಾಲಕನ ಶವ ಪತ್ತೆ ಮಾಡಿ ಹೊರ ತೆಗೆದಿದ್ದಾರೆ. ಸ್ಥಳಕ್ಕೆ ಗೋಕಾಕ ಗ್ರಾಮೀಣ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.