ಜಿಲ್ಲೆ

ಶ್ರೀಕ್ಷೇತ್ರ ಸಿಗಂದೂರು ಆಂತರಿಕ ಸಂಘರ್ಷ ಬಗೆಹರಿಸಿ

ಸಾಗರ: ಶ್ರೀಕ್ಷೇತ್ರ ಸಿಗಂದೂರಿನಲ್ಲಿ ಉದ್ಭವಿಸಿರುವ ಆಂತರಿಕ ಸಂಘರ್ಷವನ್ನು ಸರ್ಕಾರ ಮಧ್ಯಪ್ರವೇಶಿಸಿ ತಿಳಿಗೊಳಿಸಬೇಕು. ಗ್ರಾಮದಲ್ಲಿ ಶಾಂತಿ, ಸುವ್ಯವಸ್ಥೆ ಕಾಪಾಡುವಂತೆ ಒತ್ತಾಯಿಸಿ ಶನಿವಾರ ಕರೂರು ಹೋಬಳಿಯ ಕಳಸವಳ್ಳಿ, ಹೊಸಳ್ಳಿಯ ಕೆಲವರು ಉಪವಿಭಾಗಾಧಿಕಾರಿಗೆ ಮನವಿ ಸಲ್ಲಿಸಿದರು.

ಕರೂರು ಹೋಬಳಿಯ ಕಳಸವಳ್ಳಿ ಗ್ರಾಮದ ಸಿಗಂದೂರು ಚೌಡೇಶ್ವರಿ ದೇವಾಲಯ ಪ್ರಸಿದ್ಧವಾಗಿದ್ದು, ರಾಜ್ಯ ಹಾಗೂ ಹೊರರಾಜ್ಯಗಳಿಂದಲೂ ದೇವಿ ದರ್ಶನಕ್ಕೆ ಬರುತ್ತಿದ್ದಾರೆ. ದೇವಸ್ಥಾನಕ್ಕೆ ವಾರ್ಷಿಕವಾಗಿ ನೂರಾರು ಕೋಟಿ ರೂ. ಹಣ ಸಂಗ್ರಹವಾಗುತ್ತಿದೆ. ಈಗ ಹಾಲಿ ಆದಾಯ ಹಂಚಿಕೆ ವಿಚಾರವಾಗಿ ದೇವಸ್ಥಾನದ ಅರ್ಚಕರು ಮತ್ತು ನಿರ್ವಹಣಾ ಸಮಿತಿ ಮಧ್ಯೆ ಉಂಟಾಗಿರುವ ಸಂಘರ್ಷ ತಾರಕಕ್ಕೇರಿದೆ ಎಂದು ಗ್ರಾಮಸ್ಥರು ತಿಳಿಸಿದರು.

ಮುಂದಿನ ದಿನಗಳಲ್ಲಿ ದೇವಸ್ಥಾನದ ಆವರಣದಲ್ಲಿ ವರ್ಗ ಸಂಘರ್ಷ ಉಂಟಾಗುವ ಸಾಧ್ಯತೆ ಇಲ್ಲದಿಲ್ಲ. ಈ ಹಿನ್ನೆಲೆಯಲ್ಲಿ ಸರ್ಕಾರ ಮಧ್ಯಪ್ರವೇಶ ಮಾಡಿ ದೇವಸ್ಥಾನ ಆವರಣದ ಪಾವಿತ್ರ್ಯ ಕಾಪಾಡುವ ನಿಟ್ಟಿನಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

ಗ್ರಾಮಸ್ಥರಾದ ಹು.ಭಾ.ಅಶೋಕ್, ಅನಿಲ್​ಕುಮಾರ್, ಚೂ.ರಾ.ಸತ್ಯನಾರಾಯಣ್, ಸದಾಶಿವ ಗಾಣಿಗ, ಸಿ.ಪಿ.ರಾಘವೇಂದ್ರ, ವಿಶ್ವೇಶ್ವರ, ಚೌಡಪ್ಪ ಚುಟ್ಟಿಕೆರೆ, ನಾರಾಯಣ ಸಿಗಂದೂರು, ಶೇಷಗಿರಿ, ಮೋಹನ್ ಲಿಂಗನಮನೆ, ಕೊಲ್ಲಪ್ಪ ಸಿಗಂದೂರು, ಬಾಲಚಂದ್ರ, ಗಣಪತಿ ಇತರರಿದ್ದರು.