ಜಿಲ್ಲೆ

7ರಂದು ಕಲ್ಲಡ್ಕಕ್ಕೆ ಮೋಹನ್ ಭಾಗವತ್ : ಶ್ರೀರಾಮ ವಿದ್ಯಾಕೇಂದ್ರ ವಾರ್ಷಿಕ ಕ್ರೀಡೋತ್ಸವ: ಡಾ.ಪ್ರಭಾಕರ ಭಟ್ ಕಲ್ಲಡ್ಕ ಮಾಹಿತಿ

ಬಂಟ್ವಾಳ: ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ ವಾರ್ಷಿಕ ಕ್ರೀಡೋತ್ಸವ ಡಿ.7ರಂದು ಶನಿವಾರ ಸಂಜೆ ನಡೆಯಲಿದ್ದು, ಆರೆಸ್ಸೆಸ್ ಸರಸಂಘ ಚಾಲಕ್ ಡಾ.ಮೋಹನ್‌ಜೀ ಭಾಗವತ್ ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ ಎಂದು ವಿದ್ಯಾಕೇಂದ್ರದ ಸ್ಥಾಪಕ ಕಾರ್ಯದರ್ಶಿ, ಪುತ್ತೂರು ವಿವೇಕಾನಂದ ವಿದ್ಯಾವರ್ಧಕ ಸಂಘದ ಅಧ್ಯಕ್ಷ ಡಾ.ಪ್ರಭಾಕರ ಭಟ್ ಕಲ್ಲಡ್ಕ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮೋಹನ್‌ಜೀ ಭಾಗವತ್ ಅವರಿಗೆ ಝಡ್‌ಪ್ಲಸ್ ಪ್ಲಸ್ ಭದ್ರತೆಯ ಹಿನ್ನ್ನೆಲೆಯಲ್ಲಿ ಈ ವರ್ಷದ ಕ್ರೀಡೋತ್ಸವದ ಸಮಯವನ್ನು ಸ್ವಲ್ಪ ಮೊಟಕುಗೊಳಿಸಿದ್ದು ಸಂಜೆ 6 ಗಂಟೆಯಿಂದ 8 ಗಂಟೆಯವರೆಗೆ ಒಂದೂವರೆ ಗಂಟೆಗಳ ಕಾಲ ನಡೆಯಲಿದೆ. ಮೋಹನ್ ಜೀ ಭಾಗವತ್ ಡಿ.6ರಂದು ಸಂಜೆ ಮಂಗಳೂರಿಗೆ ಆಗಮಿಸಲಿದ್ದಾರೆ. ಡಿ.7ರಂದು ಸಂಜೆ 4.15ಕ್ಕೆ ಮಂಗಳೂರಿನ ಸಂಘನಿಕೇತನದಿಂದ ಹೊರಟು ಸುಮಾರು ಮೂರು ಗಂಟೆಗಳಷ್ಟು ಹೊತ್ತು ನಮ್ಮ ಜತೆ ಇರಲಿದ್ದಾರೆ. ಸಂಘದ ಹಿರಿಯ ವ್ಯಕ್ತಿಯೋರ್ವರು ಗ್ರಾಮೀಣ ಭಾಗದ ಶಾಲೆಯೊಂದರ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಪ್ರಥಮ. ಸಂಘ ಸ್ಥಾಪನೆಯಾಗಿ 100ನೇ ವರ್ಷಕ್ಕೆ ಪದಾರ್ಪಣೆ ಮಾಡುತ್ತಿರುವ ಸಂದರ್ಭ ಸರಸಂಘ ಚಾಲಕರು ಶಾಲೆಗೆ ಭೇಟಿ ನೀಡುತ್ತಿರುವುದು ವಿಶೇಷ ಎಂದರು.

ಖ್ಯಾತ ಉದ್ಯಮಿಗಳಾದ ಅಜಿತ್ ಕುಮಾರ್ ಎಸ್.ಜೈನ್ ಮುಂಬೈ, ಬಿ.ನಾರಾಯಣ್ ಮುಂಬೈ, ಮನೋಜ್ ಕುಮಾರ್ ನಾಸಿಕ್, ರಾಧೇಶ್ಯಾಮ್ ಶ್ರೀವಲ್ಲಭ ಹೇಡ ಬೆಳಗಾವಿ, ಮನೋಜ್ ಕೋಟಕ್ ಕಿಶೋರ್ ಭಾಯ್, ಮನೀಶ್ ಜೋಷಿ ಮುಂಬೈ, ಪ್ರಕಾಶ್ ಶೆಟ್ಟಿ ಬಂಜಾರ, ಡಾ.ಸೂರಜ್ ಗೋಪಾಲ್ ಎರ್ಮಾಳ್ ಯುಎಸ್‌ಎ, ಕರುಣಾಕರ ಆರ್.ಶೆಟ್ಟಿ ಯುಎಇ, ನವೀನ್ ಗೋಯೆಲ್ ಹರಿಯಾಣ, ಡಾ.ವಿರಾರ್ ಶಂಕರ್ ಬಿ.ಶೆಟ್ಟಿ, ರವಿ ಕಲ್ಯಾಣ ರೆಡ್ಡಿ ಮತ್ತಿತರರು ಭಾಗವಹಿಸುವರು ಎಂದರು.

