ಕಾನಹೊಸಹಳ್ಳಿ: ಗಣೇಶ ಹಬ್ಬವನ್ನು ಎಲ್ಲರೂ ಶಾಂತಿ ಮತ್ತು ಸೌಹಾರ್ದದಿಂದ ಆಚರಿಸಬೇಕು. ಅಹಿತಕರ ಘಟನೆಗಳು ನಡೆಯದಂತೆ ಮುಂಜಾಗ್ರತೆ ವಹಿಸಬೇಕು. ಇಲ್ಲವಾದರೆ ಕಾನೂನು ಕ್ರಮಕೈಗೊಳ್ಳಲಾಗುವುದು ಎಂದು ಕೂಡ್ಲಿಗಿ ಡಿವೈಎಸ್ಪಿ ಮಲ್ಲೇಶ್ ದೊಡ್ಡಮನಿ ತಿಳಿಸಿದರು.
ಪಟ್ಟಣದಲ್ಲಿ ಶುಕ್ರವಾರ ಆಯೋಜಿಸಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು. ಗಣೇಶಮೂರ್ತಿ ಪ್ರತಿಷ್ಠಾಪನೆ ಮತ್ತು ವಿಸರ್ಜನೆ ಸಂದರ್ಭದಲ್ಲಿ ಸರ್ಕಾರದ ಮಾರ್ಗಸೂಚಿ ಪಾಲಿಸಿ. ನಿಗದಿತ ಸಮಯದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸಬೇಕು. ವಿಶೇಷ ಭಾಷಣಕಾರರನ್ನು ಕರೆಸಿದರೆ ಮೊದಲು ನಮಗೆ ತಿಳಿಸಬೇಕು ಎಂದರು.
ಸರ್ಕಾರ ಡಿಜೆ ಬ್ಯಾನ್ ಮಾಡಿದ್ದು, ಅನುಮತಿ ಕೊಡಲು ಸಾಧ್ಯವಿಲ್ಲ. ಕಾರ್ಯಕ್ರಮದಲ್ಲಿ ಅಹಿತಕರ ಘಟನೆಗಳು ನಡೆಯದಂತೆ ಮುತುವರ್ಜಿ ವಹಿಸಬೇಕು. ಕಾನೂನು ಸುವ್ಯವಸ್ಥೆಗೆ ಧಕ್ಕೆಯಾಗುವಂತೆ ನಡೆದುಕೊಳ್ಳುವವರ ವಿರುದ್ಧ ಕಠಿಣ ಕ್ರಮಕೈಗೊಳ್ಳಲಾಗುವುದು. ಸರ್ಕಾರದ ನಿಯಮಾವಳಿ ಪಾಲಿಸುವ ಮೂಲಕ ಸಂಭ್ರಮದಿಂದ ಹಬ್ಬ ಆಚರಿಸಬೇಕು ಎಂದರು.
ಸಿಪಿಐ ಟಿ.ದುರುಗಪ್ಪ ಮಾತನಾಡಿ, ಗಣೇಶಮೂರ್ತಿ ಪ್ರತಿಷ್ಠಾಪಿಸುವ ಪ್ರತಿಯೊಂದು ಸಮಿತಿ ಮತ್ತು ಗ್ರಾಮೀಣ ಭಾಗದ ಯುವಕರ ತಂಡ ಕಡ್ಡಾಯವಾಗಿ ಸ್ಥಳೀಯ ಗ್ರಾಪಂ, ಜೆಸ್ಕಾಂ, ಪೊಲೀಸರಿಂದ ಅನುಮತಿ ಪಡೆಯಬೇಕು. ಸಾಂಸ್ಕೃತಿಕ ಕಾರ್ಯಕ್ರಮ ಆಯೋಜನೆ ಹಾಗೂ ಬ್ಯಾನರ್‌ಗಳನ್ನು ಅಳವಡಿಸುವವರು ಮುಂಚಿತವಾಗಿ ಪರವಾನಗಿ ಪಡೆಯಬೇಕು. ಕಾನೂನು ಗೌರವಿಸಿದರೆ ಸಹಕಾರ ನೀಡಲಾಗುವುದು. ಸರ್ಕಾರದ ನಿಯಮ ಮೀರಿದರೆ ಕ್ರಮಕೈಗೊಳ್ಳುವುದು ಖಚಿತ ಎಂದರು.
ಪಿಎಸ್‌ಐ ಸಿದ್ರಾಮ ಬಿದರಾಣಿ, ಗ್ರಾಪಂ ಅಧ್ಯಕ್ಷ ಕೆ.ಜಿ.ಸಿದ್ದನಗೌಡ, ಪ್ರಮುಖರಾದ ವಿಶ್ವನಾಥ, ಎಳ್ಳೆನೀರು ಗಂಗಣ್ಣ, ಅರ್ಯನ್ ಬಾಷಾ, ಚಿಕ್ಕಜೋಗಿಹಳ್ಳಿ ರಹಮತ್, ಕೊಲುಮೆಹಟ್ಟಿ ಸೂರ್ಯಪ್ರಕಾಶ, ಬಣವಿಕಲ್ಲು ಚೌಡೇಶ್, ಶಾಂತನಹಳ್ಳಿ ವೀರಭದ್ರಿ ಇಜಾಜ್ ಆಹ್ಮದ್, ಅಜ್ಜಣ್ಣ, ಮಂಜುನಾಥ, ಆನಂದ, ಮೂಗೇಶ್, ಪ್ರದೀಪ್, ರಾಕೇಶ್, ಸಿದ್ದಾಪುರ ಈಶ್ವರಪ್ಪ ಇದ್ದರು.