ಜಿಲ್ಲೆ

ಕೂಡ್ಲು ಯಕ್ಷಗಾನದ ತವರು ನೆಲ :ವಿಷ್ಣು ಶ್ಯಾನುಭಾಗ್ ಅಭಿಪ್ರಾಯ

ಸೌಮ್ಯ ಆರ್

ಕಾಸರಗೋಡು: ಜಿಲ್ಲೆಯ ಕೂಡ್ಲು ಪ್ರದೇಶ ಯಕ್ಷಗಾನದ ತವರಾಗಿದ್ದು, ಯಕ್ಷಗಾನ ಕಲಾಪ್ರಕಾರ ಮುಂದಿನ ಪೀಳಿಗೆಗೆ ಹಸ್ತಾಂತರಿಸುವ ಕೆಲಸ ಇಂದಿಗೂ ಇಲ್ಲಿ ನಡೆಯುತ್ತಿದೆ ಎಂದು ಕಲಾವಿದ, ಶ್ರೀ ಗೋಪಾಲಕೃಷ್ಣ ಶ್ಯಾನುಭೋಗ್ ಮೆಮೊರಿಯಲ್ ಟ್ರಸ್ಟ್ ಅಧ್ಯಕ್ಷ ವಿಷ್ಣು ಶ್ಯಾನುಭಾಗ್ ತಿಳಿಸಿದ್ದಾರೆ.

ಕುತ್ಯಾಳ ಶ್ರೀ ಗೋಪಾಲಕೃಷ್ಣ ದೇವಸ್ಥಾನ ಜಾತ್ರಾ ಸಂದರ್ಭ ಪಾಯಿಚ್ಚಾಲಿನ ಶ್ರೀಸ್ಕಂದ ಯಕ್ಷಗಾನ ಕೇಂದ್ರ ವಿದ್ಯಾರ್ಥಿಗಳಿಗೆ ಟ್ರಸ್ಟ್ ವತಿಯಿಂದ ಅಭಿನಂದನೆ ಸಲ್ಲಿಸಿ ಮಾತನಾಡಿದರು.

ಕುತ್ಯಾಳ ಕ್ಷೇತ್ರ ಮೊಕ್ತೇಸರ ಕೆ.ಜಿ.ಶ್ಯಾನುಭಾಗ್ ಉದ್ಘಾಟಿಸಿದರು. ನಾಟ್ಯಗುರು ರಂಜಿತ್ ಗೋಳಿಯಡ್ಕ ಉಪಸ್ಥಿತರಿದ್ದರು.ಟ್ರಸ್ಟ್ ವತಿಯಿಂದ ನಾಟ್ಯಗುರು ರಂಜಿತ್ ಗೋಳಿಯಡ್ಕ ಅವರನ್ನು ಗೌರವಿಸಲಾಯಿತು. ಶ್ರೀಸ್ಕಂದ ಯಕ್ಷಗಾನ ಕೇಂದ್ರ ಅಧ್ಯಕ್ಷ ಕಿರಣ್‌ಪ್ರಸಾದ್ ಕೂಡ್ಲು ಸ್ವಾಗತಿಸಿದರು. ಕೋಶಾಧಿಕಾರಿ ಮುರಳೀಧರ ಶೆಟ್ಟಿ ವಂದಿಸಿದರು.

ಶ್ರೀಸ್ಕಂದ ಯಕ್ಷಗಾನ ಕೇಂದ್ರ ಮಕ್ಕಳಿಂದ ಶ್ರೀಕೃಷ್ಣ ಲೀಲೆ-ನರಕಾಸುರ ಮೋಕ್ಷ ಎಂಬ ಯಕ್ಷಗಾನ ಜರುಗಿತು. ಯಕ್ಷಗಾನದಲ್ಲಿ ಭಾಗವಹಿಸಿದ ಮಕ್ಕಳಿಗೆ ಕ್ಷೇತ್ರದ ವತಿಯಿಂದ ಸ್ಮರಣಿಕೆ, ಪ್ರಶಸ್ತಿ ಪತ್ರವನ್ನು ಕ್ಷೇತ್ರದ ಮೊಕ್ತೇಸರ ಕೆ.ಜಿ.ಶ್ಯಾನುಭೋಗ್ ನೀಡಿದರು.