ಜಿಲ್ಲೆ

ಕಾಶಿಯಲ್ಲಿ ಶ್ರೀಸಿದ್ಧಾಂತ ಶಿಖಾಮಣಿ ಸಪ್ತಾಹ ಪಾರಾಯಣ; ದಾಖಲೆ ಬರೆದ ಗ್ರಾಮೀಣ ಮಹಿಳೆಯರು

ವಾರಾಣಸಿ : ಶ್ರೀಸಿದ್ಧಾಂತ ಶಿಖಾಮಣಿ ಧರ್ಮಗ್ರಂಥದ ಸ್ವಾಧ್ಯಾಯ ಮತ್ತು ಪಾರಾಯಣದಲ್ಲಿ ಮಹಿಳೆಯರೇ ಮುಂಚೂಣಿಯಲ್ಲಿದ್ದು, ಕಾಶಿಯಲ್ಲಿ ಸಪ್ತಾಹ ಪರ್ಯಂತ ಪಾರಾಯಣ ಮಾಡುವ ಮೂಲಕ ಕರ್ನಾಟಕದ ನೂರಾರು ಮಹಿಳೆಯರು ಹೊಸ ದಾಖಲೆ ನಿರ್ಮಿಸಿದ್ದಾರೆ ಎಂದು ಕಾಶೀ ಪೀಠದ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಹೇಳಿದ್ದಾರೆ.

ಕಾಶಿ ಜಂಗಮವಾಡಿ ಮಠದಲ್ಲಿ ಸಪ್ತಾಹ ಪರ್ಯಂತರ ನಡೆದು ಶ್ರೀ ಸಿದ್ಧಾಂತ ಶಿಖಾಮಣಿ ಪಾರಾಯಣ ಕಾರ್ಯಕ್ರಮದ ಮಂಗಳ ಮಹೋತ್ಸವದಲ್ಲಿ ಆಶೀರ್ವಚನ ನೀಡಿದರು.

ಧಾರವಾಡದ ಕವಿತಾ ಗುರುಸಿದ್ದಯ್ಯ ಹಿರೇಮಠ ಬೆಂಗಳೂರಿನ ಟಿ.ಎಸ್. ಇಂದುಕಲಾ ಈರ್ವರ ಮಾರ್ಗದರ್ಶನದಲ್ಲಿ ಶ್ರೀಸಿದ್ಧಾಂತ ಶಿಖಾಮಣಿಯ ಪಾರಾಯಣವನ್ನು ಕಲಿತಿರುವ ಹುಬ್ಬಳ್ಳಿ, ಧಾರವಾಡ, ಹಾವೇರಿ, ಗೋವಾ ಮತ್ತು ಬೆಂಗಳೂರು ಭಾಗಗಳ ಸುಮಾರು 300ಕ್ಕೂ ಹೆಚ್ಚು ಮಹಿಳೆಯರು ಕಾಶಿ ಮತ್ತು ಪ್ರಯಾಗದ ಗಂಗಾ ನದಿ ತೀರದಲ್ಲಿ ಪಾರಾಯಣವನ್ನು ಮಾಡಿ ಹೊಸ ದಾಖಲೆ ಬರೆದಿದ್ದಾರೆ. ಕರ್ನಾಟಕ, ಮಹಾರಾಷ್ಟ್ರ ಮತ್ತು ತೆಲಂಗಾಣಾ ಪ್ರಾಂತ್ಯಗಳಲ್ಲಿ ಶ್ರೀ ಸಿದ್ಧಾಂತ ಶಿಖಾಮಣಿಯ ಪಾರಾಯಣವನ್ನು ಮಾಡುವ ಮಹಿಳೆಯರ ಸಂಖ್ಯೆಯು ದಿನೇ ದಿನೇ ಹೆಚ್ಚುತ್ತಿರುವುದಕ್ಕೆ ಜಗದ್ಗುರುಗಳು ಸಂತೋಷವನ್ನು ವ್ಯಕ್ತಪಡಿಸಿದರು.

ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದ ಕಾಶೀ ವಿಶ್ವವಿದ್ಯಾಲಯದ ವಸಂತಕನ್ಯಾ ಮಹಾವಿದ್ಯಾಲಯದ ನಿವೃತ್ತ ಸಂಸ್ಕೃತ ಪ್ರಾಧ್ಯಾಪಕಿ ಕಮಲಾ ಪಾಂಡೆ ಮಾತನಾಡಿ, ಸಂಸ್ಕೃತವನ್ನು ಕಲಿಯದೇ ಇರುವ ಗ್ರಾಮೀಣ ಭಾಗದ ಗೃಹಿಣಿಯರು ಶ್ರೀ ಸಿದ್ಧಾಂತ ಶಿಖಾಮಣಿ ಶ್ಲೋಕಗಳನ್ನು ಸಸ್ವರ ಶುದ್ಧ ಪಾಠವನ್ನು ಹೇಳುತ್ತಿರುವುದು ಪ್ರಶಂಸನೀಯ ಎಂದು ಹೇಳಿದರು.