ಕ್ರೀಡೋತ್ಸವದ ಅಂಗವಾಗಿ ವಿದ್ಯಾರ್ಥಿಗಳಿಂದ ಶಿಶು ನೃತ್ಯ, ಸಂಚಲನ, ಘೋಷ್ ಪ್ರದರ್ಶನ, ಜಡೆಕೋಲಾಟ, ನಿಯುದ್ಧ, ದೀಪಾರತಿ, ಯೋಗಾಸನ, ಪ್ರಾಥಮಿಕ ಸಾಮೂಹಿಕ, ನೃತ್ಯ ಭಜನೆ, ಮಲ್ಲಕಂಬ, ತಿರುಗುವ ಮಲ್ಲಕಂಬ, ನೃತ್ಯ ವೈವಿಧ್ಯ, ಬೆಂಕಿ ಸಾಹಸ, ಚಕ್ರ ಸಮತೋಲನ, ಕಾಲ್ಚಕ್ರ, ಕೂಪಿಕಾ, ಪ್ರೌಢ ಸಾಮೂಹಿಕ ನಡೆಯಲಿದೆ ಎಂದು ಮಾಹಿತಿ ನೀಡಿದರು.

ಸುದ್ದಿಗೋಷ್ಠಿಯಲ್ಲಿ ವಿದ್ಯಾಸಂಸ್ಥೆಯ ಅಧ್ಯಕ್ಷ ಬಿ.ನಾರಾಯಣ ಸೋಮಯಾಜಿ, ಸಂಚಾಲಕ ವಸಂತ ಮಾಧವ, ಪದವಿ ಕಾಲೇಜಿನ ಪ್ರಾಂಶುಪಾಲ ಕೃಷ್ಣ ಪ್ರಸಾದ್ ಕಾಯರ್‌ಕಟ್ಟೆ, ವಕೀಲ ಪ್ರಸಾದ್ ಕುಮಾರ್ ಭಾಗವಹಿಸಿದ್ದರು.

ಮೂರೂವರೆ ದಶಕಗಳ ಹಿನ್ನೆಲೆ

ಕಲ್ಲಡ್ಕ ಶ್ರೀರಾಮ ವಿದ್ಯಾಕೇಂದ್ರದಲ್ಲಿ 2300ರಷ್ಟು ವಿದ್ಯಾರ್ಥಿಗಳು ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ. ಯಾವುದೇ ದಾನ ಶುಲ್ಕವಿಲ್ಲದೆ ಪುಸ್ತಕ ಸಮವಸ್ತ್ರ ಹಾಗೂ ಮಧ್ಯಾಹ್ನದ ಭೋಜನವನ್ನು ಮಕ್ಕಳಿಗೆ ಉಚಿತವಾಗಿ ನೀಡಲಾಗುತ್ತಿದೆ. ಶಾಲೆಯ ಪಠ್ಯದ ಜತೆಗೆ ಸಮಾಜದಲ್ಲಿ ಬೇರೆ ಬೇರೆ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿರುವುದು ಶ್ರೀರಾಮ ವಿದ್ಯಾ ಸಂಸ್ಥೆಯ ವಿಶೇಷತೆ. ಅದರಲ್ಲೂ ಬಹುವಿಶೇಷವಾದ ಕಾರ್ಯಕ್ರಮ ಕ್ರೀಡೋತ್ಸವ. ಮೂರೂವರೆ ದಶಕಗಳಿಂದ ಈ ಕಾರ್ಯಕ್ರಮವನ್ನು ನಡೆಸಿಕೊಂಡು ಬರುತ್ತಿದ್ದು ಹಂತ ಹಂತವಾಗಿ ಬೆಳೆದು ಇಂದು ಪ್ರತಿಷ್ಠಿತ ಕಾರ್ಯಕ್ರಮವಾಗಿ ಗುರುತಿಸಿಕೊಂಡಿದೆ ಎಂದು ಹೇಳಿದರು.