ಜಿಲ್ಲೆ

ಸುಳ್ಯ ನಪಂ ಮುಂಭಾಗದ ಕಸ ತೆರವಿಗೆ ವೇಗ : 60 ಟನ್‌ಗೂ ಅಧಿಕ ಕಸ ಸಾಗಾಟ : ಇನ್ನೂ ಉಳಿದಿದೆ ತ್ಯಾಜ್ಯ ರಾಶಿ

ವಿಜಯವಾಣಿ ಸುದ್ದಿಜಾಲ ಸುಳ್ಯ

ಸುಳ್ಯ ನಗರ ಪಂಚಾಯಿತಿ ಮುಂಭಾಗದ ಕಟ್ಟಡದಲ್ಲಿ ಶೇಖರಿಸಿಟ್ಟು ದುರ್ನಾತ ಬೀರುತ್ತಿದ್ದ ಕಸ ಸಾಗಾಟಕ್ಕೆ ವೇಗ ನೀಡಲಾಗಿದೆ. ಸುಮಾರು 12 ಲೋಡ್‌ಗಳಲ್ಲಿ ಈಗಾಗಲೇ ಕಸವನ್ನು ಸಾಗಾಟ ಮಾಡಲಾಗಿದೆ. 60 ಟನ್‌ಗಿಂತಲೂ ಅಧಿಕ ಕಸವನ್ನು ಈಗಾಗಲೇ ಸಾಗಾಟ ಮಾಡಲಾಗಿದ್ದು, ಇನ್ನೂ ಸುಮಾರು 30 ಟನ್‌ಗಿಂತಲೂ ಅಧಿಕ ಕಸ ಸಂಗ್ರಹ ಇದೆ. ಇದನ್ನು ಕೂಡ ಕೂಡಲೇ ತೆರವು ಮಾಡಲು ಯೋಜನೆ ರೂಪಿಸಲಾಗಿದೆ. ಗ್ರೀನ್ ಸ್ಪೇಸ್ ಸೊಲ್ಯೂಷನ್ ಕಂಪನಿ ಕಸವನ್ನು ಮೈಸೂರು ಹಾಗೂ ಬೆಳಗಾವಿಗೆ ಸಾಗಿಸುತ್ತಾರೆ. ಮರುಬಳಕೆಯ ಕಸವನ್ನು ಬೇರ್ಪಡಿಸಿ ಉಳಿದವುಗಳನ್ನು ಸಿಮೆಂಟ್ ಫ್ಯಾಕ್ಟರಿಗೆ ಕೊಡಲಾಗುತ್ತದೆ.

ನಗರ ಪಂಚಾಯಿತಿ ಅಧ್ಯಕ್ಷೆ ಶಶಿಕಲಾ ನೀರಬಿದಿರೆ, ಉಪಾಧ್ಯಕ್ಷ ಬುದ್ಧ ನಾಯ್ಕ, ಸದಸ್ಯರಾದ, ಕೆ.ಎಸ್.ಉಮ್ಮರ್, ಶೀಲಾ ಅರುಣ ಕುರುಂಜಿ, ಶಿಲ್ಪಾ ಸುದೇವ್, ಸುಶೀಲಾ ಜಿನ್ನಪ್ಪ, ಬಿಜೆಪಿ ನಗರ ಮಹಾ ಶಕ್ತಿಕೇಂದ್ರ ಅಧ್ಯಕ್ಷ ಕುಸುಮಾಧರ ಎ.ಟಿ., ಪ್ರಧಾನ ಕಾರ್ಯದರ್ಶಿ ನಾರಾಯಣ ಶಾಂತಿನಗರ, ಪ್ರಮುಖರಾದ ಸುಪ್ರೀತ್ ಮೋಂಟಡ್ಕ, ಅಬೂಬಕ್ಕರ್ ಅಡ್ಕಾರ್, ಗ್ರೀನ್ ಸ್ಪೇಸ್ ಸೊಲ್ಯೂಷನ್ ಕಂಪನಿಯ ಹನೀಫ್ ಮತ್ತಿತರರಿದ್ದರು.

ಕಸದ ರಾಶಿ ತುಂಬಿ ವಿವಾದ

ಕೆಲವು ವರ್ಷಗಳ ಹಿಂದೆ ಇದೇ ರೀತಿ ನಪಂ ಮುಂಭಾಗದ ಕಟ್ಟಡದಲ್ಲಿ ಮತ್ತು ಸುತ್ತ ಕಸ ತುಂಬಿಟ್ಟದ್ದು ವಿವಾದ ಸೃಷ್ಟಿಸಿತ್ತು. ಬಳಿಕ ಆಗಿನ ನಪಂ ಅಧ್ಯಕ್ಷ ವಿನಯ ಕುಮಾರ್ ಕಂದಡ್ಕ ನೇತೃತ್ವದಲ್ಲಿ ಕಸವನ್ನು ತೆರವು ಮಾಡಲಾಗಿತ್ತು. ಬಳಿಕ ಆ ಆಡಳಿತ ಮಂಡಳಿ ಅವಧಿ ಮುಗಿದ ಬಳಿಕ ಕಲ್ಚರ್ಪೆಯಲ್ಲಿ ಸ್ಥಳದ ಕೊರತೆ ಮತ್ತು ಬರ್ನಿಂಗ್ ಮಷಿನ್‌ನಲ್ಲಿ ನಿರೀಕ್ಷಿತ ಪ್ರಮಾಣದಲ್ಲಿ ಕಸ ಉರಿಯದ ಕಾರಣ ಮತ್ತೆ ನಪಂ ಎದುರಿನ ಕಟ್ಟಡದಲ್ಲಿ ಕಸ ತುಂಬಿಡಲು ಆರಂಭಿಸಿತ್ತು. ಇಲ್ಲಿ ಮತ್ತೆ ಕಸದ ರಾಶಿ ತುಂಬಿ ವಿವಾದಕ್ಕೆ ಕಾರಣವಾಗಿತ್ತು. ಇದೀಗ ಕಸ ಸಾಗಿಸಲು ನಪಂ ಮುಂದಾಗಿದೆ. ಶುಕ್ರವಾರ ದಿನ ಎರಡು ಬೃಹತ್ ಲಾರಿಗಳಲ್ಲಿ ಕಸವನ್ನು ಸಾಗಾಟ ಮಾಡಲಾಯಿತು.