ಸಾಂಸ್ಕೃತಿಕ ವೈಭವದಲ್ಲಿ ಸುಬ್ರಹ್ಮಣ್ಯ ಶ್ರೀಗಳು ಪ್ರವಚನ ನೀಡಿದರು. 
ಜಿಲ್ಲೆ

ಮಕ್ಕಳಲ್ಲಿ ಹೆಚ್ಚಲಿ ಧರ್ಮದ ಆಸಕ್ತಿ : ಸಾಂಸ್ಕೃತಿಕ ವೈಭವದಲ್ಲಿ ಸುಬ್ರಹ್ಮಣ್ಯಶ್ರೀ ವಿಶೇಷ ಪ್ರವಚನ

ಸುಬ್ರಹ್ಮಣ್ಯ: ಮಕ್ಕಳಿಗೆ ಸಂಸ್ಕಾರ, ಧರ್ಮ ಮತ್ತು ಸಂಸ್ಕೃತಿಯ ಮೇಲಿನ ಆಸಕ್ತಿ ಹೆಚ್ಚಿಸಬೇಕು. ಆಧುನಿಕ ಯುಗದಲ್ಲಿ ಎಳವೆಯಲ್ಲಿಯೇ ಉತ್ತಮ ಗುಣ ನಡತೆಗೆ ಧರ್ಮ ಸಂಸ್ಕಾರಗಳ ಜ್ಞಾನ ಅವಶ್ಯಕ. ನಿರಂತರ ಭಗವಂತನ ಸ್ಮರಣೆ ಮಾಡಿದರೆ ಕಷ್ಟ ನಷ್ಟವಾಗುತ್ತದೆ. ದಿನದ ಕೆಲ ಸಮಯವನ್ನು ಭಗವಂತನ ಸ್ಮರಣೆಗೆ ಮೀಸಲಿಡಬೇಕು ಎಂಬುದು ಹಿರಿಯರು ಕೊಟ್ಟ ಸಂದೇಶ. ಅದರಂತೆ ನಾವು ಬದುಕಬೇಕು. ಭಗವಂತನ ಸ್ಮರಣೆಯಿಂದ ನಮ್ಮ ಬದುಕು ಉದ್ಧಾರವಾಗುತ್ತದೆ ಎಂದು ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಹೇಳಿದರು.

ಸುಬ್ರಹ್ಮಣ್ಯ ಮಠದ ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ ಅವರ 28ನೇ ಚಾತುರ್ಮಾಸ್ಯ ವ್ರತದ ಪ್ರಯುಕ್ತ ಶ್ರೀ ಮಠದ ದಶಾವತಾರ ಮಂಟದಲ್ಲಿ ನಡೆಯುತ್ತಿರುವ ಸಾಂಸ್ಕೃತಿಕ ವೈಭವದಲ್ಲಿ ಮರೆಯಾಗುತ್ತಿರುವ ಹರಿಕಥಾ ಸತ್ಸಂಗ ವಿಷಯದ ಬಗ್ಗೆ ಶ್ರೀಗಳು ಪ್ರವಚನ ನೀಡಿದರು.

ಕೀರ್ತನೆಕಾರ ಡಾ.ಎಸ್.ಪಿ.ಗುರುದಾಸ್ ಮಂಗಳೂರು ಅವರಿಂದ ಶ್ರೀ ರಾಮ ಗುಣಧಾಮ ಹರಿಕಥಾ ಸತ್ಸಂಗ ನಡೆಯಿತು.

ಕೀರ್ತನೆಕಾರ ಡಾ.ಎಸ್.ಪಿ.ಗುರುದಾಸ್ ಮಂಗಳೂರು ಅವರಿಂದ ಶ್ರೀರಾಮ ಗುಣಧಾಮ ಹರಿಕಥಾ ಸತ್ಸಂಗ ನಡೆಯಿತು. ಇವರಿಗೆ ಹಿಮ್ಮೇಳದಲ್ಲಿ ಎಂ.ರಮೇಶ್ ಹೆಬ್ಬಾರ್ ಮಂಗಳೂರು, ಸುಹಾಸ್ ಹೆಬ್ಬಾರ್ ಪುತ್ತೂರು ಸಹಕರಿಸಿದರು. ಕಾರ್ಯಕ್ರಮದ ಕೊನೆಯಲ್ಲಿ ಶ್ರೀಗಳು ಕಲಾವಿದರಿಗೆ ಫಲ ಮಂತ್ರಾಕ್ಷತೆ ನೀಡಿ ಹರಸಿದರು. ಮಠದ ದಿವಾನ ಸುದರ್ಶನ ಜೋಯಿಸ, ಸಾಂಸ್ಕೃತಿಕ ವೈಭವದ ಸಂಘಟಕ ಕಲಾವಿದ ಕೆ.ಯಜ್ಞೇಶ್ ಆಚಾರ್, ಪ್ರಮುಖರಾದ ಸರ್ವೇಶ್ವರ ಕೇಕುಣ್ಣಾಯ, ಎ.ವೆಂಕಟ್ರಾಜ್, ಶ್ರೀಕೃಷ್ಣ ಶರ್ಮ ಉಪಸ್ಥಿತರಿದ್ದರು.

ಹರಿಕಥೆಯಂತಹ ಕಥೆಗಳನ್ನು ಕೇಳುವುದು ಕಡಿಮೆಯಾಗುತ್ತಿದೆ. ಹಾಗಾಗಿ ಸಮಾಜಕ್ಕೆ ಒಂದು ಅಭದ್ರತೆ ಇದೆ. ಹಿಂದುಗಳಿಗೆ ಧರ್ಮದ ಮೇಲೆ ಆಸಕ್ತಿ ಕಡಿಮೆಯಾಗುತ್ತಾ ಬಂದಿದೆ. ಅಲ್ಲದೆ ಒಗ್ಗಟ್ಟು ಕ್ಷೀಣಿಸುತ್ತಿದೆ. ಇದು ಮುಂದೆ ಅಪತ್ತಿಗೂ ಕಾರಣವಾಗಬಹುದು. ಆದುದರಿಂದ ಎಚ್ಚರಿಕೆ ಅತ್ಯಗತ್ಯ. - ಶ್ರೀ ವಿದ್ಯಾಪ್ರಸನ್ನ ತೀರ್ಥ ಸ್ವಾಮೀಜಿ, ಸುಬ್ರಹ್ಮಣ್ಯ ಮಠ