ಜಿಲ್ಲೆ

ಪ್ರತಿಷ್ಠಾಪನಾ ಹುಣ್ಣಿಮೆ ಮಹೋತ್ಸವ, ನಜರು ಕಾಣಿಕೆ : ಮೂಲ್ಕಿ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಸಡಗರ

ಸೌಮ್ಯ ಆರ್

ಮೂಲ್ಕಿ: ಮೂಲ್ಕಿ ಸೀಮೆಯ ಒಳಲಂಕೆ ಶ್ರೀ ವೆಂಕಟರಮಣ ದೇವಸ್ಥಾನದಲ್ಲಿ ಶ್ರೀ ದೇವರ ಪ್ರತಿಷ್ಠಾಪನಾ ಹುಣ್ಣಿಮೆ ಮಹೋತ್ಸವ ವಿಜೃಂಭಣೆಯಿಂದ ಭಾನುವಾರ ನಡೆಯಿತು.

ಧಾರ್ಮಿಕ ಕಾರ್ಯಕ್ರಮಗಳ ಪ್ರಾತಃಕಾಲ ಮೂಲ್ಕಿ ಪೇಟೆಯ ಹತ್ತು ಸಮಸ್ತರಿಂದ ಶ್ರೀ ದೇವರಿಗೆ ನಜರು ಕಾಣಿಕೆ ನಡೆಯಿತು.

ಕಾಶೀ ಮಠಾಧೀಶರಾದ ಶ್ರೀಮತ್ ಸಂಯಮೀಂದ್ರ ತೀರ್ಥ ಸ್ವಾಮೀಜಿ ಆಗಮಿಸಿದ ಬಳಿಕ ಅವರಿಗೆ ಸ್ವಾಗತ, ಶ್ರೀ ದೇವರ ಭೇಟಿ, ದೇವಳದ ಪರ್ಯಾಯ ಅರ್ಚಕರು, ಆಡಳಿತ ಮಂಡಳಿ ಹಾಗೂ ಮೂಲ್ಕಿ ಪೇಟೆ ಹತ್ತು ಸಮಸ್ತರಿಂದ ಶ್ರೀಗಳಿಗೆ ಪಾದಪೂಜೆ ನಡೆಯಿತು. ಬಳಿಕ ಶ್ರೀಗಳ ಉಪಸ್ಥಿತಿಯಲ್ಲಿ ಮಹಾ ಪ್ರಾರ್ಥನೆ, ಶ್ರೀ ಉಗ್ರ ನರಸಿಂಹ ದೇವರಿಗೆ ಶ್ರೀಗಳಿಂದ ಪಂಚಾಮೃತ ಅಭಿಷೇಕ, ಸೀಯಾಳ ಅಭಿಷೇಕ, ಕನಕಾಭಿಷೇಕ, ಗಂಗಾ ಭಾಗೀರಥಿ ಅಭಿಷೇಕ ನಡೆಯಿತು.

ಸಂಜೆ 6.30ಕ್ಕೆ ಮಹಾಪೂಜೆ, ಮಹಾ ನೈವೇದ್ಯ, ಮಂಗಳಾರತಿ, ಭೂರಿ ಸಮಾರಾಧನೆ, ರಾತ್ರಿ ಪೂಜೆ, ದೀಪಾರಾಧನೆ, ರಥೋತ್ಸವ, ಸ್ವರ್ಣ ಗರುಡೋತ್ಸವ, ಚಂದ್ರಮಂಡಲ ಉತ್ಸವ, ವಸಂತ ಪೂಜೆ ನಡೆಯಿತು. ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರು, ಲಕ್ಷ ಸಂಖ್ಯೆಯಲ್ಲಿ ಭಕ್ತರು ಉಪಸ್ಥಿತರಿದ್ದರು.