ಜಿಲ್ಲೆ

ಜಿಲ್ಲೆಯ ಸಂಸ್ಕೃತಿ ತಿಳಿದವರಿಂದ ವಿನ್ಯಾಸ : ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ

ಸೌಮ್ಯ ಆರ್

ಬಂಟ್ವಾಳ: ಜಿಲ್ಲೆಯ ಸಂಸ್ಕೃತಿ ಅರಿತಿರುವ ಆರ್ಕಿಟೆಕ್ಟ್‌ನಿಂದ ನಾರಾಯಣ ಗುರು ವೃತ್ತ ವಿನ್ಯಾಸ ತಯಾರಿಸಿ, ಬಳಿಕ ಅಧಿಕಾರಿಗಳು, ಪ್ರಮುಖರು ಚರ್ಚಿಸಿ ಅಂತಿಮಗೊಳಿಸಬೇಕು ಎಂದು ಸಂಸದ ಕ್ಯಾ.ಬ್ರಿಜೇಶ್ ಚೌಟ ಸೂಚನೆ ನೀಡಿದರು.

ಬಿ.ಸಿ.ರೋಡ್ ಬ್ರಹ್ಮ ಶ್ರೀನಾರಾಯಣ ಗುರು ವೃತ್ತವನ್ನು ಮಾದರಿಯಾಗಿ ಪುನರ್ ನಿರ್ಮಿಸಲು ಸೋಮವಾರ ಬಿ.ಸಿ.ರೋಡ್‌ನಲ್ಲಿ ಆಯೋಜಿಸಲಾದ ಸ್ಥಳೀಯ ಬಿಲ್ಲವ ಮುಖಂಡರು, ಜನಪ್ರತಿನಿಧಿಗಳು ಹಾಗೂ ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳ ಸಭೆಯಲ್ಲಿ ಮಾತನಾಡಿದರು.

ಈ ಸಂಬಂಧ ಬಿಲ್ಲವ ಸಂಘದ ಅಧ್ಯಕ್ಷರ ನೇತೃತ್ವದಲ್ಲಿ ನಾಲ್ಕೈದು ಪ್ರಮುಖರನ್ನೊಳಗೊಂಡ ಸಮಿತಿ ರಚಿಸಬೇಕು. ಯಾವುದೇ ಸಲಹೆ, ಸೂಚನೆಗಳಿದ್ದರೆ ಈ ಸಮಿತಿಗೆ ನೀಡಬೇಕು. ವೃತ್ತ ನಿರ್ಮಾಣದ ಬಳಿಕ ಅದರ ನಿರ್ವಹಣೆ ಬಗ್ಗೆ ಗಮನದಲ್ಲಿರಿಸಿ ಹದಿನೈದು ದಿನದ ಒಳಗಾಗಿ ವೃತ್ತದ ಸುಂದರ ನಕ್ಷೆ ತಯಾರಿಸಬೇಕು ಎಂದರು.

ಬಂಟ್ವಾಳ ಶಾಸಕ ರಾಜೇಶ್ ನೈಾಕ್ ಮಾತನಾಡಿದರು. ಬಿ.ಸಿ.ರೋಡ್‌ನ ಪ್ಲೈಓವರ್‌ನ ಮೇಲೆ ವಿದ್ಯುತ್ ದೀಪ ಅಳವಡಿಸಲು ಸಂಸದರು ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡುವಂತೆ ಬೂಡದ ಮಾಜಿ ಅಧ್ಯಕ್ಷ ಬಿ.ದೇವದಾಸ ಶೆಟ್ಟಿ ಮನವಿ ಮಾಡಿದರು. ಉದ್ಯಮಿ ಪ್ರಕಾಶ್ ಅಂಚನ್, ತಿಮ್ಮಪ್ಪ ಪೂಜಾರಿ, ಮಾಜಿ ಶಾಸಕ ರುಕ್ಮಯ ಪೂಜಾರಿ, ಬೂಡಾ ಅಧ್ಯಕ್ಷ ಬೇಬಿ ಕುಂದರ್, ರಾಜೇಶ್ ಸುವರ್ಣ ಅಭಿಪ್ರಾಯ ವ್ಯಕ್ತಪಡಿಸಿದರು.

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಯೋಜನಾ ನಿರ್ದೇಶಕ ಅಬ್ದುಲ್ ಜಾವೇದ್ ಅಜ್ಮಿ, ಕೆಎನ್‌ಆರ್ ಸಂಸ್ಥೆಯ ಪ್ರಾಜೆಕ್ಟ್ ಮ್ಯಾನೇಜರ್ ಗಳಾದ ಮಹೇಂದ್ರಕುಮಾರ್ ಸಿಂಗ್, ರಘನಾಥ ರೆಡ್ಡಿ ಮಾಹಿತಿ ನೀಡಿದರು.

ಪುರಸಭಾ ಅಧ್ಯಕ್ಷ ವಾಸು ಪೂಜಾರಿ, ಬಿಲ್ಲವ ಸಮಾಜ ಸೇವಾ ಸಂಘದ ತಾಲೂಕು ಅಧ್ಯಕ್ಷ ಸಂಜೀವ ಪೂಜಾರಿ, ಉಪಾಧ್ಯಕ್ಷ ಭುವನೇಶ್ ಪಚ್ಚಿನಡ್ಕ, ಬಂಟ್ವಾಳ ಬಿಜೆಪಿ ಮಂಡಲದ ಅಧ್ಯಕ್ಷ ಚೆನ್ನಪ್ಪ ಕೋಟ್ಯಾನ್ ಉಪಸ್ಥಿತರಿದ್ದರು. ಕಿಯೋನಿಕ್ಸ್ ಮಾಜಿ ಅಧ್ಯಕ್ಷ ಹರಿಕೃಷ್ಣ ಬಂಟ್ವಾಳ ಪ್ರಸ್ತಾವನೆಗೈದರು. ಬಂಟ್ವಾಳ ಯುವವಾಹಿನಿ ಅಧ್ಯಕ್ಷ ದಿನೇಶ್ ಸುವರ್ಣ ರಾಯಿ ಸ್ವಾಗತಿಸಿದರು.

ಎಲ್ಲರ ಗಮನಸೆಳೆಯುವ ರೀತಿಯಲ್ಲಿ ವೃತ್ತ ನಿರ್ಮಾಣವಾಗಬೇಕು. ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಡಿಸೆಂಬರ್‌ನೊಳಗಾಗಿ ವೃತ್ತದ ಕಾಮಗಾರಿ ಪೂರ್ಣಗೊಳಿಸುವ ದೆಸೆಯಲ್ಲಿ ಪ್ರಯತ್ನಿಸಬೇಕು. - ರಾಜೇಶ್ ನೈಾಕ್, ಬಂಟ್ವಾಳ ಶಾಸಕ